ಮುದ್ದಿನ ಗಿಳಿ ನಾಪತ್ತೆ – ಹುಡುಕಿಕೊಟ್ಟವರಿಗೆ ಬಂಪರ್‌ ಗಿಫ್ಟ್‌!

ಮುದ್ದಿನ ಗಿಳಿ ನಾಪತ್ತೆ – ಹುಡುಕಿಕೊಟ್ಟವರಿಗೆ ಬಂಪರ್‌ ಗಿಫ್ಟ್‌!

ಆ ಮನೆಯವರು ಗಿಳಿಯೊಂದನ್ನು ಬಲು ಅಕ್ಕರೆಯಿಂದಲೇ ಸಾಕಿದ್ದರು. ಸುಮಾರು 2 ವರ್ಷಗಳಿಂದ ತಮ್ಮ ಮನೆಯ ಮಗುವಂತೆ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದರು. ಆದರೆ, ಈಗ ಈ ಗಿಳಿಯೇ ಕಾಣುತ್ತಿಲ್ಲ..! ಅನ್ನ, ನೀರು ಬಿಟ್ಟು ಮುದ್ದಿನ ಗಿಳಿಯ ಬರುವಿಕೆಗಾಗಿ ಕಾಯುತ್ತಿದ್ದಾರೆ. ಮುದ್ದಿನ ಗಿಳಿಗಾಗಿ ಬೀದಿ ಬೀದಿಯಲ್ಲಿ ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲದೇ ಮನೆ ಮಗನಂತಿದ್ದ ಗಿಳಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಅಂತಾ ಡಂಗೂರ ಸಾರಿದ್ದಾರೆ.

ಏನಿದು ಘಟನೆ?

ಮಧ್ಯಪ್ರದೇಶದ ದಾಮೋಹ್‌ನ ಸಿಟಿ ಕೊತ್ವಾಲಿ ಹಿಂಭಾಗದ ಇಂದ್ರ ಕಾಲೋನಿಯಲ್ಲಿ ವಾಸಿಸುವ ಸೋನಿ ಕುಟುಂಬ ಕಳೆದ ಎರಡು ವರ್ಷಗಳಿಂದ ಗಿಣಿಯೊಂದನ್ನು ಸಾಕುತ್ತಿದ್ದರು. ಈ ಗಿಳಿ ದಿನಕಳೆದಂತೆ ಮನೆಯವರೊಂದಿಗೆ ತುಂಬಾ ಕ್ಲೋಸ್‌ ಆಗುತ್ತಾ ಹೋಯ್ತು. ಎಲ್ಲಿವರೆಗೆ ಎಂದರೆ ಗಿಳಿ ಕೂಡಾ ಮನೆಯ ಸದಸ್ಯರಲ್ಲಿ ಒಬ್ಬರು ಎಂಬಂತೆ ಮನೆಮಂದಿಗೆ ಹೊಂದಿಕೊಂಡಿತ್ತು. ಇದೀಗ ಈ ಗಿಳಿ ಕಾಣೆಯಾಗಿದೆ.

ಇದನ್ನೂ ಓದಿ: ಇನ್ನುಮುಂದೆ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ!

ಮನೆ ಮಗನಂತೆ ಮುದ್ದಾಗಿ ಸಾಕಿದ್ದ ಗಿಳಿ ನಾಪತ್ತೆಯಾಗಿರುವುದರಿಂದ ಆ ಕುಟುಂಬಸ್ಥರು ತುಂಬಾ ದುಃಖಿತರಾಗಿದ್ದಾರೆ. ಗಿಳಿಯನ್ನು ಹುಡುಕುವ ಸಲುವಾಗಿ ಬೀದಿ ಬೀದಿ ಅಲೆದಾಡಿದ್ದಾರೆ. ಮನೆ ಮಾಲೀಕ ವಿಚಾರ ಅಲ್ಲಿಗೆ ಬಿಡಲಿಲ್ಲ. ತಮ್ಮ ಮುದ್ದಿನ ಗಿಳಿಯನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗಿಳಿಯನ್ನು ಹುಡುಕಿ ಕೊಟ್ಟವರಿಗೆ 10 ಸಾವಿರ ನಗದು ಬಹುಮಾನ ನೀಡುವುದಾಗಿ ಹೇಳಿ ನಗರ ತುಂಬಾ ಪೋಸ್ಟರ್ ಅಂಟಿಸಿದ್ದಾರೆ.

ವಾಕಿಂಗ್ ಹೋದಾಗ ಕಣ್ಮರೆ

ಮನೆಯ ಯಜಮಾನ ವಾಕಿಂಗ್ ಹೋಗುವಾಗ ಪಂಜರದಲ್ಲಿದ್ದ ಗಿಳಿಯನ್ನು ಹೊರತೆಗೆದು ತನ್ನ ಹೆಗಲ ಮೇಲೆ ಕೂರಿಸಿ ರಸ್ತೆಯಲ್ಲಿ ವಾಕಿಂಗ್ ಮಾಡುವ ವೇಳೆ ಬೀದಿ ನಾಯಿಗಳು ಗಿಳಿಯನ್ನು ನೋಡಿ ಬೊಗಳಲು ಆರಂಭಿಸಿದೆ. ಹೀಗೆ ಹೆದರಿ ಮರದ ಮೇಲೆ ಕೂತ ಗಿಳಿ ಸಂಜೆಯಾದರೂ ಮನೆಗೆ ಬರಲೇ ಇಲ್ಲ. ಬಳಿಕ ಮನೆಯ ಯಜಮಾನ ಹೊರಗೆ ಹೋಗಿ ಹುಡುಕಿದಾಗ ಗಿಳಿ ಎಲ್ಲೂ ಕಾಣಲಿಲ್ಲ. ಇದರಿಂದ ಮನನೊಂದ ಮನೆ ಮಾಲೀಕ ಹಾಗೂ ಮನೆಯ ಸದಸ್ಯರು ಗಿಳಿಗಾಗಿ ಊರೆಲ್ಲಾ ಹುಡುಕಿದ್ದಾರೆ. ಆದರೆ ಗಿಳಿ ಮಾತ್ರ ಪತ್ತೆಯಾಗಲಿಲ್ಲ.

ಗಿಳಿಯ ಕೊರಗಿನಲ್ಲಿ ಊಟ ಬಿಟ್ಟ ಮನೆ ಮಂದಿ ಬಳಿಕ ಕಾಣೆಯಾಗಿರುವ ಗಿಳಿಯ ಫೋಟೋ ಒಂದನ್ನು ಪೋಸ್ಟರ್ ಮಾಡಿ ನಗರದ ಎಲ್ಲಾ ಕಡೆ ಅಂಟಿಸಿ ಗಿಳಿ ಹುಡುಕಿ ಕೊಡುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಗಿಳಿಯನ್ನು ಹುಡುಕಿ ಕೊಟ್ಟವರಿಗೆ 10 ಸಾವಿರ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ವಾಹನದಲ್ಲಿ ಮೈಕ್ ಕಟ್ಟಿ ಗಿಳಿ ಕಾಣೆಯಾಗಿರುವ ಬಗ್ಗೆ ನಗರ ತುಂಬಾ ಪ್ರಚಾರ ಮಾಡಿ ಹುಡುಕುವಂತೆ ಮನವಿ ಮಾಡಿಕೊಂಡಿದ್ದಾರೆ.

suddiyaana