ರೈತ ಮಕ್ಕಳಿಗೆ ಮದುವೆ ಮಾಡಿಸು ಮಾದಪ್ಪ – ಪಾದಯಾತ್ರೆ ಮೂಲಕ ಮಾದಯ್ಯನಿಗೆ ಭಕ್ತರ ಮನವಿ

ರೈತ ಮಕ್ಕಳಿಗೆ ಮದುವೆ ಮಾಡಿಸು ಮಾದಪ್ಪ – ಪಾದಯಾತ್ರೆ ಮೂಲಕ ಮಾದಯ್ಯನಿಗೆ ಭಕ್ತರ ಮನವಿ

ಮಹಾಶಿವರಾತ್ರಿಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ ಮಾದಪ್ಪನ ಸನ್ನಿಧಾನಕ್ಕೆ ರಾಜ್ಯದ ನಾನ ಭಾಗಗಳಿಂದ ಪಾದಯಾತ್ರೆ ಮೂಲಕ ಭಕ್ತರು ಬರುತ್ತಿದ್ದಾರೆ. ಇವರಲ್ಲಿ ರೈತರು ಕೂಡಾ ಸೇರಿದ್ದಾರೆ. ರೈತ ಯುವಕರಿಗೆ ಹೆಣ್ಣು ಕೊಡಲು ಪೋಷಕರು ತಯಾರಿಲ್ಲ. ಹೀಗಾಗಿ ಮಾದಪ್ಪನೇ ನೀನೇ ವಧುವನ್ನು ಕರುಣಿಸು ಎಂದು ಮಂಡ್ಯ ಭಾಗದ ರೈತರು ಪಾದಯಾತ್ರೆ ಹೊರಟಿದ್ದಾರೆ. ಉಘೇ ಮಾಯ್ಕಾರ ಉಘೇ ಮಾದಪ್ಪ… ಎಂದು ಪಾದಯಾತ್ರೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿಎಂ, ಡಿಸಿಎಂ ಭೇಟಿ ಮಾಡಿದ ಬಿಗ್‌ಬಾಸ್ ವಿನ್ನರ್– ಕಪ್ ಸಮೇತ ಫೋಟೋಗೆ ಪೋಸ್ ಕೊಟ್ಟ ಕಾರ್ತಿಕ್

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತಾಳ ಬೆಟ್ಟದ ಬಳಿ ಊರಿಗೆ ಊರೇ ಪಾದಯಾತ್ರೆ ಮೂಲಕ ಮಾದಪ್ಪನ ಸನ್ನಿಧಾನಕ್ಕೆ ತೆರಳುತ್ತಿದ್ದಾರೆ. ಶಿವರಾತ್ರಿ ಹಬ್ಬ ಬೇರೆ ಮುಂದಿನ ತಿಂಗಳು ಇರುವ ಕಾರಣ ಈಗಿನಿಂದಲೇ ಭಕ್ತಾಧಿಗಳು ರಾಜ್ಯದ ನಾನಾ ಭಾಗಗಳಿಂದ ಇಷ್ಟಾರ್ಥ ನೆರವೇರಲೆಂದು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ. ಆದರೆ, ಪಾದಯಾತ್ರೆ ನಡೆಸುತ್ತಿರೋದು ಯಾಕೆ ಎಂದು ಗೊತ್ತಾದರೆ ನಿಮಗೂ ಅಚ್ಚರಿಯಾಗುತ್ತದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮಕ್ಕೆ ಗ್ರಾಮವೇ ಪಾದಯಾತ್ರೆಯಲ್ಲಿ ಭಾಗಿಯಾಗಿದೆ. ಇದಕ್ಕೆ ಕಾರಣ ರೈತರ ಮಕ್ಕಳಿಗೆ ಕನ್ಯೆ ಸಿಗಲಿ ಅನ್ನೋ ಪ್ರಾರ್ಥನೆ. ಈ ಗ್ರಾಮದ ರೈತ ಮಹಿಳೆಯರು ತಮ್ಮ ಗಂಡು ಮಕ್ಕಳಿಗೆ ಒಳ್ಳೆ ಕನ್ಯೆ ಸಿಗಲಿ ಅಂತ ಹರಕೆ ಕಟ್ಟಿ ಪಾದಯಾತ್ರೆ ನಡೆಸುತ್ತಿದ್ದಾರೆ.

ರೈತರು ಅನ್ನೋ ಕಾರಣಕ್ಕೆ ಯಾರು ಕೂಡಾ ಹುಡುಗಿ ಕೊಡಲು ಮುಂದೆ ಬರುತ್ತಿಲ್ಲ ಅನ್ನೋದು ಈ ಗ್ರಾಮಸ್ಥರ ಅಳಲು. ಹೀಗಾಗಿ ಉಘೇ ಉಘೇ ಮಾದಪ್ಪ ಅಂತಾ ಮಹದೇಶ್ವರನಿಗೆ ಹರಕೆ ಕಟ್ಟಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ.

ಬೆಂಗಳೂರಿನ ಕೆಂಗೇರಿ ನಿವಾಸಿಗಳು ತಮ್ಗೆ ಒಳ್ಳೆದಾಗ್ಲಿ ಕುಟುಂಬಕ್ಕೆ ಶುಭವಾಗ್ಲಿ ಅಂತ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಕೆಲವರು ಅವರ ತಾತ ಮುತ್ತಾತ ಕಾಲದಿಂದ ಪಾದಯಾತ್ರೆ ನಡೆಸುತ್ತಿದ್ದು ಈಗಿನವರೂ ಸಹ ಪಾದಯಾತ್ರೆಯನ್ನ ಮುಂದುವರೆಸುತ್ತಿದ್ದಾರೆ. ಮಹಾ ಶಿವರಾತ್ರಿಯೆಂದು ಮಾದಪ್ಪನ ಸನ್ನಿಧಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಾಗೂ ರಥೋತ್ಸವ ಕಾರ್ಯಕ್ರಮವಿದೆ. ಈ ವೇಳೆ ಮಾದಪ್ಪನ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರು ಪ್ರತಿ ವರ್ಷ ದೀಪಾವಳಿ, ಯುಗಾದಿ ಹಾಗೂ ಶಿವರಾತ್ರಿ ಸಂದರ್ಭದಲ್ಲಿ ಪಾದಯಾತ್ರೆ ನಡೆಸಿ ಮಾದಪ್ಪನ ಕೃಪೆಗೆ ಪಾತ್ರರಾಗುತ್ತಾರೆ.

Sulekha