ನೇಪಾಳ ಬೆಂಕಿ ಆರುವ ಮುನ್ನವೇ ಪೆರು, ಫಿಲಿಪೈನ್ಸ್ ನಲ್ಲೂ ಹೋರಾಟ – Gen-Z ಗಳ ಕಿಚ್ಚು ಹೊಸ ಅಲೆ ಎಬ್ಬಿಸಿತಾ?

ನೇಪಾಳ ಬೆಂಕಿ ಆರುವ ಮುನ್ನವೇ ಪೆರು, ಫಿಲಿಪೈನ್ಸ್ ನಲ್ಲೂ ಹೋರಾಟ – Gen-Z ಗಳ ಕಿಚ್ಚು ಹೊಸ ಅಲೆ ಎಬ್ಬಿಸಿತಾ?

ದೇಶಗಳಲ್ಲಿನ ಭ್ರಷ್ಟಾಚಾರ ಮಿತಿ ಮೀರಿದ್ದರ ಪರಿಣಾಮ ಮತ್ತು ಯುವಜನತೆಯ ಒಗ್ಗಟ್ಟಿನ ಪರಿಣಾಮದಿಂದಾಗಿ ದಂಗೆಗಳು ಜಾಸ್ತಿಯಾಗುತ್ತಿವೆ. ಈಗಾಗಲೇ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ಎಲ್ಲವೂ ಅಸ್ತವ್ಯಸ್ಥವಾಗಿವೆ. ಇದೀಗ ಪೆರು, ಫಿಲಿಪೈನ್ಸ್ ನಲ್ಲೂ ಅರಾಜಕತೆ ಜಾಸ್ತಿಯಾಗುತ್ತೆ. ಇಲ್ಲೂ ಕೂಡ ಸರ್ಕಾರ ವಿರುದ್ಧದ ಹೋರಾಟ ತೀವ್ರಗೊಳ್ಳುತ್ತಿವೆ.

ಇದನ್ನೂ ಓದಿ : ಹೈಕೋರ್ಟ್‌ನಲ್ಲಿ ನಾಳೆ ಜಾತಿಗಣತಿ ಭವಿಷ್ಯ – ಗಣತಿ ಮುಂದುವರಿಯುತ್ತಾ ಅಥವಾ ಕೋರ್ಟ್ ತಡೆಯಾಜ್ಞೆ ನೀಡುತ್ತಾ?

