ಪಂಜಾಬ್ ವಿರುದ್ಧ ಚೆನ್ನೈ ತಂಡಕ್ಕೆ ಮತ್ತೆ ಸೋಲು – ಹೀನಾಯ ಸ್ಥಿತಿಗೆ ತಲುಪಿದ ಸಿಎಸ್‌ಕೆ

ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಗೆದ್ದು ಬೀಗಿದೆ. ಯುವಪ್ರತಿಭೆ ಪ್ರಿಯಾಂಶ್ ಆರ್ಯ ಶತಕದಾಟದ ನೆರವಿನಿಂದ ಚೆನ್ನೈ ವಿರುದ್ಧ ಪಂಜಾಬ್ 18 ರನ್‌ಗಳ ಜಯಗಳಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್‌ಕಿಂಗ್ಸ್ ಮತ್ತೊಂದು ಸೋಲಿನೊಂದಿಗೆ ಚೆನ್ನೈ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ಮನಸ್ತುಂಬಾ ಓದು.. ಮನಸೊಪ್ಪದ ಮದ್ವೆ.. ಮಾವನನ್ನೇ ಜೈಲಿಗೆ ಹಾಕಿಸಿದ ವಿದ್ಯಾ – ತ್ರಿವಿಕ್ರಮ್ ಗೆ ಪ್ರತಿಮಾ ಮ್ಯಾಚ್ ಆಗಲ್ವಾ?
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 201 ರನ್ ಅಷ್ಟೇ ಗಳಿಸಿ ಸೋಲನುಭವಿಸಿತು.
ಪ್ರಿಯಾಂಕ್ ಆರ್ಯನ ಶತಕದ ಆಟ (103 ರನ್, 42 ಬಾಲ್, 7 ಫೋರ್, 9 ಸಿಕ್ಸರ್) ಪಂಜಾಬ್ ಗೆಲುವಿಗೆ ನೆರವಾಯಿತು. ಮಧ್ಯಮ ಕ್ರಮಾಂಕದಲ್ಲಿ ಆಡಿದ ಬ್ಯಾಟರ್‌ಗಳೂ ನಿರಾಸೆ ಮೂಡಿಸಿದರು. ಆದರೆ, ಕೆಳ ಕ್ರಮಾಂಕದ ಬ್ಯಾಟರ್‌ಗಳಾದ ಶಶಾಂಕ್ ಸಿಂಗ್ (52), ಮಾರ್ಕೊ ಜಾನ್ಸೆನ್ (34) ತಂಡದ ಮೊತ್ತ 200 ಗಡಿ ದಾಟಲು ನೆರವಾದರು. ಚೆನ್ನೈ ಪರ ಖಲೀಲ್ ಅಹ್ಮದ್, ಆರ್.ಅಶ್ವಿನ್ ತಲಾ 2 ವಿಕೆಟ್ ಪಡೆದರು. ಮುಕೇಶ್ ಚೌಧರಿ, ನೂರ್ ಅಹ್ಮದ್ ತಲಾ 1 ವಿಕೆಟ್ ಪಡೆದರು.
ಪಂಜಾಬ್ ನೀಡಿದ 220 ರನ್ ಗುರಿ ಬೆನ್ನತ್ತಿದ ಚೆನ್ನೈ ಸೋಲನುಭವಿಸಿತು. ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಕೇವಲ 1 ರನ್ ಗಳಿಸಿದ್ದು, ತಂಡಕ್ಕೆ ಆಘಾತ ನೀಡಿತು. ರಚಿನ್ ರವೀಂದ್ರ 36 ರನ್ ಗಳಿಸಿ ಔಟಾದರು. ಈ ವೇಳೆ ಜೊತೆಯಾದ ಡಿವೋನ್ ಕಾನ್ವೆ ಮತ್ತು ಶಿವಂ ದುಬೆ ಜವಾಬ್ದಾರಿಯುತ ಆಟವು ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಕಾನ್ವೆ 49 ಬಾಲ್‌ಗೆ 6 ಫೋರ್, 2 ಸಿಕ್ಸರ್‌ನೊಂದಿಗೆ 69 ರನ್ ಗಳಿಸಿದರು. 42 ರನ್ ಗಳಿಸಿದ್ದ ದುಬೆ ದೊಡ್ಡ ಹೊಡೆತ ಕೊಡಲು ಹೋಗಿ ಕ್ಲೀನ್ ಬೌಲ್ಡ್ ಆದರು.
ಬಳಿಕ ಕ್ರೀಸ್‌ಗೆ ಬಂದ ದೋನಿ 3 ಸಿಕ್ಸರ್ 1 ಫೋರ್ ಹೊಡೆದು ಭರವಸೆ ಮೂಡಿಸಿದ್ದರು. ಈ ಮಧ್ಯೆ ಕಾನ್ವೆ ರಿಟರ್ಡ್ ಔಟ್ ತೆಗೆದುಕೊಂಡರು. ಮ್ಯಾಚ್ ಕುತೂಹಲಕಾರಿಯಾಗಿದ್ದ ಹೊತ್ತಿನಲ್ಲೇ 12 ಬಾಲ್‌ಗೆ 27 ರನ್ ಗಳಿಸಿದ್ದ ಧೋನಿ ಔಟಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಕೊನೆಗೆ ಚೆನ್ನೈ 201 ರನ್ ಗಳಿಸಿ ಸೋಲೊಪ್ಪಿಕೊಂಡಿತು.