50 ಲೀ. ಸಾಮರ್ಥ್ಯದ ಜಡ್ಜ್ ಕಾರಿಗೆ 57 ಲೀ. ಪೆಟ್ರೋಲ್ ತುಂಬಿ ಮೋಸ – ಪೆಟ್ರೋಲ್ ಬಂಕ್ ಸೀಲ್..!
ಪೆಟ್ರೋಲ್ ಬಂಕ್ಗಳಲ್ಲಿ ವಾಹನ ಸವಾರರನ್ನ ಯಾಮಾರಿಸೋದು ಹೊಸತೇನಲ್ಲ. ದಿನ ಬೆಳಗಾದ್ರೆ ಇಂತಹ ಸುದ್ದಿಗಳನ್ನ ನೋಡುತ್ತಲೇ ಇರುತ್ತೇವೆ. ಕೆಲವೊಮ್ಮೆ ಸವಾರರು ಮೋಸ ಹೋದ್ರೆ ಇನ್ನೂ ಕೆಲವು ಸಲ ಸಿಬ್ಬಂದಿಯ ಕಳ್ಳಾಟ ಬಯಲಾಗಿಬಿಡುತ್ತೆ. ಇಂಥಾ ಟೈಮಲ್ಲಿ ಪೆಟ್ರೋಲ್ ಬಂಕ್ನವರು ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ತಾರೆ. ಆದ್ರೆ ಇಲ್ಲೊಂದು ಕಡೆ ಪೆಟ್ರೋಲ್ ಬಂಕ್ನಲ್ಲಿ ಇದೇ ಥರ ಗೋಲ್ಮಾಲ್ ಮಾಡೋಕೆ ಹೋಗಿ ಜಡ್ಜ್ ಕೈಯಲ್ಲೇ ತಗ್ಲಾಕಿಕೊಂಡಿದ್ದಾರೆ. ಪರಿಣಾಮ ಬಂಕ್ ಸೀಲ್ ಮಾಡಲಾಗಿದೆ.
ಇದನ್ನೂ ಓದಿ : ಪಾಪಿ ಪಾಕಿಸ್ತಾನಕ್ಕೆ ಬೆಲೆ ಏರಿಕೆ ಬಿಸಿ – ರಾತ್ರೋರಾತ್ರಿ 1 ಲೀ. ಪೆಟ್ರೋಲ್ ಗೆ 22. 20 ರೂ ಹೆಚ್ಚಳ!
ಮಧ್ಯ ಪ್ರದೇಶದ ಭೋಪಾಲ್ ಎಂಬಲ್ಲಿ ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ ಹೈಕೋರ್ಟ್ ಜಡ್ಜ್ ವಾಹನಕ್ಕೆ ಮೋಸ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡ ಪೆಟ್ರೋಲ್ ಬಂಕ್ ಬಳಿಕ ಸೀಲ್ ಆಗಿದೆ ಎಂದು ತಿಳಿದು ಬಂದಿದೆ.
ಹೈಕೋರ್ಟ್ ಜಡ್ಜ್ ಒಬ್ಬರ ಕಾರು ಇಂಧನ ತುಂಬಿಸುವುದಕ್ಕಾಗಿ ಜಬಲ್ಪುರದ ಪೆಟ್ರೋಲ್ ಬಂಕ್ವೊಂದಕ್ಕೆ ತೆರಳಿತ್ತು. ಕಾರಿನ ಹಿಂಬದಿ ಸೀಟಿನಲ್ಲಿ ಜಡ್ಜ್ ಕುಳಿತಿದ್ದು, ಚಾಲಕ ಕಾರಿನ ಟ್ಯಾಂಕ್ ಫುಲ್ ಮಾಡುವಂತೆ ಬಂಕ್ ಸಿಬ್ಬಂದಿ ಬಳಿ ಕೇಳಿದ್ದ. ಅಸಲಿಗೆ ಆ ಕಾರಿನ ಪೆಟ್ರೋಲ್ ಟ್ಯಾಂಕ್ನ ಒಟ್ಟು ಸಾಮರ್ಥ್ಯವೇ 50 ಲೀಟರ್ಗಳು. ಆದರೆ ಪೆಟ್ರೋಲ್ ಬಂಕ್ನ ಸಿಬ್ಬಂದಿಗೆ ಇದು ತಿಳಿದಿರಲಿಲ್ಲ. ಹೀಗಾಗಿ ಇತರರನ್ನು ವಂಚಿಸುವಂತೆ 50 ಲೀಟರ್ನ ಟ್ಯಾಂಕ್ನಲ್ಲಿ ಸುಮಾರು 57 ಲೀಟರ್ನಷ್ಟು ಇಂಧನ ತುಂಬಿಸಿರೋದಾಗಿ ಹೇಳಿದ್ದಾರೆ.