ಇತ್ತೀಚೆಗಷ್ಟೇ ನೇಪಾಳ ಹಾಗೂ ಫ್ರ್ಯಾನ್ಸ್​​ನಲ್ಲಿ Gen-Z ಗಳು ಸರ್ಕಾರ ವಿರುದ್ಧ ರೊಚ್ಚಿಗೆದ್ದು ಸರ್ಕಾರಗಳೇ ಪತನವಾಗಿವೆ. ಪ್ರಧಾನ ಮಂತ್ರಿ ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡಿದ್ದರು. ಸರ್ಕಾರವನ್ನೇ ಬದಲಾಯಿಸಲು ಈ Gen-Z ಗಳು ಯಶಸ್ವಿಯಾಗಿದ್ದರು. ಆದ್ರೆ ಸರ್ಕಾರಗಳ ವಿರುದ್ದ ಈ Gen-Z ಗಳ ಹೋರಾಟ ಈ ಎರಡು ದೇಶಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಫಿಲಿಪೈನ್ಸ್ ಹಾಗೂ ಪೆರು ರಾಷ್ಟ್ರಗಳಲ್ಲಿಯೂ ಆಡಳಿತರೂಢ ಸರ್ಕಾರದ ವಿರುದ್ಧ ಅಲ್ಲಿನ Gen-Z ಗಳು ಹೋರಾಟ ನಡೆಸುತ್ತಿದ್ದಾರೆ. ನೇಪಾಳ ಹಾಗೂ ಫ್ರ್ಯಾನ್ಸ್​​ ಬಳಿಕ ಫಿಲಿಪಿನೋ ನಾಗರಿಕರು ಭ್ರಷ್ಟಾಚಾರ ವಿರೋಧಿ ಹೋರಾಟದ ಭಾಗವಾಗಿ ರಾಜಧಾನಿ ಮನಿಲಾದ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳು ಪ್ರವಾಹ ನಿಯಂತ್ರಣ ಮೂಲಸೌಕರ್ಯ ಯೋಜನೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಆರೋಪಗಳ ವಿರುದ್ಧ ಎನ್ನಲಾಗುತ್ತಿದ್ದು, ಪ್ರತಿಭಟನಾಕಾರರು ಎಪಿಫಾನಿಯೊ ಡಿ ಲಾಸ್ ಸ್ಯಾಂಟೋಸ್ ಅವೆನ್ಯೂ ಭಾಗದಲ್ಲಿ ಜಮಾಯಿಸಿ, ರಾಷ್ಟ್ರಧ್ವಜಗಳನ್ನು ಹಾರಿಸಿ ಪ್ರತಿಭಟಿಸುತ್ತಿದ್ದಾರೆ. ಏತನ್ಮಧ್ಯೆ, Gen-Z ಹೋರಾಟಗಾರರು ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಮುಖಕ್ಕೆ ಮುಖವಾಡ ಹಾಕಿದ್ದ ಕೆಲವು ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ವೇಳೆ 20 ಮಂದಿ ಅಪ್ರಾಪ್ತರು ಸೇರಿದಂತೆ ಒಟ್ಟು 72 ಮಂದಿಯನ್ನು ಬಂಧಿಸಲಾಗಿದೆ. ಕನಿಷ್ಠ 39 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆ ಕಂಟ್ರೋಲ್ ಗೆ ತರಲು ಪೊಲೀಸರು ಅಶ್ರುವಾಯು ಗುಂಡುಗಳು ಮತ್ತು ನೀರಿನ ಫಿರಂಗಿಗಳನ್ನು ಬಳಸಿದ್ದಾರೆ. ಕೆಲ ಪ್ರತಿಭಟನಾಕಾರರು ಟ್ರೇಲರ್‌ಗಳಿಗೆ ಬೆಂಕಿ ಹಚ್ಚಿ, ಗ್ಲಾಸ್ ಗಳನ್ನ ಧ್ವಂಸಗೊಳಿಸಿದ್ದಾರೆ. ಹಿಂಸಾತ್ಮಕ ಘಟನೆಗಳ ಪರಿಣಾಮವಾಗಿ ಸ್ಥಳೀಯ ಅಧಿಕಾರಿಗಳು ಶಾಲೆಗಳನ್ನೂ ಮುಚ್ಚಿದರು. ನೇಪಾಳದಂತೆಯೇ ಇದೀಗ ಪೆರುವಿನ ಯುವಕರು ಬೀದಿಗಿಳಿದು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. Gen-Z ಬ್ಯಾನರ್, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಮೀಮ್‌ಗಳು ಮತ್ತು ಸಾಮೂಹಿಕ ಪ್ರತಿಭಟನೆ ಜೋರಾಗುತ್ತಿದೆ.  ಪೆರುವಿನ ಕಾಂಗ್ರೆಸ್ ಇತ್ತೀಚೆಗೆ ಖಾಸಗಿ ಪಿಂಚಣಿ ನಿಧಿಗಳಲ್ಲಿ ಬದಲಾವಣೆಗಳನ್ನು ಮಾಡಿತು, ಇದು ಯುವಜನರು ತಮ್ಮ ಭವಿಷ್ಯದ ಉಳಿತಾಯವನ್ನು ದುರ್ಬಲಗೊಳಿಸುತ್ತದೆ ಎಂದು ಭಯಪಡುತ್ತಾರೆ. ಇದಲ್ಲದೆ, ಹೆಚ್ಚುತ್ತಿರುವ ಅಪರಾಧ ದರಗಳು ಮತ್ತು ಸರ್ಕಾರಿ ಭ್ರಷ್ಟಾಚಾರವು ಯುವಜನರ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಸೋಶಿಯಲ್ ಮೀಡಿಯಾಗಳ ಮೂಲಕ ಅಭಿಯಾನ ಆರಂಭಿಸಿ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ.

Shantha Kumari