ತೆರೆಮೇಲೆ ಬಾಲಿವುಡ್ ಕಿಂಗ್‌ಖಾನ್ ಹವಾ – ಬಾಕ್ಸ್ಆಫೀಸ್‌ಲ್ಲಿ ಧೂಳೆಬ್ಬಿಸಿದ ‘ಪಠಾಣ್’

ತೆರೆಮೇಲೆ ಬಾಲಿವುಡ್ ಕಿಂಗ್‌ಖಾನ್ ಹವಾ – ಬಾಕ್ಸ್ಆಫೀಸ್‌ಲ್ಲಿ ಧೂಳೆಬ್ಬಿಸಿದ ‘ಪಠಾಣ್’

ಬೇಷರಮ್​ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಕ್ಕಾಗಿ ದೇಶದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಶಾರುಖ್‌ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಬಾಕ್ಸಾಫೀಸ್​​ನ್ನ ಧೂಳಿಪಟ ಮಾಡ್ತಿದೆ. ರಿಲೀಸ್ ಆದ ಎರಡೇ ದಿನಕ್ಕೆ ಪಠಾಣ್ ಚಿತ್ರ ಜಗತ್ತಿನಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಂಡಿದೆ. ಐದು ವರ್ಷಗಳ ಬಳಿಕ ಶಾರುಕ್ ಖಾನ್ ಚಿತ್ರವೊಂದು ತೆರೆಗೆ ಅಪ್ಪಳಿಸಿದ್ದು, ಈ ಬಾರಿ ಕಿಂಗ್ ಖಾನ್ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಗೂ ಪಠಾಣ್ ಪಾತ್ರವಾಗಿದೆ. ಜೊತೆಗೆ ನಾನ್​ ಹಾಲಿಡೆ ಅಂದ್ರೆ ರಜೆ ಇಲ್ಲದ ದಿನದಂದು ರಿಲೀಸ್ ಆಗಿ ಅತೀ ಹೆಚ್ಚು ಹಣ ಬಾಚಿರುವ ಚಿತ್ರ ಅನ್ನೋ ದಾಖಲೆಯನ್ನೂ ಶಾರುಖ್ ಚಿತ್ರ ತನ್ನ ಹೆಸರಿಗೆ ಬರೆದುಕೊಂಡಿದೆ.

ಇದನ್ನೂ ಓದಿ:  ಅಬ್ಬಬ್ಬಾ.. ರಾಹುಲ್-ಆಥಿಯಾಗೆ ಎಂತೆಂಥಾ ಉಡುಗೊರೆಗಳು? – ಮದುವೆಗಿಂಥ ಸದ್ದು ಮಾಡ್ತಿವೆ ದುಬಾರಿ ಗಿಫ್ಟ್..!

ಬುಧವಾರ ರಿಲೀಸ್ ಆದ ಪಠಾಣ್​​ ಜಗತ್ತಿನಾದ್ಯಂತ ₹57 ಕೋಟಿ ಕಲೆಕ್ಷನ್ ಮಾಡಿದೆ. ಈ ಹಿಂದೆ ಕೆಜಿಎಫ್ ಮೊದಲ ದಿನದ ಶೋನಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.  ಪಠಾಣ್ ಚಿತ್ರ ಹಿಂದಿ ಭಾಷೆಯಲ್ಲೇ 55 ಕೋಟಿ ರೂಪಾಯಿ ಗಳಿಸಿದೆ. ಬೇರೆ ಭಾಷೆಗಳಲ್ಲಿ ಮೊದಲ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  ಭಾರತದಲ್ಲಿ 5,600 ಸ್ಕ್ರೀನ್​ಗಳಲ್ಲಿ ಪಠಾಣ್ ಸಿನಿಮಾ ಪ್ರದರ್ಶನಗೊಂಡಿದೆ. ಭಾರತದಲ್ಲಿ ಅತೀ ಹೆಚ್ಚು ಸ್ಕ್ರೀನ್​​ಗಳಲ್ಲಿ ಪಠಾಣ್ ಚಿತ್ರ ತೆರೆಕಂಡಿದೆ. ವಿದೇಶಗಳಲ್ಲಿ 2,200 ಸ್ಕ್ರೀನ್​​ಗಳಲ್ಲಿ ಪಠಾಣ್ ಚಿತ್ರ ರಿಲೀಸ್ ಆಗಿದೆ.

ಇನ್ನು ಶಾರುಖ್​ ಚಿತ್ರವನ್ನ ಸಿನಿಮಾ ಕ್ಷೇತ್ರದ ಮಂದಿ ಕೊಂಡಾಡಿದ್ದಾರೆ. ಸಿನಿರಂಗವನ್ನ ಮತ್ತೊಮ್ಮೆ ಆಳೋಕೆ ಸರಿಯಾದ ಸಮಯಕ್ಕಾಗಿ ಶಾರುಖ್ ಖಾನ್ ಕಾದು ಕುಳಿತಿದ್ರು ಅಂತಾ ಹೇಳಿದ್ದಾರೆ. ಇನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಪಠಾಣ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂಥಾ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣಬೇಕು ಎಂದಿದ್ದಾರೆ. 2018ರಲ್ಲಿ ರಿಲೀಸ್​ ಆಗಿದ್ದ ಜೀರೋ ಹೆಸರಿನ ಚಿತ್ರ ಸಂಪೂರ್ಣ ಫ್ಲಾಪ್ ಆಗಿತ್ತು. ಅದಾದ ಬಳಿಕ ಪಠಾಣ್ ಚಿತ್ರದೊಂದಿಗೆ ಬಾಲಿವುಡ್ ಬಾದ್​ಷಾ ರೀ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇದೇ ವರ್ಷ ಕಿಂಗ್​ ಖಾನ್​ರ ಜವಾನ್ ಮತ್ತು ದುನ್ಕಿ ಹೆಸರಿನ ಇನ್ನೂ ಎರಡು ಸಿನಿಮಾಗಳು ರಿಲೀಸ್ ಆಗುವ ಸಾಧ್ಯತೆ ಇದೆ.

suddiyaana