ವರುಣನ ಅಬ್ಬರಕ್ಕೆ ಕುಸಿದೇ ಹೋಯ್ತು ದೇವಾಲಯದ ಒಂದು ಭಾಗ – ಮತ್ತೆ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ವರುಣನ ಅಬ್ಬರಕ್ಕೆ ಕುಸಿದೇ ಹೋಯ್ತು ದೇವಾಲಯದ ಒಂದು ಭಾಗ – ಮತ್ತೆ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉತ್ತರಾಖಂಡ್‌ ನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಗಳ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಡೆಹ್ರಾಡೂನ್‌ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಾಲಯದ ಒಂದು ಭಾಗವು ಕುಸಿದಿದೆ ಎಂದು ವರದಿಯಾಗಿದೆ.

ಭಾರಿ ಮಳೆಯಿಂದಾಗಿ ದೇವಸ್ಥಾನದ ಪ್ರವೇಶ ದ್ವಾರಕ್ಕೆ ಹೋಗುವ ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಮರಗಳು ಧರೆಗುರುಳಿವೆ. ದೇವಸ್ಥಾನಕ್ಕೆ ಹೋಗುವ ದಾರಿ ಭಾಗಶಃ ಬಂದ್ ಆಗಿದೆ. ದೇವಸ್ಥಾನದ ಒಂದು ಭಾಗ ಕುಸಿದು ಬಿದ್ದಿರುವುದರಿಂದ, ಸೋಮವಾರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಭಕ್ತರು ತೊಂದರೆಯುಂಟಾಗಿದೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳು ನಾಡು – ಸುಪ್ರೀಂ ಕೋರ್ಟ್ ಗೆ ಇಂದು ಕರ್ನಾಟಕ ಮೇಲ್ಮನವಿ ಸಲ್ಲಿಕೆ

ಇನ್ನು ಭಾರಿ ಮಳೆ ಸುರಿಯುತ್ತಿರುವುದರಿಂದಾಗಿ ಡೆಹ್ರಾಡೂನ್ ಬಳಿಯ ಲಾಂಘಾ ರಸ್ತೆಯಲ್ಲಿರುವ ಮದ್ರಾಸು ಗ್ರಾಮ ಪಂಚಾಯತ್‌ನ ಭಾಗವಾದ ಜಖಾನ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, 15 ಮನೆಗಳು ಕುಸಿದು, ಏಳು ಗೋಶಾಲೆಗಳು ಸಂಪೂರ್ಣವಾಗಿ ನಾಶವಾಗಿವೆ. ಮನೆಗಳಲ್ಲಿ 50 ಜನರು ಇದ್ದರು ಎನ್ನಲಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ್‌ ನಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡೆಹ್ರಾಡೂನ್, ಪೌರಿ, ನೈನಿತಾಲ್, ಚಂಪಾವತ್ ಮತ್ತು ಬಾಗೇಶ್ವರ್ ಸೇರಿದಂತೆ ಉತ್ತರಾಖಂಡದ ಐದು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಮಳೆ ತುಸು ವಿರಾಮ ನೀಡಿದ್ದು, ಜನತೆ ನಿರಾಳವಾಗಿರುವಾಗ ಹವಾಮಾನ ಇಲಾಖೆ ಮತ್ತೆ ಭಾರೀ ಮಳೆಯ ಸೂಚನೆ ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಆಗಸ್ಟ್ 22 ರಿಂದ 24 ರವರೆಗೆ ಭಾರೀ ಮತ್ತು ಅತಿ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು ‘ಆರೆಂಜ್ ಅಲರ್ಟ್’ ಮತ್ತು ಆಗಸ್ಟ್ 21 ರಂದು ಭಾರೀ ಮಳೆಗೆ ‘ಹಳದಿ ಅಲರ್ಟ್’ ನೀಡಿದೆ. ಚಂಬಾ ಮತ್ತು ಮಂಡಿ ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಅಪಾಯದ ಬಗ್ಗೆಯೂ ಮೆಟ್ ಎಚ್ಚರಿಕೆ ನೀಡಿದೆ. ಆಗಸ್ಟ್ 26 ರವರೆಗೆ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ.

suddiyaana