ಮುಂಗಾರು ಅಧಿವೇಶಕ್ಕೆ ಮುಹೂರ್ತ ಫಿಕ್ಸ್ – ಹಳೆ ಸಂಸತ್ ಕಟ್ಟಡದಲ್ಲಿ ಆರಂಭ, ಹೊಸ ಕಟ್ಟಡದಲ್ಲಿ ಮುಕ್ತಾಯ

ಮುಂಗಾರು ಅಧಿವೇಶಕ್ಕೆ ಮುಹೂರ್ತ ಫಿಕ್ಸ್ – ಹಳೆ ಸಂಸತ್ ಕಟ್ಟಡದಲ್ಲಿ ಆರಂಭ, ಹೊಸ ಕಟ್ಟಡದಲ್ಲಿ ಮುಕ್ತಾಯ

ಪ್ರಜಾಪ್ರಭುತ್ವದ ಆತ್ಮ ಅಂತಾನೇ ಕರೆಯಬಹುದಾದ ನೂತನ ಸಂಸತ್ ಭವನ ಕಳೆದ ಮೇ ತಿಂಗಳಿನಲ್ಲಷ್ಟೇ ಉದ್ಘಾಟನೆಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿರೋ ಹೊತ್ತಲ್ಲೇ, ಹೊಸ ಸಂಸತ್ ಭವನ ಕಟ್ಟಡ ಕೂಡಾ ನಿರ್ಮಾಣ ಆಗಿದೆ. ಮೇ 28ರಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದರು. ರಾಜಕೀಯ ಗುದ್ದಾಟಗಳ ಮಧ್ಯದಲ್ಲೇ ಈ ನೂತನ ಸಂಸತ್ ಭವನ ಉದ್ಘಾಟನೆಯಾಗಿತ್ತು. ಇದೀಗ ಇದೇ ಭವನದಲ್ಲಿ ಮೊದಲ ಬಾರಿಗೆ ಅಧಿವೇಶನ ನಡೆಸಲು ಮುಹೂರ್ತ ಫಿಕ್ಸ್ ಆಗಿದೆ.

ಸಂಸತ್‌ನ ಮುಂಗಾರು ಅಧಿವೇಶನವು ಜುಲೈ 20ರಂದು ಆರಂಭವಾಗಲಿದ್ದು, ಆಗಸ್ಟ್ 11ರವರೆಗೂ ನಡೆಯಲಿದೆ. ಆದರೆ ಈ ಬಾರಿಯ ವಿಶೇಷತೆ ಏನು ಎಂದರೆ ಕಲಾಪವು ಹಳೆಯ ಸಂಸತ್ ಕಟ್ಟಡದಲ್ಲಿ ಆರಂಭಗೊಳ್ಳಲಿದ್ದು, ಹೊಸ ಸಂಸತ್ ಕಟ್ಟಡದಲ್ಲಿ ಅಂತ್ಯಗೊಳ್ಳಲಿದೆ. ಜುಲೈ 20ರಂದು ಹಳೆಯ ಸಂಸತ್ ಭವನದಲ್ಲಿಯೇ ಉಭಯ ಸದನಗಳ ಅಧಿವೇಶನ ಶುರುವಾಗಲಿದೆ. ಮಧ್ಯಭಾಗದಲ್ಲಿಯೇ ಅದು ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಹಾಗೆ ನಡೆದರೆ, ನೂತನ ಸಂಸತ್ ಕಟ್ಟಡದ ಉದ್ಘಾಟನೆಯಾದ ಬಳಿಕ ನಡೆಯುವ ಮೊದಲ ಅಧಿವೇಶನ ಇದಾಗಿರಲಿದೆ.

