ಕೂಗಿದ್ರೆ ಸೊಂಡಿಲು ಎತ್ತಿ ಸಲಾಂ – ರೀಲ್ಸ್ ತುಂಬಾ ದಸರಾ ಆನೆ ಭೀಮನದ್ದೇ ಹವಾ

ಮೈಸೂರು ದಸರಾ ಅನ್ನೋದೇ ಕರುನಾಡಿಗರ ಹೆಮ್ಮೆ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಅಂದ್ರೆ ಜಂಬೂಸವಾರಿ. ನಾಡದೇವಿ ಚಾಮುಂಡೇಶ್ವರಿ ಮೂರ್ತಿಯನ್ನ ಚಿನ್ನದ ಅಂಬಾರಿಯಲ್ಲಿ ಇಟ್ಟು ರಾಜಬೀದಿಯಲ್ಲಿ ಗಜಪಡೆ ಹೆಜ್ಜೆ ಹಾಕುತ್ತಿದ್ರೆ ನೋಡುಗರ ಮೈರೋಮಾಂಚನವಾಗುತ್ತೆ. ದೇವಿಯನ್ನ ಹೊತ್ತು ಸಾಗೋ ಅಭಿಮನ್ಯು ಮೇನ್ ಅಟ್ರ್ಯಾಕ್ಷನ್ ಆಗಿದ್ರೆ ಭೀಮ ಕೂಡ ಅಚ್ಚುಮೆಚ್ಚಿನ ಹೀರೋ. ಭೀಮ ಅಂತಾ ಕೂಗೋ ಜನರ ಸದ್ದಿಗೆ ಸೊಂಡಿಲು ಎತ್ತಿ ರೆಸ್ಪಾನ್ಸ್ ಮಾಡೋ ಅವನ ಗುಣವೇ ಎಲ್ಲರ ಮನಗೆದ್ದಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಆಡಿ ಬಾ ಮಗನೇ ಭೀಮ ಹಾಡಿಗೆ ರೀಲ್ಸ್ ಟ್ರೆಂಡ್ ಕೂಡ ಜೋರಾಗಿದೆ.
ಇದನ್ನೂ ಓದಿ : RCB ರೀ ಎಂಟ್ರಿಗೆ ABD ರೆಡಿ – 2026ರ IPL ವೇಳೆಗೆ ಕಮ್ ಬ್ಯಾಕ್?
ತಾಯಿಯಿಂದ ಬೇರ್ಪಟ್ಟು ಅರಣ್ಯ ಸಿಬ್ಬಂದಿಗೆ ಸಿಕ್ಕಿದ್ದ ಪುಟಾಣಿ!
ನಾಡಹಬ್ಬ ದಸರಾದಲ್ಲಿ ಪ್ರವಾಸಿಗರ ಫೇವರೆಟ್ ಆಗಿರೋ ಭೀಮ 2001ರಲ್ಲಿ ನಾಗರಹೊಳೆ – ಮತ್ತಿಗೋಡು ಅರಣ್ಯ ವಲಯದ ಭೀಮನಕಟ್ಟೆಯಲ್ಲಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿದ್ದ. ಕಾಡಾನೆಯಿಂದ ಬೇರ್ಪಟ್ಟು ಒಂಟಿಯಾಗಿ ಓಡಾಡ್ತಿದ್ದ ಮರಿಯಾನೆಯನ್ನ ರಕ್ಷಣೆ ಮಾಡಲಾಗಿತ್ತು. ಅದೇ ವರ್ಷವೇ ಭೀಮನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 5 ಆನೆಮರಿಗಳು ಸಿಕ್ಕಿದ್ವು. ಬ್ಯಾಡ್ಲಕ್ ಅಂದ್ರೆ ಬೇರೆ ನಾಲ್ಕು ಆನೆ ಮರಿಗಳು ತಾಯಿ ಹಾಲು ಇಲ್ಲದೇ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ವು. ಆದ್ರೆ ಗಟ್ಟಿ ಗುಂಡಿಗೆಯ ಭೀಮ ಮಾತ್ರವೇ ವಿಧಿಗೆ ಸವಾಲು ಹಾಕಿ ಬದುಕಿ ತೋರಿಸಿದ್ದ. ದಿನವೊಂದು ಚೆಂದಕ್ಕೆ ಬೆಳೆದು ಬಿಟ್ಟಿದ್ದ. ಈಗ ಈತನೇ ದಸರೆಯ ಮೇನ್ ಅಟ್ರ್ಯಾಕ್ಷನ್ ಆಗಿದ್ದಾನೆ. ಅಭಿಮನ್ಯು ಬಳಗದ ಜೊತೆ ಮೈಸೂರಿನಲ್ಲಿ ಜಂಬೂಸವಾರಿಗಾಗಿ ತಾಲೀಮು ನಡೆಸ್ತಿದ್ದಾನೆ.
