ಪಾಟ್ನಾಗೆ ಹೊರಟವನು ಸೇರಿದ್ದು ಉದಯಪುರ – ವಿಮಾನ ಪ್ರಯಾಣದ ವೇಳೆ ಆಗಿದ್ದೇನು..?

ಪಾಟ್ನಾಗೆ ಹೊರಟವನು ಸೇರಿದ್ದು ಉದಯಪುರ – ವಿಮಾನ ಪ್ರಯಾಣದ ವೇಳೆ ಆಗಿದ್ದೇನು..?

ಅಡ್ರೆಸ್ ಗೊತ್ತಿಲ್ಲದೆಯೋ, ನಿದ್ದೆ ಮಾಡ್ಕೊಂಡೋ ದಾರಿ ತಪ್ಪಿ ಮತ್ತಿನ್ಯಾವುದೋ ಸ್ಥಳಕ್ಕೆ ಹೋಗೋದನ್ನ ನೋಡಿರುತ್ತೇವೆ. ಇಲ್ಲ ಬಸ್ ಹತ್ತುವಾಗ ಎಡವಟ್ಟು ಆಗಿರೋದನ್ನೂ ಕೇಳಿದ್ದೇವೆ. ಆದ್ರೆ ಇಲ್ಲಿ ವಿಮಾನ ಪ್ರಯಾಣದ ವೇಳೆಯೇ ದೊಡ್ಡ ಅಚಾತುರ್ಯ ನಡೆದುಹೋಗಿದೆ.

ಇದನ್ನೂ ಓದಿ : ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ – ಯಾವ್ಯಾವ ವಾಹನಗಳಿಗೆ ನಿರ್ಬಂಧ, ಎಲ್ಲೆಲ್ಲಿ ಮಾರ್ಗ ಬದಲಾವಣೆ..!?

ಹೌದು. ಇಂಡಿಗೋ ವಿಮಾನದಲ್ಲಿ ಬಿಹಾರಕ್ಕೆ ಹೋಗಬೇಕಿದ್ದ ಪ್ರಯಾಣಿಕನೊಬ್ಬ ಚೂರು ಯಾಮಾರಿದ್ದಕ್ಕೆ ರಾಜಸ್ಥಾನಕ್ಕೆ ಹೋಗಿದ್ದಾನೆ. ಕಳೆದ ಜನವರಿ 30 ರಂದು ಈ ಘಟನೆ ನಡೆದಿದೆ. ವಿಷಯ ಏನಂದ್ರೆ ಅಫ್ಸಾರ್ ಹುಸೇನ್ ಎಂಬ ಪ್ರಯಾಣಿಕ ಇಂಡಿಗೋ ವಿಮಾನ 6E-214ನಲ್ಲಿ ಪಾಟ್ನಾಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ಜನವರಿ 30 ರಂದು ನಿಗದಿಯಾಗಿದ್ದ ವಿಮಾನ ಏರಲು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಇಲ್ಲೇ ನೋಡಿ ಎಡವಟ್ಟು ನಡೆದಿದ್ದು. ಅಫ್ಸಾರ್ ಬಿಹಾರಕ್ಕೆ ಹೋಗಬೇಕಿದ್ದ ವಿಮಾನ ಏರುವ ಬದಲು ಉದಯಪುರಕ್ಕೆ ತೆರಳುವ ಇಂಡಿಗೋದ 6E-319 ವಿಮಾನ ಏರಿದ್ದರು.

ವಿಮಾನ ಪಾಟ್ನಾಗೆ ಹೋಗ್ತಿದೆ ಅನ್ಕೊಂಡು ಅಫ್ಸಾರ್ ಆರಾಮಾಗಿ ಪ್ರಯಾಣ ಮಾಡಿದ್ದಾರೆ. ಆದ್ರೆ ವಿಮಾನ ಉದಯಪುರ ನಿಲ್ದಾಣಕ್ಕೆ ಬಂದಿಳಿದ ನಂತರವಷ್ಟೇ ತಮ್ಮ ತಪ್ಪಿನ ಅರಿವಾಗಿದೆ. ಕೂಡಲೇ ಅಫ್ಸಾರ್ ಹುಸೇನ್ ಉದಯಪುರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಇಂಡಿಗೋ ಸಂಸ್ಥೆಯು ಅದೇ ದಿನ ಅವರನ್ನು ದಿಲ್ಲಿಗೆ ವಾಪಸ್ ಕರೆ ತಂದು ಮರುದಿನ ಅಂದರೆ ಜನವರಿ 31ರಂದು ಪಾಟ್ನಾಕ್ಕೆ ಕರೆದೊಯ್ದಿದೆ.

ಪಾಟ್ನಾಕ್ಕೆ ತೆರಳಬೇಕಿದ್ದ ವಿಮಾನ ಏರುವ ಬದಲು ಅಲ್ಲಿಂದ ಸುಮಾರು 1,400 ಕಿಮೀ ದೂರದಲ್ಲಿ ಇರುವ ಉದಯಪುರಕ್ಕೆ ಹೋಗುವ ಬೇರೆ ವಿಮಾನದಲ್ಲಿ ಪ್ರಯಾಣಿಕನನ್ನು ಹತ್ತಿಸಿಕೊಂಡ ಘಟನೆಯ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ. ಘಟನೆಯ ಬಗ್ಗೆ ವರದಿ ಕೇಳಿದ್ದು, ವಿಮಾನಯಾನ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು, ಪ್ರಯಾಣಿಕನ ಬೋರ್ಡಿಂಗ್ ಪಾಸ್ ಅನ್ನು ಸೂಕ್ಷ್ಮವಾಗಿ ಗಮನಿಸದೇ ಇದ್ದದ್ದು ಯಾಕೆ? ಜೊತೆಗೆ ಬೋರ್ಡಿಂಗ್‌ಗೂ ಮುನ್ನ ಎರಡು ಹಂತಗಳಲ್ಲಿ ಬೋರ್ಡಿಂಗ್ ಪಾಸ್‌ಗಳನ್ನು ಪರಿಶೀಲಿಸಬೇಕು ಎಂಬ ನಿಯಮ ಇರುವಾಗ ಅವರು ತಪ್ಪಾದ ವಿಮಾನ ಏರಿದ್ದು ಹೇಗೆ ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana