ಬೇಸಿಗೆ ಮುನ್ನವೇ ನೀರಿಲ್ಲ.. ನೀರಿಲ್ಲ..- ಕುಡಿಯಲು ಜೀವಜಲವಿಲ್ಲದೆ ಬೆಳಗಾವಿ, ರಾಯಚೂರು ಜನರ ಹಾಹಾಕಾರ

ಬೇಸಿಗೆ ಮುನ್ನವೇ ನೀರಿಲ್ಲ.. ನೀರಿಲ್ಲ..- ಕುಡಿಯಲು ಜೀವಜಲವಿಲ್ಲದೆ ಬೆಳಗಾವಿ, ರಾಯಚೂರು ಜನರ ಹಾಹಾಕಾರ

ಕೃಷ್ಣಾನದಿ ಕೂಗಳತೆ ದೂರದಲ್ಲಿದೆ, ಆದರೂ ಜಲಬತ್ತಿ ಬರಿದಾದ ಮೇಲೆ ನೀರಿನ ಸೆಲೆ ಎಲ್ಲಿದೆ. ಈ ಬಾರಿಯಂತೂ ಬೇಸಿಗೆ ಆರಂಭಕ್ಕೂ ಮೊದಲೇ ನೀರಿನ ಹಾಹಾಕಾರ ಶುರುವಾಗಿದೆ. ಅದರಲ್ಲೂ ಬೆಳಗಾವಿ, ರಾಯಚೂರು ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ.

ಇದನ್ನೂ ಓದಿ:ವಿಷವಾಗುತ್ತಿದೆ ಕುಡಿಯುವ ನೀರು! – ಕಾವೇರಿ, ಕೃಷ್ಣಾ ಸೇರಿ 12 ನದಿ ನೀರು ಸೇವನೆಗೆ ಯೋಗ್ಯವಲ್ಲ!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅದರಲ್ಲೂ ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ವಸತಿ ತೋಟದಲ್ಲಿ ಜನ ಬಾವಿ ನೀರನ್ನೇ ಅವಂಬಿಸಿದ್ದಾರೆ. ಮೆಟ್ಟಿಲಿಲ್ಲದ ಮೂವತ್ತು ಅಡಿ ಬಾವಿಗಿಳಿದು ನೀರು ತುಂಬಬೇಕಿದೆ. ಮಹಿಳೆಯರು ಸೇರಿದಂತೆ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಬಾವಿಗೆ ಇಳಿದು ನೀರು ತುಂಬುತ್ತಾರೆ. ಇನ್ನೂರಕ್ಕೂ ಅಧಿಕ ಮನೆಗಳಿರುವ ಈ ವಸತಿ ಪ್ರದೇಶದಲ್ಲಿ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೀಗಾಗಿ ಜನರು ಬಾವಿ ನೀರಿನ ಮೇಲೆ ಅವಲಂಬಿಸಿದ್ದಾರೆ. ಆದರೆ ಬಾವಿಯಿಂದ ನೀರು ತೆಗೆಯಬೇಕು ಎಂದರೆ ಜನರು ತಮ್ಮ ಜೀವವನ್ನೇ ಪಣಕ್ಕಿಡಬೇಕಿದೆ. ಬಾವಿಯ ನೀರು ಕೂಡಾ ಪಾತಾಳ ಸೇರಿದೆ. ನೀರು ಕಲುಷಿತವಾಗಿದೆ. ಆದರೆ, ಬಾಯಾರಿಕೆ ನೀಗಿಸಿಕೊಳ್ಳಲು ಜನರಿಗೆ ಇದೇ ಅನಿವಾರ್ಯವಾಗಿದೆ.

ಬಿಸಿಲನಗರಿ ರಾಯಚೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಬಿರು ಬೇಸಿಗೆ ನೆತ್ತಿ ಸುಡುತ್ತಿದ್ರೆ ಬಾಯಾರಿಕೆ ಜನರನ್ನು ತತ್ತರಿಸುವಂತೆ ಮಾಡಿದೆ. ಕೃಷ್ಣಾ ನದಿ ಬತ್ತಿಹೋಗಿದೆ. ನೀರಿಲ್ಲದೇ ನದಿಯಲ್ಲಿನ ಜಲಚರಗಳು ಸಾವನ್ನಪ್ಪುತ್ತಿವೆ. ತುಂಬಿ ಹರಿಯೋ ಕೃಷ್ಣೆಯನ್ನ ನೋಡಿದ್ದ ಜನ ಈಗ ಹನಿ ನೀರಿಲ್ಲದ ನದಿಯತ್ತ ನೋಡಿ ಮುಂದೇನು ಎಂದು ಆತಂಕಗೊಂಡಿದ್ದಾರೆ. ಫೆಬ್ರವರಿ ತಿಂಗಳಲ್ಲೇ ಹೀಗಾದರೆ, ಮಾರ್ಚ್, ಏಪ್ರಿಲ್, ಮೇನಲ್ಲಿ ನೀರಿನ ವ್ಯವಸ್ಥೆ ಹೇಗೆ, ಜನರ ಗತಿಯೇನು ಎಂಬುದೇ ಸವಾಲಾಗಿದೆ.

Sulekha