ಪಾಕ್ ಷರತ್ತಿಗೆ ಬೆಲೆ ಇದ್ಯಾ? – ICC ಮುಂದೆ ಹುಚ್ಚು ಡಿಮ್ಯಾಂಡ್

ಪಾಕ್ ಷರತ್ತಿಗೆ ಬೆಲೆ ಇದ್ಯಾ? – ICC ಮುಂದೆ ಹುಚ್ಚು ಡಿಮ್ಯಾಂಡ್

ಟಿ-20 ವಿಶ್ವಕಪ್​ ವಿಚಾರದಲ್ಲಿ ಪಾಕಿಸ್ತಾನದ ಹುಚ್ಚಾಟ ಇನ್ನೂ ನಿಂತಿಲ್ಲ. ಇಷ್ಟು ದಿನ ಟೂರ್ನಿ ಆಡಲ್ಲ ಬಾಯ್ಕಾಟ್ ಮಾಡ್ತೀವಿ ಅಂತಿದ್ದೋರು ಬಾಂಗ್ಲಾದೇಶಕ್ಕೆ ಚಾನ್ಸ್ ಕೊಡ್ತೀವಿ ಅಂತಾ ಐಸಿಸಿ ವಾರ್ನ್ ಮಾಡ್ತಿದ್ದಂತೆ ಬಣ್ಣ ಬದಲಾಯಿಸಿದ್ದಾರೆ. ನಮ್ಮ ಬೇಳೆ ಏನು ಬೇಯೋದಿಲ್ಲ ಅಂತಾ ಗೊತ್ತಾಗ್ತಿದ್ದಂತೆ ವಿಶ್ವಕಪ್ ಆಡೋಕೆ ರೆಡಿಯಾಗ್ತಿದ್ದಾರೆ. ಹೀಗಿದ್ರೂ ಐಸಿಸಿ ಮುಂದೆ ಹೊಸ ಕಂಡೀಷನ್ ಹಾಕಿದ್ದಾರೆ.

ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳ ನಡುವೆ ಕಲಹ – ಹೆಂಡತಿ ಬಲಿ, ಗಂಡನಿಗೆ ICUನಲ್ಲಿ ಚಿಕಿತ್ಸೆ!

ಬಾಂಗ್ಲಾದೇಶ ಬೆನ್ನಿಗೆ ನಿಂತು ನಾವೂ ಕೂಡ ಟೂರ್ನಿಯಿಂದ ಹಿಂದೆ ಸರಿಯುತ್ತೇವೆ ಎಂದಿದ್ದ ಪಾಕಿಸ್ತಾನ ದಿನಕ್ಕೊಂದು ಆಟ ಆಡ್ತಿದೆ. ಹೀಗಿದ್ರೂ ಫೆಬ್ರವರಿ 2ಕ್ಕೆ ಶ್ರೀಲಂಕಾಗೆ ಪ್ರಯಾಣಿಸಲು ತಯಾರಿ ಮಾಡ್ಕೊಂಡಿದೆ. ಅದಕ್ಕಾಗಿ ಟಿಕೆಟ್ಸ್ ಕೂಡ ಬುಕ್ ಆಗಿದೆ. ಫೆಬ್ರವರಿ 7ರಿಂದ, ಮಾರ್ಚ್ 8ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ.  ಇನ್ನು ಟೂರ್ನಿಯಲ್ಲಿ ಭಾಗವಹಿಸೋ ಬಗ್ಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡೋ ಚಾನ್ಸಸ್ ಇದೆ. ಇಷ್ಟು ದಿನ ಬೇಜಾನ್ ಮೆರೀತಿದ್ದ ನಖ್ವಿ ದಿಢೀರ್ ಅಂತಾ ಉಲ್ಟಾ ಹೊಡೆಯೋಕೆ ಕಾರಣವೂ ಇದೆ.

ಕೋಟಿ ಕೋಟಿ ನಷ್ಟಕ್ಕೆ ಹೆದರಿ ಟೂರ್ನಿ ಆಡಲು ಒಪ್ಪಿದ ಪಾಕ್!

