ಒಂದೂವರೆ ವರ್ಷದ ಹಿಂದೆಯೇ ನಡೆದಿತ್ತು ಸ್ಕೆಚ್ – ಸಂಸತ್ ದಾಳಿ ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಒಂದೂವರೆ ವರ್ಷದ ಹಿಂದೆಯೇ ನಡೆದಿತ್ತು ಸ್ಕೆಚ್ – ಸಂಸತ್ ದಾಳಿ ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಸಂಸತ್ ಭವನದಲ್ಲಿ ಹೆಜ್ಜೆ ಹೆಜ್ಜೆಗೂ ಭದ್ರತಾ ಸಿಬ್ಬಂದಿ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಇದೆ ಅಂತಾ ಹೇಳಲಾಗುತ್ತೆ. ಆದ್ರೆ ಬುಧವಾರ ನಡೆದಿರೋ ದಾಳಿ ನಿಜಕ್ಕೂ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಭಾರತದ ಪ್ರಜಾಪ್ರಭುತ್ವದ ಪ್ರತೀಕವಾಗಿರುವ, ಸಾರ್ವಭೌಮತೆಯ ಬೆನ್ನೆಲುಬಾಗಿರುವ ಸಂಸತ್ ಮೇಲೆಯೇ ಅತಿದೊಡ್ಡ ದಾಳಿ ನಡೆದಿದೆ. ಹೊಸ ಸಂಸತ್ ಭವನದಲ್ಲೇ ಇಬ್ಬರು ಕೋಲಾಹಲ ಸೃಷ್ಟಿಸಿದ್ದಾರೆ. ಸ್ಮೋಕ್ ಕ್ರ್ಯಾಕರ್ಸ್ ಸಿಡಿಸಿ ರಂಪಾಟ ಮಾಡಿದ್ದಾರೆ. ಸಂಸದರ ನಡುವೆಯೇ ನಡೆದ ಈ ಘಟನೆ ಇಡೀ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ.

ಕಲಾಪ ನಡೆಯುತ್ತಿದ್ದಾಗಲೇ ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಸಂಸದರ ಮೇಜುಗಳ ಮೇಲೆ ಜಂಪ್ ಮಾಡಿದ್ದರು. ಅದ್ರಲ್ಲಿ ಸಾಗರ್ ಶರ್ಮಾ ಎಂಬಾತ ಸ್ಪೀಕರ್ ಸೀಟಿನತ್ತಲೇ ನುಗ್ಗಿದ್ದ. ಕ್ಷಣಾರ್ಥದಲ್ಲೇ ಇಡೀ ಕಲಾಪದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಕಲರ್ ಗ್ಯಾಸ್ ಸ್ಮೋಕರ್ಸ್ ಗೆ ಹೆದರಿ ಕೆಲ ಸಂಸದರು ಹೊರಗೆ ಓಡಿದ್ರು. ಇನ್ನೂ ಕೆಲ ಸಂಸದರು ಕಿಡಿಗೇಡಿಗಳನ್ನ ಹಿಡಿದು ಥಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ರು. ಸದ್ಯ ಸಂಸತ್ತಿನ ಭದ್ರತೆ ಉಲ್ಲಂಘಿಸಿದ್ದ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಸಾಗರ್ ಶರ್ಮಾ, ಮನೋರಂಜನ್ ಡಿ, ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಎನ್ನುವವರನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರ ತನಿಖೆ ವೇಳೆ ಬೆಚ್ಚಿ ಬೀಳಿಸೋ ಸತ್ಯಗಳು ಹೊರ ಬೀಳುತ್ತಿವೆ. ಸಂಸತ್ತಿಗೆ ನುಗ್ಗುವ ಸಂಚು ಇಂದು ನಿನ್ನೆಯದಲ್ಲ. ಒಂದೂವರೆ ವರ್ಷಗಳ ಹಿಂದೆಯೇ ಈ ಸ್ಕೆಚ್ ಮಾಡಿದ್ದರು ಅನ್ನೋದು ಬಯಲಾಗಿದೆ.

ಇದನ್ನೂ ಓದಿ :ಸಂಸತ್‌ನಲ್ಲಿ  ಭದ್ರತಾ ಲೋಪ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಝಾ ಅರೆಸ್ಟ್‌!

ತನಿಖೆ ವೇಳೆ ಬಯಲಾಗಿರುವ ಮಾಹಿತಿ ಪ್ರಕಾರ ಆರೋಪಿಗಳೆಲ್ಲಾ  ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಸೋಶಿಯಲ್ ಮೀಡಿಯಾ ಪೇಜ್​ನ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರು. ಸಾಗರ್ ಶರ್ಮಾ ಉತ್ತರ ಪ್ರದೇಶದವನಾಗಿದ್ದು, ಮನೋರಂಜನ್ ಕರ್ನಾಟಕದ ಮೈಸೂರಿನ ನಿವಾಸಿ. ಸಂಸತ್ತಿನ ಹೊರಗೆ ಸಿಕ್ಕಿಬಿದ್ದಿರುವ ನೀಲಂ ದೇವಿ ಹರಿಯಾಣದವರಾಗಿದ್ರೆ ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್‌ನವನು. ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿದ್ದು, ಇಲ್ಲಿಂದಲೇ ಇವರ ಷಡ್ಯಂತ್ರ ಜಾಲ ಆರಂಭವಾಗಿತ್ತು. ಸಂಸತ್ತಿಗೆ ನುಗ್ಗಲೆಂದೇ ಪ್ಲ್ಯಾನ್ ರೂಪಿಸಿದ್ದು ಡಿಸೆಂಬರ್ 10ರಂದು ಒಬ್ಬೊಬ್ಬರಾಗಿ ದೆಹಲಿಗೆ ತಲುಪಿದ್ದರು. ಡಿಸೆಂಬರ್ 10ರ ರಾತ್ರಿಯೇ ಆರೋಪಿಗಳೆಲ್ಲರೂ ಗುರುಗ್ರಾಮದಲ್ಲಿರುವ ವಿಕ್ಕಿ ಮನೆಗೆ ಬಂದಿರುವುದು ಬೆಳಕಿಗೆ ಬಂದಿದೆ. ಕಳೆದ ಜುಲೈನಲ್ಲಿ ಆರೋಪಿ ಸಾಗರ್ ಶರ್ಮಾನನ್ನ ಲಕ್ನೋದಿಂದ ದೆಹಲಿಯ ಸಂಸತ್ ಭವನದ ವಿಹಾರಕ್ಕೆ ಕಳುಹಿಸಲಾಗಿತ್ತು. ಆದ್ರೆ ಸಾಗರ್ ಸಂಸತ್ ಪ್ರವೇಶ ಯಶಸ್ವಿಯಾಗಲಿಲ್ಲ. ಆದ್ರೆ ಈ ಬಾರಿ ಸಂಸತ್​ಗೆ ನುಗ್ಗಲೇ ಬೇಕೆಂದು ಸ್ಕೆಚ್ ಹಾಕಿದ್ದು, ಅಮೋಲ್ ಮಹಾರಾಷ್ಟ್ರದಿಂದ ಸ್ಮೋಕ್ ಕ್ರ್ಯಾಕರ್ ತಂದಿದ್ದ. ಪಿತೂರಿ ನಡೆಸುವ ಮೊದಲು, ಎಲ್ಲಾ ಆರೋಪಿಗಳು ಇಂಡಿಯಾ ಗೇಟ್‌ನಲ್ಲಿ ಭೇಟಿಯಾಗಿ ಸ್ಮೋಕ್ ಕ್ರ್ಯಾಕರ್​ಗಳನ್ನು ಹಂಚಿಕೊಂಡಿದ್ದರು. ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂಸತ್ ಒಳಗೆ ಹೋಗಿದ್ರೆ ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಸಂಸತ್ತಿನ ಹೊರಗೆ ಇದ್ದರು. ಇದನ್ನೆಲ್ಲ ಲಲಿತ್ ವಿಡಿಯೋ ಮಾಡುತ್ತಿದ್ದ. ಗಲಾಟೆ ಆಗ್ತಿದ್ದಂತೆ ಪೊಲೀಸರು ಅಮೋಲ್ ಮತ್ತು ನೀಲಂ ಅವರನ್ನು ಬಂಧಿಸಿದ್ರು.

Shantha Kumari