ಇದನ್ನೂ ಓದಿ : ಜುಲೈ 1 ರಿಂದಲೇ ಶ್ರೀರಂಗಪಟ್ಟಣದ ಗಣಂಗೂರು ಬಳಿ ಟೋಲ್ ಪ್ಲಾಜಾ ಓಪನ್ – ಟೋಲ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಸಂಘಟಿತ ಮೈತ್ರಿಕೂಟ ರಚನೆಗೆ ಪ್ರಯತ್ನ ನಡೆಸಿವೆ. ಅಧಿವೇಶನಕ್ಕೂ ಮುನ್ನ ಬೆಂಗಳೂರಿನಲ್ಲಿ ವಿಪಕ್ಷಗಳ ಎರಡನೇ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಅಧಿವೇಶನದಲ್ಲಿ ವಿಪಕ್ಷಗಳು ಒಗ್ಗಟ್ಟಿನಿಂದ ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಪ್ರತಿಪಾದಿಸಿರುವ ಸಮಯದಲ್ಲಿಯೇ ಅಧಿವೇಶನ ಆರಂಭವಾಗುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಯುಸಿಸಿಗೆ ಸಂಬಂಧಿಸಿದಂತೆ ಜನರಿಂದ ಸಲಹೆ, ಅಭಿಪ್ರಾಯಗಳನ್ನು ಕಾನೂನು ಆಯೋಗ ಆಹ್ವಾನಿಸಿದೆ. ಜುಲೈ 3ರಂದು ಸಂಸದೀಯ ಸಮಿತಿ ಈ ಬಗ್ಗೆ ಚರ್ಚೆ ನಡೆಸಲಿದೆ. ಹೀಗಾಗಿ ಇದು ಸೂಕ್ತ ವಿಧೇಯಕದ ರೂಪ ಪಡೆದು, ಈ ಅಧಿವೇಶನದಲ್ಲಿಯೇ ಮಂಡನೆಯಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ನೂತನ ಸಂಸತ್ ಭವನದ ವಿಶೇಷತೆಗಳು

ಇನ್ನು ನೂತನ ಸಂಸತ್ ಭವನದ ವಿಶೇಷತೆಗಳು ಏನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ. ಹಳೆಯ ಸಂಸತ್‌ ಭವನ ವೃತ್ತಾಕಾರದಲ್ಲಿದೆ. ಇದೀಗ ಹೊಸದಾಗಿ ಕಟ್ಟಿರುವ ಸಂಸತ್ ಭವನ ತ್ರಿಕೋನಾಕಾರದಲ್ಲಿ ಇದೆ. ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಸಂಸತ್‌ ಭವನವನ್ನ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡ ಬರೋಬ್ಬರಿ 150 ವರ್ಷ ಬಾಳಿಕೆ ಬರುತ್ತೆ ಅಂತಾ ತಜ್ಞರು ಅಂದಾಜಿಸಿದ್ದಾರೆ. ಭೂಕಂಪ ಆದ್ರೂ ಯಾವುದೇ ರೀತಿ ಹಾನಿ ಆಗದ ರೀತಿಯಲ್ಲಿ ಈ ಕಟ್ಟಡವನ್ನ ವಿನ್ಯಾಸ ಮಾಡಲಾಗಿದೆ. ಹಳೆಯ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಡಿಮೆ ಸ್ಥಳಾವಕಾಶ ಇತ್ತು. ಆದ್ರೆ, ಹೊಸ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ವಿಶಾಲವಾಗಿವೆ. ಲೋಕಸಭೆಯಲ್ಲಿ 888 ಜನ ಕೂರುವಂತೆ ವಿನ್ಯಾಸ ಮಾಡಲಾಗಿದೆ. ರಾಜ್ಯಸಭೆಯಲ್ಲಿ 384 ಜನ ಕೂರಬಹುದಾಗಿದೆ. ಅಂದ್ರೆ ಭವಿಷ್ಯದಲ್ಲಿ ಸಂಸದರ ಸಂಖ್ಯೆ ಹೆಚ್ಚಾದರೂ ಕೂಡಾ ಇಲ್ಲಿ ಸ್ಥಳಾವಕಾಶದ ಕೊರತೆ ಎದುರಾಗೋದಿಲ್ಲ. ಜೊತೆಗೆ ಈ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇರೋದಿಲ್ಲ. ಒಂದು ವೇಳೆ ಜಂಟಿ ಅಧಿವೇಶನ ನಡೆಸಬೇಕು ಅಂದ್ರೆ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳೋದಕ್ಕೆ ವ್ಯವಸ್ಥೆ ಮಾಡಬಹುದು. ಒಟ್ಟು 4 ಅಂತಸ್ತಿನ ಈ ಕಟ್ಟಡದಲ್ಲಿ ಸಚಿವರು, ಹಲವು ಕಮಿಟಿಗಳಿಗೂ ರೂಂಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಒಳಗೆ ವಿಶಾಲ ಜಾಗವನ್ನೂ ಬಿಡಲಾಗಿದೆ. ಇಲ್ಲಿ ಆಲದ ಮರ ನೆಡುವ ಉದ್ದೇಶ ಇದ್ಯಂತೆ.

suddiyaana