ಅಂಬಾರಿ ಹೊರೋಕೆ ಅಭಿಮನ್ಯುವಿನ ಉತ್ತರಾಧಿಕಾರಿ ಭೀಮ!
ಮತ್ತಿಗೋಡು ಆನೆ ಶಿಬಿರದಲ್ಲಿರೋ ಭೀಮ ಆನೆಗೆ ಸದ್ಯ 25 ವರ್ಷ ವಯಸ್ಸು. ಸದ್ಯ ದಸರೆಗೆ ಬಂದಿರೋ ಎಲ್ಲಾ ಆನೆಗಳಿಗಿಂತ ದಷ್ಟಪುಷ್ಟವಾಗಿ ಬೆಳೆದಿದ್ದಾನೆ. ಅವನನ್ನ ನೋಡಿದ್ರೇನೆ ಒಂದು ಗತ್ತು ಗಾಂಭೀರ್ಯ ಇದೆ. ಮುಖದಲ್ಲಿ ದೈವ ಕಳೆ ಇದೆ. 2.87 ಮೀಟರ್ ಎತ್ತರವಿರುವ ಈ ಭೀಮ 5,000 ಕೆ.ಜಿ. ತೂಕವನ್ನು ಹೊಂದಿದ್ದಾನೆ. ಇನ್ನು ಮುಂದಿನ ದಿನಗಳಲ್ಲಿ ಭೀಮ ಆನೆ ಇದೇ ರೀತಿ ಬಲಿಷ್ಠವಾಗಿ ಬೆಳೆಯುತ್ತಾ ಹೋದಲ್ಲಿ ಮೈಸೂರು ದಸರಾ ಅಂಬಾರಿ ಹೊರುವ ಎಲ್ಲಾ ಗುಣಗಳನ್ನ ಬೆಳೆಸಿಕೊಳ್ತಾನೆ. ಉಳಿದ ಆನೆಗಳೊಂದಿಗೆ, ಕಾವಾಡಿಗಳು ಮತ್ತು ಮಾವುತರೊಂದಿಗೆ ಸೌಮ್ಯವಾಗಿ ನಡೆದುಕೊಳ್ಳೋದ್ರಿಂದ ಭವಿಷ್ಯದ ಕ್ಯಾಪ್ಟನ್ ಅಂತಾನೇ ನೋಡಿಕೊಳ್ಳಲಾಗ್ತಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಅಚ್ಚುಮೆಚ್ಚಿನ ಆನೆಯಾಗಿದ್ದಾನೆ.
ತಿಂಡಿಪೋತನಾಗಿರೋ ಭೀಮ ತೂಕದಲ್ಲಿ ಅಭಿಮನ್ಯುಗಿಂತ ಹೆಚ್ಚು!
ಇನ್ನು ಈ ಭೀಮ ತುಂಟ ಅಷ್ಟೇ ಅಲ್ಲ ಸಿಕ್ಕಾಪಟ್ಟೆ ಫುಡ್ ಪ್ರಿಯ. ಅದ್ರಲ್ಲೂ ಅಂಬಾರಿ ಹೊರುವ ಅಭಿಮನ್ಯುಗಿಂತ ತೂಕದಲ್ಲಿ ಮೀರಿಸಿದ್ದಾನೆ. ಅಭಿಮನ್ಯು ಆನೆ 5,360 ಕೆಜಿ ತೂಕವಿದ್ರೆ ತುಂಟ, ತಿಂಡಿಪೋತ ಭೀಮ 5,465 ಕೆಜಿ ತೂಕ ಇದ್ದಾನೆ. ಇದು ಜಸ್ಟ್ ಸ್ಟಾರ್ಟಿಂಗ್ ನಲ್ಲಿ ಇರೋ ವೇಯ್ಟ್. ಈಗ ಮೈಸೂರದಲ್ಲಿ ಗಜಪಡೆಗೆ ರಾಜಾತಿಥ್ಯ ಸಿಗ್ತಿರೋದ್ರಿಂದ ದಸರೆ ಮುಗಿಸಿ ಹೋಗೋ ಅಷ್ಟ್ರಲ್ಲಿ ಇನ್ನೂ ತೂಕ ಹೆಚ್ಚಿಸಿಕೊಳ್ತಾನೆ. ದಸರಾದಲ್ಲಿ ಭಾಗಿಯಾಗಿರೋ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗ್ತಿದೆ. ಇದಕ್ಕಾಗಿಯೇ 55 ರಿಂದ 60 ಲಕ್ಷ ರೂಪಾಯಿ ವೆಚ್ಚ ಮಾಡಲಾಗ್ತಿದೆ. ಗಂಡಾನೆಗಳಿಗೆ ದಿನಕ್ಕೆ 750 ಕೆಜಿ ಫುಡ್ ಕೊಟ್ರೆ ಹೆಣ್ಣಾನೆಗಳಿಗೆ 450 ಕೆಜಿಯಷ್ಟು ಆಹಾರ ನೀಡಲಾಗ್ತಿದೆ. ಅದ್ರಲ್ಲೂ ಭೀಮ ಅಂತೂ ಎಲ್ರಿಗಿಂತ ಜಾಸ್ತಿನೇ ಬ್ಯಾಟಿಂಗ್ ಮಾಡ್ತಿದ್ದಾನೆ.
