ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಯಲ್ಲಿ ಭಕ್ತಸಾಗರ – 18 ತಾಸು ಕ್ಯೂ ನಿಂತ್ರೂ ಅಯ್ಯಪ್ಪ ದರ್ಶನವಿಲ್ಲ!
ವಿಶ್ವದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪಸ್ವಾಮಿಗೆ ಕೋಟ್ಯಂತರ ಭಕ್ತರಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಸ್ವಾಮಿ ದರ್ಶನಕ್ಕೆ ಬರ್ತಾರೆ. ಆದ್ರೀಗ ಭಕ್ತರ ಸುನಾಮಿಗೆ ಸಿಲುಕಿ ಶಬರಿಮಲೆಯಲ್ಲಿ ಕೋಲಾಹಲ ಉಂಟಾಗುತ್ತಿದೆ. ಲಕ್ಷಾಂತರ ಜನ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದು ಎಲ್ಲೆಲ್ಲೂ ಜನಜಂಗುಳಿಯೇ ಕಾಣ್ತಿದೆ. ತಲೆಮೇಲಿ ಇರುಮುಡಿ ಹೊತ್ತು ಹೆಜ್ಜೆ ಹಾಕುತ್ತಿದ್ದಾರೆ. ಕಿಲೋಮೀಟರ್ ಗಟ್ಟಲೆ ವಾಹನಗಳ ಕ್ಯೂ, ಸ್ವಾಮಿ ದರ್ಶನಕ್ಕೆ ದಿನಗಟ್ಟಲೆ ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಭಕ್ತರನ್ನ ನಿಯಂತ್ರಿಸಲಾಗದೆ ಪೊಲೀಸರು ಹೈರಾಣಾಗಿದ್ದಾರೆ. ಶಬರಿಮಲೆಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇರಳ ಸರ್ಕಾರ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇದನ್ನೂ ಓದಿ: ಶಾಲೆಗೆ ಎಂಟ್ರಿಕೊಟ್ಟ ಕರಡಿ.. – ಶಿಕ್ಷಕರ ಕೊಠಡಿಗೆ ನುಗ್ಗಿ ಆಹಾರ ಪದಾರ್ಥ ತಿಂದ ಜಾಂಬವಂತ!
ಹೌದು, ಎಲ್ಲಾ ವ್ಯವಸ್ಥೆ ಸೂಕ್ತವಾಗಿದೆ, ಭಕ್ತರಿಗೆ ಏನೂ ತೊಂದರೆ ಇಲ್ಲ ಎಂಬ ಕೇರಳ ಸಿಎಂ ಹೇಳಿಕೆ ಹೊರತಾಗಿಯೂ ಪರಿಸ್ಥಿತಿ ಹಾಗಿಲ್ಲ. ದಿನದಿಂದ ದಿನಕ್ಕೆ ಶಬರಿಮಲೆಯಲ್ಲಿ ಭಕ್ತ ಸಾಗರವೇ ಹರಿದುಬರುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಅವ್ಯವಸ್ಥೆ ಈಗಲೂ ಮುಂದುವರೆದಿದೆ. 18 ಗಂಟೆ ಸರದಿಯಲ್ಲಿ ನಿಂತು ಹೋದರೂ ದೇವರ ಮುಖವನ್ನು ನೋಡುವ ಮುನ್ನವೇ ನಮ್ಮನ್ನು ಎಳೆದು ಹೊರಗೆ ಹಾಕಲಾಗುತ್ತಿದೆ ಎಂದು ಭಕ್ತರು ದೂರಿದ್ದಾರೆ.
ನಮ್ಮ ಬಸ್, ನಿಂತ ಜಾಗದಿಂದ ಗಂಟೆಗಟ್ಟಲೆ ಕದಲುತ್ತಿಲ್ಲ. ಭಕ್ತರ ನಿರ್ವಹಣೆಯಲ್ಲಿ ಸರ್ಕಾರ ಪೂರ್ಣ ವಿಫಲವಾಗಿದೆ. ಬೆಟ್ಟದ ಬುಡದವರೆಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲೇ ಮೇಲೇರಬೇಕು. ಅಷ್ಟಾದ ಮೇಲೂ ಸರದಿ ಉದ್ದ ಇರುವ ಕಾರಣ ಮಕ್ಕಳು, ವೃದ್ಧ ಭಕ್ತರು ಕೂಡಾ ಅರಣ್ಯದಲ್ಲಿ ಮಲಗಿ, ಅಲ್ಲೇ ನದಿಯಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಆಗಿ ಬೆಟ್ಟ ಏರಿದ ಬಳಿಕ ತಗಡಿನ ಶೆಡ್‌ನೊಳಗೆ ಮತ್ತೆ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕು. ಇಷ್ಟೆಲ್ಲಾ ಸಾಹಸ ಮಾಡಿ ದೇಗುಲದ 18 ಮೆಟ್ಟಿಲೇರಿ ದೇವರ ದರ್ಶನ ಮಾಡೋಣವೆಂದರೆ ಅಲ್ಲಿ ನಿಂತಿರುವ ಭದ್ರತಾ ಸಿಬ್ಬಂದಿ ದೇವರನ್ನೂ ನೋಡಲು ಬಿಡದೆ ಎಳೆದು ಹಾಕುತ್ತಾರೆ ಎಂದು ಹಲವು ಭಕ್ತರು ಗೋಳು ತೋಡಿಕೊಂಡಿದ್ದಾರೆ.