ಬ್ರೆಜಿಲ್‌ಗೆ ಪೆನಾಲ್ಟಿ ಶಾಕ್ – ಅರ್ಜೆಂಟೀನಾ ಎದುರು ನೆದರ್ಲೆಂಡ್ ಲಾಕ್
ಕತಾರ್: ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವನ್ನ ರೋಚಕವಾಗಿ ಮಣಿಸಿದ ಕ್ರೊವೇಷ್ಯಾ ತಂಡ ಫಿಫಾ ವಿಶ್ವಕಪ್‌ನಲ್ಲಿ ಸತತ ಎರಡನೇ ಬಾರಿ ಸೆಮಿಫೈನಲ್ಸ್ ಪ್ರವೇಶಿಸಿದೆ. ರೋಚಕ ಕ್ವಾರ್ಟರ್ ಫೈನಲ್ ಮೊದಲ ಪಂದ್ಯದಲ್ಲಿ ಬ್ರೆಜಿಲ್‌ಗೆ ಕ್ರೊವೇಷ್ಯಾ ತಂಡ ಪೆನಾಲ್ಟಿ ಶಾಕ್ ನೀಡಿದ್ರೆ, ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನಾ ನೆದರ್ಲೆಂಡ್ ತಂಡವನ್ನು ಮಣ್ಣು ಮುಕ್ಕಿಸಿದೆ.
ಇದನ್ನೂ ಓದಿ: ಫಿಫಾ ವಿಶ್ವಕಪ್- ಡಿಸೆಂಬರ್ 9ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕ ಕಾದಾಟ
ಶುಕ್ರವಾರ ನಡೆದ ಹೈವೋಲ್ಟೇಜ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಮತ್ತು ಕ್ರೊವೇಷ್ಯಾ ತಂಡದ ನಡುವೆ ನಡೆದಿದ್ದು ರೋಚಕ ಕಾದಾಟ. 120 ನಿಮಿಷಗಳ ಕಾದಾಟದಲ್ಲಿ ಬ್ರೆಜಿಲ್ ಪರ ಸ್ಟಾರ್ ಆಟಗಾರ ನೇಮರ್ 105ನೇ ನಿಮಿಷದಲ್ಲಿ ಗೋಲ್ ಬಾರಿಸಿದಾಗ ಮೈದಾನದಲ್ಲಿ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತ್ತು. ಕುಣಿತ, ಕೇಕೆ ಮೂಲಕ ಗೆಲ್ಲೋದು ನಾವೇ ಅನ್ನೋ ಹುಮ್ಮಸ್ಸಲ್ಲಿದ್ದರು. ಆದರೆ ಇನ್ನೇನು ಬ್ರೆಜಿಲ್ ಗೆದ್ದೇ ಬಿಡ್ತು ಅಂತಾ ಅಭಿಮಾನಿಗಳು ಜೋಶ್ ಮೂಡ್‌ಲ್ಲಿ ಇರುವಾಗಲೇ 116ನೇ ನಿಮಿಷದಲ್ಲಿ ಕ್ರೊವೇಷ್ಯಾ ತಂಡ ಗೋಲು ಹೊಡೆದು ಮೊದಲ ಆಘಾತ ನೀಡ್ತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಮಿಂಚಿದ ಕ್ರೊವೇಷ್ಯಾ ತಂಡ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡಕ್ಕೆ ಕೊಟ್ಟಿದ್ದು ಮರ್ಮಾಘಾತ. ಪೆನಾಲ್ಟಿ ಶೂಟ್ಔಟ್‌ನಲ್ಲಿ 4-2 ಅಂತರದಲ್ಲಿ ಗೆದ್ದ ಕ್ರೊವೇಷ್ಯಾ ತಂಡ ವಿಶ್ವಕಪ್ ಗೆದ್ದಷ್ಟೇ ಖುಷಿಯಲ್ಲಿ ಮೈದಾನದ ತುಂಬೆಲ್ಲಾ ಕುಣಿದಾಡಿ ಸಂಭ್ರಮಿಸಿದೆ.
ಮತ್ತೊಂದೆಡೆ ಶುಕ್ರವಾರ ತಡರಾತ್ರಿ ನಡೆದ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ತಂಡದ ಪಂದ್ಯದಲ್ಲಿ ಮೆಸ್ಸಿ ಟೀಮ್ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯ ಕೂಡಾ ರೋಚಕ ಘಟ್ಟ ತಲುಪಿತ್ತು. ಉಭಯ ತಂಡಗಳು 2-2 ಅಂತರದ ಸಮಬಲ ಸಾಧಿಸಿದ ಕಾರಣ ಪೆನಾಲ್ಟಿ ಶೂಟ್ಔಟ್ ನಡೆಸಲಾಯಿತು. ಇದರಲ್ಲಿ ಅರ್ಜೆಂಟೀನಾ 4-3 ಗೋಲುಗಳಿಂದ ಗೆದ್ದು ಬೀಗಿತು.