ಕಾಡುಪ್ರಾಣಿಗಳ ಕಾರ್ಯಾಚರಣೆಯಲ್ಲಿ ಎತ್ತಿದ ಕೈ.. ದಂತ ಕಟ್!
ಭೀಮ ಅಂದ್ರೆ ಬರೀ ಅಭಿಮಾನಿಗಳಷ್ಟೇ ಅಲ್ಲ. ಅರಣ್ಯ ಇಲಾಖೆಗೂ ಫೇವರೆಟ್. ಕಾಡಾನೆಗಳು ಹಾಗೇ ಹುಲಿ, ಚಿರತೆಗಳ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನ ಬಳಸಿಕೊಳ್ಳೋದು ನಿಮ್ಗೆಲ್ಲಾ ಗೊತ್ತೇ ಇದೆ. ದುರದೃಷ್ಟವಶಾತ್ ಇಂಥಾದ್ದೇ ಆಪರೇಷನ್ ವೇಳೆಯೇ ನಮ್ಮ ನಾಡಿನ ಹೆಮ್ಮೆಯಾಗಿದ್ದ ಅರ್ಜುನನನ್ನ ಕಳೆದುಕೊಂಡಿದ್ವಿ. ಹಾಗೇ ಭೀಮ ಕೂಡ ಇಂಥಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗ್ತಾನೆ. ವಿಷ್ಯ ಅಂದ್ರೆ ನೀವು ಭೀಮನ ದಂತ ತುದಿಯಲ್ಲಿ ಸ್ವಲ್ಪ ಕಟ್ ಆಗಿರೋದನ್ನ ಗಮನಿಸಿರಬಹುದು. ಬಟ್ ದಂತ ಕಟ್ ಮಾಡಿರೋದು ಅರಣ್ಯ ಇಲಾಖೆ ಸಿಬ್ಬಂದಿಯೇ. ವನ್ಯಮೃಗಗಳ ಕಾರ್ಯಾಚರಣೆ ವೇಳೆ ದಂತಗಳು ಶಾರ್ಪ್ ಆಗಿದ್ರೆ ಎದುರಾಳಿ ಆನೆಗೆ ತಿವಿದು ಗಾಯಗಳಾಗೋ ಸಾಧ್ಯತೆ ಇರುತ್ತೆ. ಹೀಗಾಗಿ ಎರಡೂ ದಂತಗಳ ಮುಂದಿನ ಭಾಗದಲ್ಲಿ ಕಟ್ ಮಾಡಲಾಗಿದೆ.
ಜಸ್ಟ್ 25 ವರ್ಷಕ್ಕೆ ಬಲಾಡ್ಯವಾಗಿ ಬೆಳೆದಿರೋ ಅಭಿಮನ್ಯು ಬಳಿಕ ಅಂಬಾರಿ ಹೊರೋ ಎಲ್ಲಾ ಗುಣಗಳಿವೆ. ಜೊತೆಗೆ ಜನರ ಕೂಗಿಗೆ ಸೊಂಡಿಲು ಎತ್ತಿ ರೆಸ್ಪಾನ್ಸ್ ಮಾಡೋದ್ರಿಂದ ಅಭಿಮಾನಿಗಳಿಗೆ ಅಚ್ಚುಮೆಚ್ಚಾಗಿದ್ದಾನೆ. ಮೈಸೂರಿನ ರಾಜಬೀದಿಗಳಲ್ಲಿ ತರಬೇತಿಯಲ್ಲಿರೋ ಭೀಮನನ್ನ ಮಾತಾಡಿಸಿ ಖುಷಿ ಪಡ್ತಿದ್ದಾರೆ.

ನೋಡಿರಿ

