ಧ್ವಜಾರೋಹಣ ನೆರವೇರಿಸಿದ ಸಿಎಂ –  ಕೇಂದ್ರದ ವಿರುದ್ದ ಸಿದ್ದರಾಮಯ್ಯ ಕಿಡಿ

ಧ್ವಜಾರೋಹಣ ನೆರವೇರಿಸಿದ ಸಿಎಂ –  ಕೇಂದ್ರದ ವಿರುದ್ದ ಸಿದ್ದರಾಮಯ್ಯ ಕಿಡಿ

ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಆಂಗವಾಗಿ ಸಿಎಂ ಸಿದ್ಧರಾಮಯ್ಯ ಅವರು ಬೆಂಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಕಾವೇರಿ  ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.

ಇದನ್ನೂ ಓದಿ: ಪಾಕ್ ಚಿನ್ನ ನದೀಮ್ ಗೆ ಸಿಕ್ಕ ಹಣವೆಷ್ಟು? – ಉಗ್ರನ ಜೊತೆ ಸ್ನೇಹ ಬೇಕಿತ್ತಾ?

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎರಡು ಶತಮಾನಗಳ ಬ್ರಿಟಿಷರ ಕ್ರೂರ ದಾಸ್ಯದಿಂದ ಬಿಡುಗಡೆ ಹೊಂದಿ, ನಮ್ಮ ದೇಶ ಸ್ವಾತಂತ್ರ್ಯದ ಬೆಳಕನ್ನು ಕಂಡ ಸುದಿನವಿದು. ಇಡೀ ಜಗತ್ತೇ ಒಪ್ಪಿಕೊಂಡಂತೆ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚು ಪ್ರಾಮಾಣಿಕವಾದ ಮತ್ತು ಅಹಿಂಸಾತ್ಮಕವಾದ ಇನ್ನೊಂದು ಸ್ವಾತಂತ್ರ್ಯ ಹೋರಾಟ ಚರಿತ್ರೆಯಲ್ಲಿ ನಡೆದಿಲ್ಲ ಎಂದು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟವನ್ನು ಮೆಲುಕು ಹಾಕುವಾಗ ಈ ವರ್ಷ ಅಂದರೆ 2024ನೇ ಇಸವಿ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಮುಖ್ಯವಾಗಿ 1924ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಚಾರಿತ್ರಿಕ ಬೆಳಗಾವಿ ಅಧಿವೇಶನ ನಡೆದು ನೂರು ವರ್ಷಗಳಾಗಿವೆ. ಅದೇ ರೀತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1924ರಲ್ಲಿ “ಬಹಿಷ್ಕತ ಹಿತಕಾರಿಣಿ ಸಭಾ” ಎನ್ನುವ ಮಹತ್ವದ ಸಂಘಟನೆಯನ್ನು ಸ್ಥಾಪಿಸಿದ ಚಾರಿತ್ರಿಕ ಘಟನೆಗೂ ಈ ವರ್ಷ ನೂರು ತುಂಬುತ್ತದೆ ಎಂದರು.

ಬೆಳಗಾವಿ ಅಧಿವೇಶನ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಗಾಂಧೀಜಿ ಈ ಅಧಿವೇಶನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ವಿವಿಧ ಭಾಷೆಳನ್ನಾಡುವ ಜನರ ನಡುವಣ ಸೌಹಾರ್ದಯುತ ಸಂಬಂಧಕ್ಕೆ ಒತ್ತು ನೀಡಿ ಮಾತನಾಡಿದ್ದರು. ಸಮಾಜದ ದಮನಿತ ವರ್ಗಗಳ ಅಭ್ಯುದಯಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ದ್ವೇಷ, ಅಸಹನೆಗಳಲ್ಲಿ ಜಗತ್ತು ಕುದಿಯುತ್ತಿರುವ ವಿಷಕಾರಿಯಾದ ಈ ಸಂದರ್ಭದಲ್ಲಿ ಗಾಂಧೀಜಿಯವರ ಮಾತುಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವವಿದೆ ಎಂದು ತಿಳಿಸಿದರು.

ಇನ್ನು  ಆಪರೇಷನ್‌ ಕಮಲ ಪ್ರಯತ್ನದ ಬಗ್ಗೆ ಉಲ್ಲೇಖಿಸುತ್ತಾ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಕೇಂದ್ರ ಸರ್ಕಾರ ಅನುದಾನ ವಿಚಾರವಾಗಿ ತಾರತಮ್ಯ ನಡೆಸುತ್ತಿದೆ ಎಂದೂ ಉಲ್ಲೇಖಿಸಿದರು. ಹಿಂಬಾಗಿಲ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಕ್ಷಮಿಸಿಲ್ಲ. ಅದೇ ರೀತಿಯಲ್ಲಿ ಅನುದಾನ ವಿಚಾರವಾಗಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Shwetha M

Leave a Reply

Your email address will not be published. Required fields are marked *