ಭಾರತದ ವಿರುದ್ಧ ಆಡಲ್ಲ, ಟೂರ್ನಿ ಆಡಲ್ಲ ಅಂತಾ ಪಾಕಿಸ್ತಾನ ಎಷ್ಟೇ ಬೊಂಬಡ ಹೊಡ್ಕೊಂಡ್ರೂ ಕೂಡ ಅದನ್ನ ಗಟ್ಟಿಯಾಗಿ ನಿಂತು ಫೇಸ್ ಮಾಡೋ ತಾಕತ್ತಿಲ್ಲ. ಅವ್ರ ಬಿಲ್ಡಪ್ ಏನಿದ್ರೂ ಬಾಯಿ ಮಾತಿಗಷ್ಟೇ ಸೀಮಿತ. ಯಾಕಂದ್ರೆ ಟೂರ್ನಿ ವಿಚಾರವಾಗಿ ನಖ್ವಿ ಅಲ್ಲಿನ ಪ್ರಧಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಶೆಹಬಾಜ್ ಷರೀಫ್ ವಿಶ್ವಕಪ್​ನಿಂದ ಹಿಂದೆ ಸರಿದ್ರೆ ಏನೆಲ್ಲಾ ಆಗುತ್ತೆ ಎಷ್ಟು ಲಾಸ್ ಆಗುತ್ತೆ ಅನ್ನೋದನ್ನ ಹೇಳಿದ್ದಾರೆ. ಹಾಗೇ ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ನಿರ್ಧಾರ ಏನೋ ಕರೆಕ್ಟ್ ಆಗಿದೆ ಆದ್ರೆ ಟೂರ್ನಿಯಿಂದ ಹೊರಗುಳಿದರೆ ಫೈನಾನ್ಶಿಯಲ್ ಲಾಸ್ ಆಗುತ್ತೆ.  ಹೀಗಾಗಿ ಬಾಯ್ಕಾಟ್ ಮಾಡೋದೆಲ್ಲಾ ಬೇಡ ಅಂತಾ ರಿಯಾಲಿಟಿ ಬಾಯಿಬಿಟ್ಟಿದ್ದಾರೆ. ಸೋ ನಖ್ವಿಗೆ ಮತ್ತೆ ಕಳ್ಳಾಟ ಆಡೋಕೆ ಆಗಿಲ್ಲ. ಹೀಗಿದ್ರೂ ಐಸಿಸಿ ಮುಂದೆ ಮತ್ತೊಂದು ಡಿಮ್ಯಾಂಡ್ ಇಟ್ಟಿದ್ದಾರೆ.

ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿ ಆಡಲು ಅವಕಾಶಕ್ಕೆ ಮನವಿ!

ಭಾರತದಲ್ಲಿ ಲೀಗ್ ಪಂದ್ಯಗಳನ್ನು ಆಡದಂತೆ ಬಾಂಗ್ಲಾದೇಶ ಮಾಡಿದ ಮನವಿಯನ್ನು ಐಸಿಸಿ ಒಪ್ಪಿಲ್ಲ. ಐಸಿಸಿಯ ಈ ನಡೆಗೆ ಉರಿದು ಬಿದ್ದಿರೋ  ಪಿಸಿಬಿ ಹೊಸ ದಾರಿ ಹಿಡಿದಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಪಂದ್ಯ ಸೇರಿದಂತೆ ಪಂದ್ಯಾವಳಿಯ ಉದ್ದಕ್ಕೂ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಪಾಕಿಸ್ತಾನ ತಂಡ ಐಸಿಸಿಗೆ ತಿಳಿಸಿದೆ. ಬಾಂಗ್ಲಾ ವಿಚಾರದಲ್ಲಿ ನಮಗೆ ಡಿಸಪಾಯಿಂಟ್​ಮೆಂಟ್ ಆಗಿದೆ. ಹೀಗಾಗಿ ಪಂದ್ಯಾವಳಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸೋಕೆ ಮುಂದಾಗಿದೆ. ಇದಕ್ಕೆ ಅನುಮತಿ ನೀಡುವಂತೆ ಐಸಿಸಿ ಪತ್ರ ಬರೆದಿದೆ. ಹಾಗೇನಾದ್ರೂ ಇದನ್ನ ಐಸಿಸಿ ಒಪ್ಪಿದ್ರೆ ಪ್ರತಿಭಟನೆಯ ಸಂಕೇತವಾಗಿ ಪಾಕಿಸ್ತಾನ ಕ್ರಿಕೆಟಿಗರು 2026 ರ ಟಿ 20 ವಿಶ್ವಕಪ್ ಸಮಯದಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿಯುತ್ತಾರೆ. ಆದ್ರೆ ಈಗ ಇರೋ ಪ್ರಶ್ನೆ ಅಂದ್ರೆ ಪಾಕಿಸ್ತಾನದ ಷರತ್ತಿಗೆ ಐಸಿಸಿಯಲ್ಲಿ ಬೆಲೆ ಇದ್ಯಾ ಅನ್ನೋದು. ಯಾಕಂದ್ರೆ ಈಗಾಗ್ಲೇ ಬಾಂಗ್ಲಾ ಬೆಂಬಲಕ್ಕೆ ನಿಂತಾಗಾಗ್ಲಿ ಅಥವಾ ಪಂದ್ಯಗಳನ್ನ ಶಿಫ್ಟ್ ಮಾಡಿ ಅಂತಾ ಹೇಳಿದಗಾಗ್ಲಿ ಅಥವಾ ಬಾಯ್ಕಾಟ್ ಬೆದರಿಕೆ ಹಾಕಿದಾಗ್ಲೂ ಐಸಿಸಿ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಅಂಥಾದ್ರಲ್ಲಿ ಈಗ ಕಪ್ಪು ಬ್ಯಾಂಡ್ ಧರಿಸಿ ಆಡ್ತೀವಿ ಅಂದ್ರೆ ಬೆಲೆ ಕೊಡ್ತಾರಾ. ಚಾನ್ಸೇ ಇಲ್ಲ. ಹೀಗಿದ್ರೂ ಪಾಕಿಸ್ತಾನ ಇಷ್ಟೆಲ್ಲಾ ನಾಟಕ ಮಾಡೋಕೆ ಕಾರಣ ಬಿಟ್ಟಿಗಾಗಿ ಪ್ರಚಾರ ಗಿಟ್ಟಿಸಿಕೊಳ್ಳೋದು. ಪಾಕಿಸ್ತಾನದ ಈ ನವರಂಗಿ ಆಟಕ್ಕೆ ಐಲ್ಯಾಂಡ್ ಕೂಡ ಸರಿಯಾಗೇ ಟಾಂಟ್ ಕೊಟ್ಟಿದೆ.