ಸಿಬ್ಬಂದಿ ಮಾತು ಕೇಳಿ ಶಾಕ್ ಆದ ಜಡ್ಜ್ ಕೂಡಲೇ ಬಿಲ್ ತರಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಬಿಲ್ನಲ್ಲೂ ಕೂಡ 57 ಲೀಟರ್ ಇಂಧನ ತುಂಬಿರುವುದಾಗಿ ಎಂಟ್ರಿಯಾಗಿತ್ತು. ಕೂಡಲೇ ಕಾರಿನಿಂದ ಕೆಳಗಿಳಿದ ಜಡ್ಜ್ ನನ್ನ ಕಾರಿನ ಇಂಧನ ಟ್ಯಾಂಕ್ನ ಸಾಮರ್ಥ್ಯವೇ 50 ಲೀಟರ್. ಅದರಲ್ಲಿ ಹೆಚ್ಚುವರಿ ಏಳು ಲೀಟರ್ನಷ್ಟು ಇಂಧನ ತುಂಬಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಖುದ್ದು ಜಡ್ಜ್ ಅವರೇ ಪ್ರಾಥಮಿಕ ತನಿಖೆ ನಡೆಸಿದ ನಂತರ ಹೆಚ್ಚಿನ ತನಿಖೆಗಾಗಿ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಕರೆಸಿದ್ದಾರೆ. ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸಿ ಆ ಪೆಟ್ರೋಲ್ ಬಂಕ್ ಗೋಲ್ಮಾಲ್ ಮಾಡಿರುವುದನ್ನು ಖಾತರಿ ಪಡಿಸಿಕೊಂಡು ಆ ಪೆಟ್ರೋಲ್ ಬಂಕನ್ನು ಸೀಲ್ ಮಾಡಿದ್ದಾರೆ.
ಇನ್ನು ಆ ಪ್ರದೇಶದ ಎಲ್ಲಾ ಪೆಟ್ರೋಲ್ ಬಂಕ್ಗಳನ್ನ ಅಲ್ಲಿನ ಜಿಲ್ಲಾ ಆಡಳಿತವು ನೇಮಕ ಮಾಡುವ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ ನಂತರವಷ್ಟೇ ಈಗ ವಂಚನೆ ಮಾಡಿರುವ ಪೆಟ್ರೋಲ್ ಬಂಕನ್ನು ಎಂದಿನಂತೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಈ ರೀತಿ ಸವಾರರನ್ನ ವಂಚಿಸೋದು ಇದೇ ಮೊದಲೇನಲ್ಲ. ಇದಕ್ಕಿಂತ ಹಿಂದೆಯೂ ಈ ರೀತಿಯಾದಂತಹ ಹಲವಾರು ಪ್ರಕರಣಗಳು ದಾಖಲಾಗಿವೆ. ಸಾಮಾನ್ಯವಾಗಿ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಲು ಬರುವ ಗ್ರಾಹಕರಿಗೆ ಈ ರೀತಿಯ ಒಂದು ಮೋಸಕ್ಕೆ ತಾವು ಒಳಗಾಗುತ್ತಿದ್ದೇವೆ ಎಂದು ತಿಳಿಯುವುದೇ ಇಲ್ಲ