ನಾಟ್ಯ ಮಯೂರಿಗೆ ಕಾಲ್ಗೆಜ್ಜೆ – ಮಾಣೂರು ಸುಬ್ರಹ್ಮಣ್ಯ ದೇವಳದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದ ನವಿಲು!
ನವಿಲಿನ ನೃತ್ಯಕ್ಕಿಂದ ಮಿಗಿಲಾದ ನೃತ್ಯವಿಲ್ಲ. ಅದಕ್ಕಾಗಿಯೇ ನವಿಲನ್ನು ನಾಟ್ಯ ಮಯೂರಿ ಅಂತಾ ಕರೆಯೋದು. ಈ ನವಿಲಿನ ನಾಟ್ಯ ಕಾಣ ಸಿಗೋದು ಬಹಳ ಅಪರೂಪ. ಆದರೆ ಮಂಗಳೂರು ನಗರ ಹೊರವಲಯದ ನೀರುಮಾರ್ಗದ ಮಾಣೂರು ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾತ್ರ ನವಿಲಿನ ನಾಟ್ಯ ಪ್ರತಿದಿನ ಕಾಣಸಿಗುತ್ತದೆ. ಜನರನ್ನು ಕಂಡೊಡನೆ ಯಾವುದೇ ಭಯ ಇಲ್ಲದೇ ತನ್ನ ವಿಶಾಲವಾದ ಗರಿಗಳನ್ನು ಬಿಚ್ಚಿ ಅತ್ಯದ್ಭುತ ವಾದ ದೃಶ್ಯಕಾವ್ಯವನ್ನು ಬರೆಯುತ್ತದೆ. ಇದೀಗ ಈ ನವಿಲಿಗೆ ಗೆಜ್ಜೆ ತೊಡಿಸಲಾಗಿದೆ.
ಇದನ್ನೂ ಓದಿ: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ- ಚಿನ್ನದಂತೆ ಪ್ರಕಾಶಮಾನವಾಗಿ ಹೊಳೆಯುವ ದೇವಿಯ ವಿಶೇಷತೆಗಳೇನು?
ಸುಮಾರು ಏಳೆಂಟು ವರ್ಷಗಳಿಂದಲೂ ದೇವಸ್ಥಾನದಲ್ಲಿದೆ. ಈ ನವಿಲಿಗೆ ದೇವಾಲಯದ ಅರ್ಚಕ ರಾಜೇಶ್ ಭಟ್ ‘ಮಯೂರ’ವೆಂದು ಹೆಸರಿಟ್ಟಿದ್ದಾರೆ. ಅರ್ಚಕರ ಕರೆಗೆ ಸ್ಪಂದಿಸಿ ಮೆಲ್ಲನೆ ಹೆಜ್ಜೆಯಿರಿಸಿ ಹತ್ತಿರಕ್ಕೆ ಬರುತ್ತದೆ. ಅವರು ಮಾಡುವ ಹಾವಭಾವಕ್ಕೆ ತಕ್ಕಂತೆ ಸ್ಪಂದಿಸುತ್ತದೆ. ಈ ಮಯೂರ ಪ್ರತಿದಿನವೂ ರಾತ್ರಿ ಪೂಜೆಯ ವೇಳೆ ನಮಸ್ಕಾರ ಮಂಟಪಕ್ಕೆ ತಪ್ಪದೇ ಬರುತ್ತದೆ. ಪ್ರತಿನಿತ್ಯ ಬಂದು ನರ್ತಿಸುವ ನವಿಲಿಗೆ ಇಲ್ಲಿನ ಅರ್ಚಕರು ಈಗ ಗೆಜ್ಜೆ ಕಟ್ಟಿದ್ದಾರೆ. ನವಿಲು ಖುಷಿಯಿಂದ ನರ್ತನ ಮಾಡುತ್ತಿದೆ. ನವಿಲಿನ ಗೆಜ್ಜೆ ನರ್ತನದ ವಿಡಿಯೋ ಈಗ ವೈರಲ್ ಆಗಿದೆ.
ಗೆಜ್ಜೆ ಕಟ್ಟಿಕೊಂಡು ಗಲ್ ಗಲ್ ಕುಣಿಯುವ ನಾಟ್ಯ ಮಯೂರಿ ನೃತ್ಯ ನೋಡಲೆಂದೇ ದೇವಳದ ಭಕ್ತರು ಕಾದು ಕುಳಿತಿರುತ್ತಾರೆ. ಮಯೂರು ನರ್ತಿಸುತ್ತಿದ್ದರೆ ಗೆಜ್ಜೆ ಸದ್ದಿಗೆ ಭಕ್ತರ ಮೈಮರೆಯುವಂತೆ ಮಾಡುತ್ತೆ. ದೇವಸ್ಥಾನಕ್ಕೆ ಬರುವ ಭಕ್ತರು ನಾಟ್ಯ ಮಯೂರಿ ನೃತ್ಯ ನೋಡಲೆಂದೇ ಬರುತ್ತಾರೆ. ದೇವಸ್ಥಾನದೊಳಗೆ ಬಂದು ನೃತ್ಯ ಮಾಡುವ ಮಯೂರಿ, ಸಂಜೆಯಾಗ್ತಿದ್ದಂತೆ ಅರ್ಚಕರ ಮನೆಗೆ ಹೋಗಿ ಅಲ್ಲಿಯೂ ನೃತ್ಯ ಮಾಡುತ್ತೆ. ಸದ್ಯ ಈ ನಾಟ್ಯ ಮಯೂರಿಯ ನೃತ್ಯಕ್ಕೆ ಭಕ್ತರು ಮನಸೋತಿದ್ದಾರೆ.