ಕೆಣಕಿದ್ದಕ್ಕೆ ಕ್ರಿಕೆಟ್ ಬ್ಯಾನ್? – PAK Vs AFG ಸರಣಿ ಕ್ಯಾನ್ಸಲ್!
PCBಗೆ ಬ್ಯಾಕ್ ಟು ಬ್ಯಾಕ್ ಬೆಂಕಿ

ಕೆಣಕಿದ್ದಕ್ಕೆ ಕ್ರಿಕೆಟ್ ಬ್ಯಾನ್? – PAK Vs AFG ಸರಣಿ ಕ್ಯಾನ್ಸಲ್!PCBಗೆ ಬ್ಯಾಕ್ ಟು ಬ್ಯಾಕ್ ಬೆಂಕಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಸದ್ಯ ಮಿಲಿಟರಿ ಸಂಘರ್ಷ ಜೋರಾಗಿದೆ. ಒಂಥರಾ ವಾರ್ ಸಿಚುಯೇಷನ್ನೇ ಅನ್ನಿ. ಪಾಕಿಸ್ತಾನಿ ವಾಯುಪಡೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಅತ್ತ ತಾಲಿಬಾನಿಗಳು ಕೂಡ ಪಾಕಿಸ್ತಾನದ ಮೇಲೂ ಪ್ರತಿದಾಳಿ ನಡೆಸಿದ್ದಾರೆ. ಇದೇ ಸಂಘರ್ಷ ಈಗ ಕ್ರಿಕೆಟ್ ಮೇಲೂ ಪರಿಣಾಮ ಬೀರೋ ಸಾಧ್ಯತೆ ಇದೆ.

ಇದನ್ನೂ ಓದಿ : ಕರ್ಣನ ಪಾತ್ರದಿಂದ ಮನೆಮಾತಾಗಿದ್ದ ಬಹುಬಾಷ್ ನಟ ಪಂಕಜ್ ಧೀರ್ ವಿಧಿವಶ

ತ್ರಿಕೋನ ಸರಣಿಯಿಂದ ಆಫ್ಘನ್ ಟೀಂ ಡ್ರಾಪ್?

ಅಫ್ಘಾನ್-ಪಾಕ್ ನಡುವೆ ದಿನೇ ದಿನೇ ಉದ್ವಿಘ್ನ ಸ್ಥಿತಿ ನಿರ್ಮಾಣವಾಗ್ತಿದೆ. ಇದೇ ಎಫೆಕ್ಟ್ ಈಗ ಕ್ರಿಕೆಟ್​ಗೂ ತಟ್ಟಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ನವೆಂಬರ್​ನಲ್ಲಿ ತ್ರಿಕೋನ ಸರಣಿ ಆಯೋಜನೆ ಮಾಡೋಕೆ ಪ್ಲ್ಯಾನ್ ಮಾಡಿದೆ. ಟಿ-20 ಮಾದರಿಯಲ್ಲಿ ನಡೆಯಲಿರೋ ಈ ಸರಣಿಯಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೇ ಶ್ರೀಲಂಕಾ ತಂಡಗಳು ಭಾಗವಹಿಸಬೇಕಿತ್ತು. ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಗೆ ಈ ಸರಣಿಗೆ ಪರ್ಯಾಯ ಯೋಜನೆ ರೂಪಿಸುವಂತೆ ಕೇಳಿದ್ದಾರೆ. ನವೆಂಬರ್ 11 ರಿಂದ 15 ರವರೆಗೆ ನಡೆಯಬೇಕಿದ್ದ ಮೂರು ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನು ಜನವರಿ 1ರಿಂದ 10 ರವರೆಗೆ ಕೊಲಂಬೊದಲ್ಲಿ ಆಡಲು ಪಿಸಿಬಿ ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್ ಎಲ್ ಸಿ) ಪರಸ್ಪರ ಮಾತುಕತೆ ನಡೆಸುತ್ತಿವೆ. ಅಂದ್ರೆ ಅಫ್ಘನ್ ತಂಡವನ್ನ ಕೈಬಿಟ್ಟು ಪಾಕ್ ಮತ್ತು ಲಂಕಾ ತಂಡಗಳು ಮಾತ್ರವೇ ಕಣಕ್ಕಿಳಿಯೋ ಪ್ಲ್ಯಾನ್​ನಲ್ಲಿವೆ. ಒಂದ್ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು ಅಫ್ಘಾನಿಸ್ತಾನ್ ತಂಡವನ್ನು ತ್ರಿಕೋನ ಸರಣಿಯಿಂದ ಹೊರಗಿಟ್ಟರೆ, ಪಾಕ್-ಅಫ್ಘಾನ್ ನಡುವೆ ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಕೂಡ ಸ್ಥಗಿತಗೊಳ್ಳಬಹುದು. ಹಾಗೇನಾದ್ರೂ ಆದ್ರೆ ಮುಂದಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನದಂತೆಯೇ ಸ್ಥಿತಿ ನಿರ್ಮಾಣವಾಗುತ್ತೆ. ಅಂದ್ರೆ ಏಷ್ಯಾಕಪ್ ಮತ್ತು ಐಸಿಸಿ ವಿಶ್ವಕಪ್​ ಟೂರ್ನಿಗಳಲ್ಲಿ ಮಾತ್ರವೇ ಪೈಪೋಟಿ ನಡೆಸಬೇಕಾಗುತ್ತೆ.

ಸರಣಿ ಮುಂದೂಡಿಕೆ ಪ್ಲ್ಯಾನ್ ಗೆ ಆಸ್ಟ್ರೇಲಿಯಾ ಕೆಂಡ!

ಅಷ್ಟಕ್ಕೂ ಇಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸರಣಿಯನ್ನ ಪೋಸ್ಟ್ ಪೋನ್ ಮಾಡೋ ಲೆಕ್ಕಾಚಾರದಲ್ಲಿದ್ರೆ ಅತ್ತ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕೆರಳಿ ಕೆಂಡವಾಗಿದೆ. ಯಾಕಂದ್ರೆ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಟಿ20 ಸರಣಿ ಜನವರಿಯಲ್ಲಿ ನಡೆದರೆ ಆಗ ಅದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಸಮಸ್ಯೆಯಾಗಬಹುದು. ಅಂದ್ರೆ ಪಾಕಿಸ್ತಾನದ  ಪ್ರಮುಖ ಆಟಗಾರರು  2026ರ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರರಾದ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ, ಶಾಹಿನ್ ಶಾ ಅಫ್ರಿದಿ ಸೇರಿದಂತೆ ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಹಸನ್ ಖಾನ್, ಹಾರಿಸ್ ರೌಫ್ ಮತ್ತು ಹಸನ್ ಅಲಿ ಮೊದಲಾದವರು ಇದ್ದಾರೆ. ಈ ಆಟಗಾರರು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಿದರೆ ಅವರು BBL ನಲ್ಲಿ ಆಡಲು ಅನುಮತಿ ಸಿಗಲ್ಲ. ಇದ್ರಿಂದ ಕ್ರಿಕೆಟ್ ಆಸ್ಟ್ರೇಲಿಯಾ ನಷ್ಟ ಅನುಭವಿಸಬೇಕಾಗುತ್ತದೆ.  ಇದೇ ಕಾರಣಕ್ಕೆ ನವೆಂಬರ್ ನ ತ್ರಿಕೋನ ಸರಣಿ ಮೇಲೆ ಎಲ್ಲರ ಕಣ್ಣಿದೆ.

13 ವರ್ಷಗಳಿಂದ ಸರಣಿ ಆಡಿಲ್ಲ ಭಾರತ-ಪಾಕ್!

ಭಾರತ ಪಾಕ್ ನಡುವೆ ದೊಡ್ಡ ದೊಡ್ಡ ಈವೆಂಟ್​ಗಳಲ್ಲಿ ಮಾತ್ರವೇ ಸದ್ಯ ಪಂದ್ಯಗಳು ನಡೆಯುತ್ವೆ. ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಆಡಿದ್ದು 2012-2013 ರಲ್ಲಿ. ಈ ವೇಳೆ ಎರಡು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಎರಡೂ ದೇಶಗಳ ನಡುವೆ ಆಡಲಾಯಿತು. ಭಾರತದ ಬಗ್ಗೆ ಹೇಳುವುದಾದರೆ ಟೀಂ ಇಂಡಿಯಾ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ 2008 ರಲ್ಲಿ ಏಷ್ಯಾಕಪ್ ಆಡಲು ಭೇಟಿ ನೀಡಿತ್ತು. ಆ ನಂತ್ರ ಪಾಕಿಸ್ತಾನಕ್ಕೆ ಕಾಲಿಟ್ಟಿಲ್ಲ. ಇನ್ನು ಇದೇ ವರ್ಷ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗಿತ್ತು. ಆದ್ರೆ ಪಾಕ್​ಗೆ ಕಾಲಿಡಲು ಒಪ್ಪದ ಭಾರತ  ತನ್ನ ಎಲ್ಲಾ ಪಂದ್ಯಗಳನ್ನು ಯುಎಇಯಲ್ಲಿ ಆಡಿತು. ಭಾರತ ಫೈನಲ್ ತಲುಪಿದ್ದರಿಂದ ಈ ಪಂದ್ಯವನ್ನು ದುಬೈನಲ್ಲಿ ಆಡಲಾಯಿತು. ಹೀಗೆ ಕ್ರಿಕೆಟ್ ಲೋಕದಲ್ಲಿ ಭಾರತ ಮತ್ತು ಪಾಕ್ ಮ್ಯಾಚ್ ಅಂದ್ರೆ ಹತ್ತಾರು ಪ್ರಶ್ನೆಗಳು ಬರುತ್ವೆ. ಸದ್ಯ ಪಾಕ್ ಮತ್ತು ಅಫ್ಘನ್ ತಂಡಗಳ ಸಿಚುಯೇಷನ್ ನೋಡ್ತಿದ್ರೆ ಮುಂದಿನ ದಿನಗಳಲ್ಲಿ ಇಲ್ಲಿಯೂ ಕೂಡ ದ್ವಿಪಕ್ಷೀಯ ಸರಣಿಗಳು ಕ್ಯಾನ್ಸಲ್ ಆಗುತ್ತೇನೋ ಎನ್ನುವಂತ ಅನುಮಾನ ಮೂಡಿದೆ.

Shantha Kumari