ಜಾನಕಿಯ ಜನ್ಮಸ್ಥಳ ವಿವಾದ – ಆದಿಪುರುಷ್ ಸಿನಿಮಾ ಪ್ರದರ್ಶನ ತಡೆಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ
ವಿವಾದಗಳ ನಡುವೆಯೂ ಮೊದಲ ದಿನ ₹150 ಕೋಟಿ ಕಲೆಕ್ಷನ್

ಜಾನಕಿಯ ಜನ್ಮಸ್ಥಳ ವಿವಾದ – ಆದಿಪುರುಷ್ ಸಿನಿಮಾ ಪ್ರದರ್ಶನ ತಡೆಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ  ವಿವಾದಗಳ ನಡುವೆಯೂ ಮೊದಲ ದಿನ ₹150 ಕೋಟಿ ಕಲೆಕ್ಷನ್

ಆದಿಪುರುಷ್. ಟಾಲಿವುಡ್ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಜೂನ್ 16ರಂದು ತೆರೆಗೆ ಅಪ್ಪಳಿಸಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಇದರ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೀಗ ಸಿನಿಮಾದ ಪ್ರದರ್ಶನವನ್ನೇ ನಿಲ್ಲಿಸುವಂತೆ ದೆಹಲಿ ಹೈ ಕೋರ್ಟ್ ಗೆ ಹಿಂದೂಪರ ಸಂಘಟನೆಗಳು ಅರ್ಜಿ ಸಲ್ಲಿಕೆ ಮಾಡಿವೆ.

ಜೂನ್ 16ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿರುವ ಆದಿಪುರುಷ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ದೆಹಲಿ (Delhi) ಹೈಕೋರ್ಟಿಗೆ (High Court) ಹಿಂದೂಪರ ಸಂಘಟನೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ. ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗುವಂತಹ ಸಾಕಷ್ಟು ಅಂಶಗಳು ಇವೆ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಸಂಘಟನೆಗಳು ಮನವಿ ಮಾಡಿಕೊಂಡಿವೆ. ರಾಮಾಯಣವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ. ಅದು ಹಿಂದೂಗಳಿಗೆ ಮತ್ತು ಹಿಂದೂ (Hindu) ದೇವರುಗಳಿಗೆ ಮಾಡಿರುವ ಅಪಮಾನ. ಈ ಹಿಂದೆಯೇ ಅನೇಕ ಅಂಶಗಳನ್ನು ಚಿತ್ರತಂಡದ ಗಮನಕ್ಕೆ ತರಲಾಗಿತ್ತು. ಎಲ್ಲವನ್ನೂ ಬದಲಾವಣೆ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ, ಯಾವುದೇ ಬದಲಾವಣೆಯನ್ನು ಮಾಡದೇ ಹಳೆ ಸಿನಿಮಾವನ್ನೇ ಬಿಡುಗಡೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಮನೆಗೆ ಐಷಾರಾಮಿ ಕಾರು – ದುಬಾರಿ ಕಾರಿನ ಬೆಲೆ ನಾಲ್ಕು ಕೋಟಿ ರೂಪಾಯಿ..!

ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush ) ಸಿನಿಮಾ ಎಲ್ಲ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದ್ದರೆ ನೇಪಾಳದಲ್ಲಿ ಅದು ಬಿಡುಗಡೆಯಾಗಿಲ್ಲ. ಚಿತ್ರದ ಒಂದು ಡೈಲಾಗ್ ಬಗ್ಗೆ ಕಠ್ಮಂಡು (Kathmandu)  ಮೇಯರ್ ಗರಂ ಆಗಿದ್ದು, ವಿವಾದಿತ  ಆ ಡೈಲಾಗ್ ತಗೆಯದಿದ್ದರೆ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಮೂರು ದಿನ ಗಡುವು ಕೂಡ ನೀಡಿದ್ದಾರೆ. ಈ ಸಿನಿಮಾದಲ್ಲಿ ‘ಸೀತಾ ಭಾರತದ ಮಗಳು..’ ಎಂದು ಡೈಲಾಗ್ ಹೇಳಿಸಲಾಗಿದೆ. ಈ ಮಾತಿಗೆ ಕಠ್ಮುಂಡು ಮೇಯರ್ (Mayor) ಆಕ್ಷೇಪನೆಯನ್ನು ಎತ್ತಿದ್ದಾರೆ. ರಾಮಾಯಣದ ಪ್ರಕಾರ ಸೀತೆಯು ನೇಪಾಳದ ಜಾನಕ್ ಪುರದಲ್ಲಿ ಜನಿಸಿದ್ದಾರೆ. ಇಲ್ಲಿಗೆ ಶ್ರೀರಾಮ ಬಂದು ಸೀತೆಯನ್ನು ಮದುವೆ ಆಗಿರುವ ಉಲ್ಲೇಖ ಕೂಡ ಇದೆ. ಆದರೆ, ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಮತ್ತು ಸುಳ್ಳು ಹೇಳಲಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ನೇಪಾಳದಲ್ಲಿ ಈ ಸಿನಿಮಾದ ಸೆನ್ಸಾರ್ ಅನ್ನು ತಡೆಹಿಡಿಯಲಾಗಿದೆ. ಆದರೆ, ಉಳಿದ ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆ. ಎಲ್ಲೆಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆಯೋ ಅಲ್ಲಲ್ಲಿ, ಈ ಡೈಲಾಗ್ ತಗೆಯಲೇಬೇಕು ಎಂದು ಮೇಯರ್ ಒತ್ತಾಯಿಸಿದ್ದಾರೆ. ಸಿನಿಮಾವನ್ನು ನೇಪಾಳದಲ್ಲಿ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರಭಾಸ್ ಹಾಗೂ ಕೃತಿ ಸನೋನ್​ ನಟನೆಯ ‘ಆದಿಪುರುಷ್’ ಸಿನಿಮಾ (Adipurush Movie) ಬಗ್ಗೆ ಕೇಳಿ ಬಂದ ಟೀಕೆಗಳು ಒಂದೆರಡಲ್ಲ. ಈ ಚಿತ್ರಕ್ಕೆ ಸಾಕಷ್ಟು ನೆಗೆಟಿವ್ ಕಮೆಂಟ್​ಗಳು ಬಂದವು. ವಿಮರ್ಶೆಯಲ್ಲಿ ಮಿಶ್ರಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರ ಐಎಂಡಿಬಿಯಲ್ಲಿ ಕಡಿಮೆ ರೇಟಿಂಗ್ ಪಡೆದಿದೆ. ಆದರೆ, ಚಿತ್ರದ ಬಾಕ್ಸ್ ಆಫೀಸ್​ ಮೇಲೆ ಇದೆಲ್ಲ ಅಷ್ಟಾಗಿ ಪ್ರಭಾವ ಬೀರಲೇ ಇಲ್ಲ. ಮೊದಲ ದಿನ ‘ಆದಿಪುರುಷ್’ ಬಾಕ್ಸ್ ಆಫೀಸ್​ನಲ್ಲಿ   150 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ ಎಂದು ವರದಿ ಆಗಿದೆ. ಈ ಮೂಲಕ ಒಳ್ಳೆಯ ಓಪನಿಂಗ್ ಪಡೆದಿದೆ.

ಜೂನ್ 16ರಂದು ರಿಲೀಸ್ ಆದ ಈ ಚಿತ್ರ ವೀಕೆಂಡ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ‘ಆದಿಪುರುಷ್’ ರಿಲೀಸ್ ಆಗಿದೆ. ಭಾರತದಲ್ಲಿ ಈ ಚಿತ್ರ 110-112 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ವರ್ಷನ್​ನ ಒಂದರಲ್ಲೇ ಈ ಚಿತ್ರದ ಗಳಿಕೆ 36-38 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಈ ಚಿತ್ರ 150 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಏರಿಕೆ ಆಗಬಹುದು.

suddiyaana