ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಯಲ್ಲಿ ಭಕ್ತಸಾಗರ – ನೂಕುನುಗ್ಗಲಿನ ನಡುವೆ ಭಕ್ತರಿಗೆ ಸಾಲು ಸಾಲು ಸಮಸ್ಯೆ
ಸ್ವಾಮಿಯೇ ಶರಣಂ ಅಯ್ಯಪ್ಪ. ಇದೊಂದು ಪದ ಕೇಳಿದ್ರೆ ನರನಾಡಿಗಳಲ್ಲೂ ಭಕ್ತಿಯ ಸಂಚಲನವಾಗುತ್ತೆ. ಇದೊಂದು ಶಬ್ಧ ಕಿವಿಗೆ ಬಿದ್ದರೆ ಅಂತರಂಗದ ಆಧ್ಯಾತ್ಮವೂ ಎಚ್ಚರಗೊಳ್ಳುತ್ತೆ. ಇದೊಂದು ಹೆಸರು ಕೇಳಿದ್ರೆ ಮನಸ್ಸು ಪುಟಿದೇಳುತ್ತೆ. ಯಾಕಂದ್ರೆ ಶಬರಿಮಲೆಯ ಅಯ್ಯಪ್ಪಸ್ವಾಮಿಗೆ ಇರುವ ಶಕ್ತಿಯೇ ಅಂಥಾದ್ದು. ಮಣಿಕಂಠನ ಮಹಿಮೆಯೇ ಅಂಥಾದ್ದು. ವಿಶ್ವದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪಸ್ವಾಮಿಗೆ ಕೋಟ್ಯಂತರ ಭಕ್ತರಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಸ್ವಾಮಿ ದರ್ಶನಕ್ಕೆ ಬರ್ತಾರೆ. ಆದ್ರೀಗ ಭಕ್ತರ ಸುನಾಮಿಗೆ ಸಿಲುಕಿ ಶಬರಿಮಲೆಯಲ್ಲಿ ಕೋಲಾಹಲ ಉಂಟಾಗುತ್ತಿದೆ. ಲಕ್ಷಾಂತರ ಜನ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದು ಎಲ್ಲೆಲ್ಲೂ ಜನಜಂಗುಳಿಯೇ ಕಾಣ್ತಿದೆ. ತಲೆಮೇಲಿ ಇರುಮುಡಿ ಹೊತ್ತು ಹೆಜ್ಜೆ ಹಾಕುತ್ತಿದ್ದಾರೆ. ಕಿಲೋಮೀಟರ್ ಗಟ್ಟಲೆ ವಾಹನಗಳ ಕ್ಯೂ, ಸ್ವಾಮಿ ದರ್ಶನಕ್ಕೆ ದಿನಗಟ್ಟಲೆ ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಭಕ್ತರನ್ನ ನಿಯಂತ್ರಿಸಲಾಗದೆ ಪೊಲೀಸರು ಹೈರಾಣಾಗಿದ್ದಾರೆ. ಶಬರಿಮಲೆಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇರಳ ಸರ್ಕಾರಕ್ಕೂ ತಲೆಬಿಸಿಯಾಗಿದೆ. ಅಧಿಕಾರಿಗಳ ಜೊತೆ ದಿಢೀರ್ ಸಭೆ ನಡೆಸಲಾಗಿದೆ.
ಇದನ್ನು ಓದಿ : ಕೃಷ್ಣ ಜನ್ಮಭೂಮಿ ವಿವಾದ – ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ
ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಾಲಯ. ಪರ್ವತಗಳು ಮತ್ತು ದಟ್ಟವಾದ ಅರಣ್ಯದ ನಡುವೆ ಇರುವ ಈ ದೇಗುಲ ಕೇರಳದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳ. ಪ್ರತೀವರ್ಷ ನವೆಂಬರ್ ತಿಂಗಳಿನಲ್ಲಿ ಶಬರಿಮಲೆ ಸೀಸನ್ ಆರಂಭವಾಗುತ್ತದೆ. ಆದ್ರೆ ಈ ವರ್ಷ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ನಿತ್ಯ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸುತ್ತಿದ್ದು ನೂಕು ನುಗ್ಗಲು ಉಂಟಾಗುತ್ತಿದೆ. ದಿನವಿಡೀ ಕಾದರೂ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ ಸಿಗ್ತಿಲ್ಲ. ಇತ್ತೀಚೆಗಷ್ಟೇ ಶಬರಿಮಲೆಯ ಅಯ್ಯಪ್ಪ ದೇಗುಲದ ದರ್ಶನಕ್ಕೆ ಬಂದಿದ್ದ 12 ವರ್ಷದ ಬಾಲಕಿ ಪಾದಯಾತ್ರೆ ವೇಳೆ ಕುಸಿದು ಬಿದ್ದು, ಸಾವನ್ನಪ್ಪಿದ್ದಾಳೆ. ತಮಿಳುನಾಡು ಮೂಲದ ಪದ್ಮಶ್ರೀ ಬೆಟ್ಟದ ಮೇಲಿನ ದೇಗುಲಕ್ಕೆ ಪಾದಯಾತ್ರೆ ಮಾಡುತ್ತಿರುವಾಗ ಅಪ್ಪಾಚಿಮೇಡು ಎಂಬಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಳು.
