ಲೋಕಸಭೆ ಕಲಾಪದ ವೇಳೆ ದಾಳಿ ಪ್ರಕರಣ – ಮನೋರಂಜನ್ ಕುಟುಂಬಸ್ಥರಿಗೆ ಅಧಿಕಾರಿಗಳ ಖಡಕ್ ಎಚ್ಚರಿಕೆ!
ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಭಾರಿ ಭದ್ರತಾ ಲೋಪ ಸಂಭವಿಸಿತ್ತು. ಇದೀಗ ಈ ಪ್ರಕರಣದ ಆರೋಪಿ ಮನೋರಂಜನ್ ಕುಟುಂಬಸ್ಥರಿಗೆ ಭಾರಿ ಸಂಕಷ್ಟ ಎದುರಾಗಿದೆ. ನಮ್ಮ ಸೂಚನೆ ಬರುವವರೆಗೂ ಮೈಸೂರು ಬಿಟ್ಟು ಹೊರಗಡೆ ತೆರಳದಂತೆ ಮನೋರಂಜನ್ ಕುಟುಂಬಕ್ಕೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣ – ಸಂಸತ್ತಿನೆದುರು ಬೆಂಕಿ ಹಚ್ಚಿಕೊಳ್ಳಲು ಪ್ಲ್ಯಾನ್ ಮಾಡಿದ್ದ ಆರೋಪಿ ಸಾಗರ್!
ಹೌದು. ಕಳೆದ ಬುಧವಾರ ಸಂಸತ್‌ನಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಮೈಸೂರು ಮೂಲದ ಆರೋಪಿ ಮನೋರಂಜನ್ ಕುಟುಂಬಸ್ಥರಿಗೆ ಸಂಕಷ್ಟ ತಲೆದೋರಿದೆ. ಮಗ ಮಾಡಿರುವ ತಪ್ಪಿಗೆ ಕುಟುಂಬಸ್ಥರು ಕೂಡ ತೊಂದರೆ ಅನುಭವಿಸುವಂತೆ ಆಗಿದೆ. ಇದೀಗ ಕೇಂದ್ರ ಗುಪ್ತಚರ ಇಲಾಖೆ ಮನೋರಂಜನ್ ಕುಟುಂಬಸ್ಥರಿಗೆ ಸೂಚನೆಯೊಂದನ್ನು ನೀಡಿದೆ. ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬೇಡಿ. ತೀರಾ ತುರ್ತು ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿಯ ಮೇಲೆ ತೆರಳಿ. ಮನೆಗೆ ಯಾವ ಸಂಬಂಧಿಕರೂ ಸದ್ಯಕ್ಕೆ ಬಾರದಂತೆ ಸೂಚನೆ ಕೊಡಿ ಎಂದು ತಿಳಿಸಿದ್ದಾರೆ.
ನಮ್ಮ ಅನುಮತಿ ಸಿಗುವವರೆಗೂ ಮನೆಗೆ ಯಾವ ಸಂಬಂಧಿಕರು ಬರುವುದು ಬೇಡ. ಪ್ರತಿ ನಿತ್ಯ ನಿಮಗೆ ಬರುವ ಅನಾಮಾದೇಯ ಕರೆಗಳ ಮಾಹಿತಿಯನ್ನ ಕಡ್ಡಾಯವಾಗಿ ಕೊಡಿ. ಎಲ್ಲಾ ಅನಾಮಧೇಯ ಕರೆಗಳನ್ನ ತಪ್ಪದೇ ಸ್ವೀಕರಿಸಿ. ನಮ್ಮ ಸೂಚನೆ ಬರುವವರೆಗೂ ಯಾವುದೇ ಪತ್ರಿಕೆ, ಹಳೇ ಪುಸ್ತಕ ಇದ್ಯಾವುದನ್ನ ಮಾರಕೂಡದು ಎಂದು ಮನೋರಂಜನ್ ಪೋಷಕರಿಗೆ ಗುಪ್ತಚರ ಇಲಾಖೆ ಸೂಚಿಸಿದೆ.
ಲೋಕಸಭಾ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಮನೋರಂಜನ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ತಿನ ಸಂದರ್ಶಕರ ಗ್ಯಾಲರಿಗೆ ಸ್ಮೋಕ್ ಬಾಂಬ್ ಸಾಗಿಸಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್‌ಗೆ ಪಾಸ್ ನೀಡಿದ್ದರಿಂದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿವೆ.
ಲೋಕಸಭಾ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಬಂಧಿತರ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ಜೋರಾಗಿದೆ.