ವಿಮಾನ ಹತ್ತದೆ ವಿದೇಶದಲ್ಲೇ ಉಳಿದುಕೊಂಡ ಪ್ರಜ್ವಲ್ ರೇವಣ್ಣ! – ಎಸ್‌ಐಟಿ ಅಧಿಕಾರಿಗಳ ನಡೆ ಏನು.?

ಹಾಸನ ಪೆನ್‌ಡ್ರೈವ್ ಕೇಸ್‌ನ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಬುಧವಾರ ತಡರಾತ್ರಿ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಪಜ್ವಲ್ ಫ್ಲೈಟ್ ಟಿಕೆಟ್ ಸಹ ಬುಕ್ ಮಾಡಿದ್ದರು. ಪ್ರಜ್ವಲ್ ರೇವಣ್ಣ ಬರುತ್ತಾರೆ ಅಂತಾ ಎಸ್‌ಐಟಿ ಅಧಿಕಾರಿಗಳು ಕೂಡ ಕಾದಿದ್ದೇ ಬಂತು. ಆದ್ರೆ ಪ್ರಜ್ವಲ್ ರೇವಣ್ಣ ಫ್ಲೈಟ್ ಹತ್ತದೇ ಜರ್ಮನಿಯಲ್ಲೇ ಉಳಿದಿದ್ದಾರೆ. ಈ ಮೂಲಕ ವಿದೇಶದಲ್ಲಿ ಇದ್ದುಕೊಂಡೇ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.
ಇದನ್ನೂ ಓದಿ: ನಾನೇನೂ ತಪ್ಪು ಮಾಡಿಲ್ಲ.. ಷಡ್ಯಂತ್ರದ ಬಗ್ಗೆ ಮಾತನಾಡಲ್ಲ – ಕಾನೂನು ಹೋರಾಟದ ಜೊತೆಗೆ ರೇವಣ್ಣ ಟೆಂಪಲ್ ರನ್
ಪ್ರಜ್ವಲ್ ರೇವಣ್ಣ ಜರ್ಮನ್ ಕಾಲಮಾನದ ಪ್ರಕಾರ ಮೇ 15 ರಂದು 12.20ರ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಯಾವುದೇ ಕ್ಷಣದಲ್ಲಾದರೂ ಭಾರತಕ್ಕೆ ಬರಬಹುದು ಅಂತಾ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಆದ್ರೆ ಪ್ರಜ್ವಲ್ ಕೊನೆ ಕ್ಷಣದಲ್ಲಿ ವಿಮಾನ ಹತ್ತದೇ ಮತ್ತೊಮ್ಮೆ ಬೆಂಗಳೂರು ಪ್ರಯಾಣವನ್ನು ರದ್ದು ಮಾಡಿದ್ದಾರೆ. ಪ್ರಜ್ವಲ್ ಬುಕ್ ಮಾಡಿದ್ದ ವಿಮಾನ ಈಗಾಗಲೇ ಜರ್ಮಿನಿಂದ ಟೇಕಾಫ್ ಆಗಿದೆ. ಆದ್ರೆ, ಪ್ರಜ್ವಲ್ ವಿಮಾನದಲ್ಲಿ ಬೋರ್ಡಿಂಗ್ ಆಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಪ್ಯಾಸೆಂಜರ್ ಲಿಸ್ಟ್ನಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರು ಸಹ ಇಲ್ಲ ಎಂದು ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಈಗಾಗಲೇ ಒಂದು ಸಲ ಟಿಕೆಟ್ ಬುಕ್ ಮಾಡಿ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದರು. ಇದೀಗ ಮತ್ತೊಮ್ಮೆ ಟಿಕೆಟ್ ಬುಕ್ ಮಾಡಿದರೂ ಪ್ರಯಾಣ ಮಾಡದ ಜರ್ಮನಿಯಲ್ಲೇ ಉಳಿದುಕೊಂಡಿದ್ದಾರೆ.
ಇನ್ನು ಪ್ರಜ್ವಲ್ ವಿದೇಶದ ಕುಳಿತುಕೊಂಡೇ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ವಕೀಲರು ನೀಡುತ್ತಿರುವ ಸಲಹೆ ಸೂಚನೆಗಳನ್ನು ಪ್ರಜ್ವಲ್ ಪಾಲನೆ ಮಾಡುತ್ತಿದ್ದಾರೆ. ವಕೀಲರು ಯಾವಾಗ ಬರಲು ಹೇಳುತ್ತಾರೋ ಅಂದು ಪ್ರಜ್ವಲ್ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ಕಣ್ಣಾಮುಚ್ಚಾಲೆ ಆಟದಿಂದಾಗಿ ಇತ್ತ ದಾರಿ ಕಾಯುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪದೇ ಪದೇ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡುತ್ತಿರುವುದರಿಂದ ಮುಂದೆ ಏನು ಮಾಡಬೇಕು ಎಂದು ಎಸ್‌ಐಟಿ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.