ನವೆಂಬರ್ 16 ರಿಂದ ವಾರ್ಷಿಕ 41 ದಿನಗಳ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಭಾರೀ ಜನದಟ್ಟಣೆ ಉಂಟಾಗಿದೆ. ಸನ್ನಿಧಾನದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಡೈನಾಮಿಕ್ ಕ್ಯೂ ನಿಯಂತ್ರಣ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ದೇಗುಲದಲ್ಲಿ ಮೂರ್ನಾಲ್ಕು ದಿನಗಳಿಂದ ಭಕ್ತಸಾಗರವೇ ಹರಿದು ಬರ್ತಿದ್ದು, 18 ಗಂಟೆಗಳಿಗೂ ಹೆಚ್ಚು ಕಾಲ ಯಾತ್ರಾರ್ಥಿಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದರೆ ಅದಕ್ಕೆ ತಕ್ಕಂತೆ ವ್ಯವಸ್ಥೆಗಳು ಇರಬೇಕು. ಆದ್ರೆ ಭಕ್ತರು ಬಾಯಿ ಬಿಟ್ಟು ಕೇಳಿದ್ರೂ ಕುಡಿಯೋ ನೀರು ಸಿಗ್ತಿಲ್ಲ. ಮೂಲಭೂತ ಸಮಸ್ಯೆಗಳಿಂದಾಗಿ ಭಕ್ತರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಎರಿಮಲೆಗೆ 25 ಕಿಲೋಮೀಟರ್ ಇರುವಾಗಲೇ ರಸ್ತೆಗಳನ್ನ ಬ್ಲಾಕ್ ಮಾಡಿದ್ದಾರೆ. ಯಾಕಂದ್ರೆ ಪಂಪದಿಂದ ಶಬರಿಮಲೆಗೆ ಹೋಗಿರುವ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಸನ್ನಿಧಾನದಲ್ಲೇ ಇರೋದ್ರಿಂದ ಹೊಸ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ನೀಲಕ್ಕಲ್ ಪಾರ್ಕಿಂಗ್ ತಲುಪಲು 10 ಕಿಲೋ ಮೀಟರ್ ದೂರದಿಂದಲೇ ವಾಹನಗಳನ್ನ ತಡೆ ಹಿಡಿಯಲಾಗಿದೆ. ಇನ್ನೂ ಮೂರು ದಿನ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ. ಭಕ್ತರಿಗೆ ಶೀಘ್ರದಲ್ಲೇ ದರ್ಶನದ ವ್ಯವಸ್ಥೆ ಮಾಡಿ ಕೊಡುವುದಾಗಿ ದೇಗುಲದ ಆಡಳಿತ ಮಂಡಳಿ ಹೇಳಿದೆ. ಭಕ್ತರನ್ನ ನಿಯಂತ್ರಣ ಮಾಡಲಾಗದೆ ಪೊಲೀಸರೂ ಹೈರಾಣಾಗಿದ್ದಾರೆ. ಯಾತ್ರಾರ್ಥಿಗಳ ಸಂಖ್ಯೆಯನ್ನು ನಿರ್ಬಂಧಿಸಲು ಸ್ಪಾಟ್ ಬುಕ್ಕಿಂಗ್ ಅನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದ್ರಿಂದಾಗಿ ಪೊಲೀಸರು ಮತ್ತು ಟಿಡಿಬಿ ನಡುವೆ ಜಗಳವಾಗುತ್ತಿದೆ. ಈಗಾಗಲೇ ಶಬರಿಮಲೆ ಯಾತ್ರೆ ಕೈಗೊಂಡಿರುವ ನೂರಾರು ಭಕ್ತರು ಅಲ್ಲಿನ ಜನಸಂದಣಿ ಮತ್ತು ನೂಕುನುಗ್ಗಲು ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.