ವಿಶ್ವಕಪ್ ನಲ್ಲಿ ಆಡದಿದ್ರೆ ಬೇಗ ಹೇಳಿ ಎಂದು ಲೇವಡಿ!

ಹೀಗೆ ದಿನಕ್ಕೊಂದು ನೌಟಂಕಿ ಆಟ ಆಡ್ತಿರೋ ಪಾಕಿಸ್ತಾನವನ್ನ ಐಲ್ಯಾಂಡ್ ಕೂಡ ಸರಿಯಾಗೇ ರೋಸ್ಟ್ ಮಾಡಿದೆ. ಪಾಕಿಸ್ತಾನವು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುವುದು ನಮಗೆ ನಿಜವಾಗಿಯೂ ಅಗತ್ಯವಾಗಿದೆ. ಅವರು ಹಿಂದೆ ಸರಿದ ತಕ್ಷಣ ನಾವು ಫೆಬ್ರುವರಿ 2 ರಂದು ಕೊಲಂಬೋಗೆ ತೆರಳಲು ಸಿದ್ಧರಿದ್ದೇವೆ. ಆದರೆ, ಫೆಬ್ರುವರಿ 7 ರಂದು ಕೊಲಂಬೊಗೆ ಸರಿಯಾದ ಸಮಯಕ್ಕೆ ನಮ್ಮನ್ನು ಕರೆದೊಯ್ಯಲು ವಿಮಾನದ ವೇಳಾಪಟ್ಟಿಯನ್ನು ಹೊಂದಿಸುವುದು ತುಂಬಾ ಕಷ್ಟವಾಗಿದೆ. ಇದು ನಮ್ಮ ಆರಂಭಿಕ ಬ್ಯಾಟ್‌ಗೆ ತುಂಬಾ ಸಮಸ್ಯೆ ಮಾಡುತ್ತದೆ ಎಂದು ಐಲ್ಯಾಂಡ್ ಕ್ರಿಕೆಟ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದೆ.  ಹಾಗೇ ಪೋಸ್ಟ್ ಜೊತೆಗೆ ಕೆಫ್ಲಾವಿಕ್‌ನಿಂದ ಕೊಲಂಬೊಗೆ ಟ್ರಾವೆಲ್ ಪ್ಲ್ಯಾನ್ ಬಗೆಗಿನ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದೆ. ಒಟ್ನಲ್ಲಿ ಪಾಕಿಸ್ತಾನ ತನ್ನ ಬಗ್ಗೆ ತಾನೇ ಕೊಚ್ಚಿಕೊಳ್ಳೋಕೆ ಹೋಗಿ ವಿಶ್ವಮಟ್ಟದಲ್ಲಿ ತನ್ನ ಮರ್ಯಾದೆಯನ್ನ ತಾಗೇ ಹರಾಜು ಹಾಕಿಕೊಳ್ತಿದೆ.

Shantha Kumari