ರಚಿನ್ ರಕ್ತ ಚಿಮ್ಮಿಸಿತಾ LED ಲೈಟ್ಸ್? – ಮೈದಾನಗಳಲ್ಲೇ ಪಾಕಿಸ್ತಾನ ಎಡವಟ್ಟು
![ರಚಿನ್ ರಕ್ತ ಚಿಮ್ಮಿಸಿತಾ LED ಲೈಟ್ಸ್? – ಮೈದಾನಗಳಲ್ಲೇ ಪಾಕಿಸ್ತಾನ ಎಡವಟ್ಟು](https://suddiyaana.com/wp-content/uploads/2025/02/GjT3pWkaEAENDWy.jpg)
2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆಯಾದಾಗ್ಲೇ ವಿವಾದಗಳೂ ಬೆನ್ನೇರಿದ್ವು. ಯಾಕಂದ್ರೆ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಗಳನ್ನ ಕಾಣದೆ ದಶಕಗಳೇ ಕಳೆದಿದ್ವು. ಆರ್ಥಿಕ ಪರಿಸ್ಥಿತಿ ಅಧೋಗತಿಯಲ್ಲಿತ್ತು. ಕ್ರೀಡಾಂಗಣಗಳು ಹಾಳು ಕೊಂಪೆಯಂತಾಗಿದ್ವು. ಇಷ್ಟಾದ್ರೂ ಜಂಬ ಬಿಡದ ಪಿಸಿಬಿ ನಾವೇ ಟೂರ್ನಿ ಆಯೋಜನೆ ಮಾಡ್ತೀವಿ ಅಂತಾ ಒಪ್ಪಿಕೊಂಡಿತ್ತು. ಬಟ್ ಈಗ ಅಲ್ಲಿನ ಕ್ರೀಡಾಂಗಣಗಳಲ್ಲಿ ಹೇಗೆ ಆಡೋದು ಅಂಥಾ ಬೇರೆ ಬೇರೆ ರಾಷ್ಟ್ರಗಳ ಆಟಗಾರರು ಟೆನ್ಷನ್ ಆಗಿದ್ದಾರೆ. ಅದಕ್ಕೆ ಕಾರಣ ಭಾರತೀಯ ಮೂಲದ ಆಟಗಾರ ರಚಿನ್ ರವೀಂದ್ರ ತಲೆಯಿಂದ ಚಿಮ್ಮಿರೋ ರಕ್ತ. ಹೀಗಾಗೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿರುವ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ಎಲ್ಲವೂ ಸರಿ ಇದೆಯಾ? ಫ್ಲಡ್ ಲೈಟ್ ಸರಿಯಾಗಿ ಕೆಲಸ ಮಾಡುತ್ತಿದೆಯಾ? ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗಿಲ್ಲ ಸ್ಟಾರ್ಸ್ – ಬುಮ್ರಾ, ಕಮಿನ್ಸ್, ಸೈಮ್.. ಯಾರೆಲ್ಲಾ ಔಟ್?
ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನ ಹೊತ್ತಿರೋ ಪಾಕಿಸ್ತಾನ ಅದಕ್ಕಾಗಿ ಮೂರು ಮೈದಾನಗಳನ್ನ ಆಯ್ಕೆ ಮಾಡಿತ್ತು. ಅದ್ರಂತೆ ನವೀಕರಣ ಕೆಲಸವೂ ಮುಗಿದಿತ್ತು. ಎರಡು ದಿನಗಳ ಹಿಂದಷ್ಟೇ ಗಡ್ಡಾಫಿ ಮೈದಾನವನ್ನ ಉದ್ಘಾಟನೆ ಮಾಡ್ಲಾಗಿತ್ತು. ಹೀಗೆ ತಾವು ಐಸಿಸಿ ಟೂರ್ನಿಗೆ ರೆಡಿ ಅಂತಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡದೊಂದಿಗೆ ತ್ರಿಕೋನ ಸರಣಿ ಏರ್ಪಡಿಸಿತ್ತು. ಆದ್ರೆ ಈಗ ಆಗಿರೋ ಎಡವಟ್ಟು ಪಿಸಿಬಿಯ ಕೆಲಸಗಳನ್ನ ಬಯಲಿಗೆ ಎಳೆದಿದೆ. ನಿಜಕ್ಕೂ ಪಾಕಿಸ್ತಾನ ವಿಶ್ವಮಟ್ಟದ ಕ್ರೀಡಾಂಗಣವನ್ನು ಸಿದ್ಧಪಡಿಸಿದೆಯಾ ಎಂದು ಪ್ರಶ್ನಿಸುವಂತಾಗಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯವನ್ನ ಲಾಹೋರ್ನ ಗಡ್ಡಾಫಿ ಸ್ಟೇಡಿಯಮ್ನಲ್ಲಿ ಆಯೋಜನೆ ಮಾಡ್ಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 330 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಕೇವಲ 252 ರನ್ಗಳಿಗೆ ಆಲೌಟ್ ಆಯ್ತು. ಆದ್ರೆ ಇದೇ ಪಂದ್ಯದಲ್ಲಿ ನ್ಯೂಝಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಬ್ಯಾಟಿಂಗ್ ವೇಳೆ 38ನೇ ಓವರ್ ನಲ್ಲಿ ರಚಿನ್ ರವೀಂದ್ರ ಅವರು ಸ್ಕೇರ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಪಾಕಿಸ್ತಾನದ ಖುಷ್ದಿಲ್ ಶಾ ಹೊಡೆದ ಸ್ವೀಪ್ ಶಾಟ್ ನೇರವಾಗಿ ರಚಿನ್ ರವೀಂದ್ರ ಅವರ ಕಡೆಗೆ ಹೋಗಿತ್ತು. ಅದು ಕ್ಲಿಯರ್ಲಿ ಕ್ಯಾಚ್ ಆಗ್ತಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಚೆಂಡು ನೇರವಾಗಿ ಹೋಗಿ ರಚಿನ್ ರವೀಂದ್ರ ಅವರ ಮುಖಕ್ಕೇೆ ಬಿದ್ದಿದೆ. ಅಂದ್ರೆ ರಚಿನ್ಗೆ ಚೆಂಡು ಬಂದಿದ್ದು ಗೊತ್ತಾಗಿದೆ ಬಿಟ್ರೆ ಹತ್ತಿರಕ್ಕೆ ಬಂದಾಗ ಅಂದಾಜಿಗೂ ಸಿಕ್ಕಿಲ್ಲ. ಸೀದಾ ಮುಖಕ್ಕೇ ಬಡಿದಿದೆ. ಪರಿಣಾಮ ರಚಿನ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಏನಾಗ್ತಿದೆ ಅಂತಾ ಅವ್ರಿಗೆ ಗೊತ್ತಾಗೋ ಅಷ್ಟ್ರಲ್ಲೇ ಮುಖದಿಂದ ರಕ್ತ ಸೋರುತ್ತಿತ್ತು. ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಕೂಡ ಆಘಾತಗೊಂಡಿದ್ರು. ಕೂಡ್ಲೇ ಮೈದಾನಕ್ಕೆ ಆಗಮಿಸಿದ ನ್ಯೂಜಿಲೆಂಡ್ ತಂಡದ ಫಿಸಿಯೋ ಮತ್ತು ಮೈದಾನದಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರ ಮುಖವನ್ನು ಟವೆಲ್ ನಿಂದ ಮುಚ್ಚಿಕೊಂಡು ಮೈದಾನದಿಂದ ಹೊರಗೆ ಕರೆದುಕೊಂಡು ಹೋದ್ರು.
ಅಸಲಿಗೆ ರಚಿನ್ ರವೀಂದ್ರ ಗಾಯಗೊಳ್ಳೋಕೆ ಕಾರಣವೇ ಕ್ರೀಡಾಂಗಣಕ್ಕೆ ಅಳವಡಿಸಿರೋ ಫ್ಲಡ್ಲೈಟ್ ಗಳು ಎಂಬ ಆರೋಪ ಕೇಳಿ ಬಂದಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ಗಡಾಫಿ ಕ್ರೀಡಾಂಗಣವನ್ನು ನವೀಕರಿಸಲಾಗಿದೆ. ಆದರೆ ಕ್ರೀಡಾಂಗಣದಲ್ಲಿ ಅಳವಡಿಸಿರುವ ಫ್ಲಡ್‌ಲೈಟ್‌ಗಳು ಕ್ವಾಲಿಟಿಯಾಗಿಲ್ಲ. ರಚಿನ್ ಅವರು ಮಂದ ಬೆಳಕಿನಲ್ಲಿ ಚೆಂಡನ್ನು ಸರಿಯಾಗಿ ಗುರುತಿಸದೇ ಗಾಯ ಮಾಡಿಕೊಂಡಿದ್ದಾರೆ ಎಂದು ಲೋಕಲ್ ರಿಪೋರ್ಟ್ಸ್ ಕೂಡ ಹೇಳ್ತಿವೆ. ಕಳಪೆ ಗುಣಮಟ್ಟದ ಫ್ಲಡ್‌ಲೈಟ್‌ಗಳೊಂದಿಗೆ ಕ್ರೀಡಾಂಗಣಗಳನ್ನು ಮಾಡರ್ನೈಸ್ ಮಾಡಲಾಗಿದೆ ಅಂತಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗ್ತಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಐಸಿಸಿ ಹೇಗೆ ಅನುಮತಿ ನೀಡಿತು? ಕಳಪೆ ಗುಣಮಟ್ಟದ ಲೈಟ್‌ಗಳಿಂದ ರಚಿನ್ ಗಾಯಗೊಂಡಿದ್ದಾರೆ. ಆಟಗಾರರ ಸುರಕ್ಷತೆಗೆ ಐಸಿಸಿ ಬದ್ಧವಾಗಿರಬೇಕು ಎಂದು ಕಿಡಿ ಕಾರಿದ್ದಾರೆ.
ಸದ್ಯ ಇಂಟರ್ನ್ಯಾಷನಲ್ ಮಟ್ಟದಲ್ಲಿ ತಮ್ಮ ಕ್ರಿಕೆಟ್ ಮೈದಾನಗಳನ್ನು ಫುಲ್ ಪಾರ್ಶ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಪಿಸಿಬಿ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಕಳಪೆ ಲೈಟಿಂಗ್ ವ್ಯವಸ್ಥೆ ಮಾಡಿ ನಗೆ ಪಾಟಲಿಗೀಡಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇದ್ದರೂ ಇನ್ನೂ ಸರಿಯಾದ ಸ್ಟೇಡಿಯಂ ಸಿದ್ದತೆ ನಡೆಸದಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19ರಿಂದ ಆರಂಭವಾಗಲಿದೆ. ಅಲ್ದೇ ಇಂಥಾ ಸ್ಟೇಡಿಯಮ್ಗಳಲ್ಲೇ ಚಾಂಪಿಯನ್ಸ್ ಟ್ರೋಫಿ ನಡೆಸೋದು ಹೇಗೆ, ಹೀಗಾಗಿ ಬೇರೆ ಕಡೆ ಟೂರ್ನಿಯನ್ನ ಶಿಫ್ಟ್ ಮಾಡಿ ಅನ್ನೋ ಮಾತುಗಳೂ ಕೇಳಿ ಬರ್ತಿವೆ.