‘ರಾಗಾ’ ತಾಳವಿಲ್ಲದ ಸಂಸತ್ ಕಲಾಪ.. ಸದನ ನುಂಗಿದ ಅದಾನಿ- ಸೊರೊಸ್ – ಸಿಡಿದೆದ್ದ ರಾಹುಲ್.. ಡಿ.13ಕ್ಕೆ ಕಹಳೆ!

ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಆದ್ರೆ ಈ ಅಧಿವೇಶನ ಗದ್ದಲ ಗಲಾಟೆಯಲ್ಲೇ ಮುಳುಗಿ ಹೋಗುತ್ತಿದೆ. ಯಾವುದೇ ಒಂದು ವಿಚಾರದ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯದೇ ಕಲಾಪ ನಡೆಯುತ್ತಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತಾ ಕಲಾಪದಲ್ಲಿ ಸಮಯವನ್ನ ಹಾಳು ಮಾಡುತ್ತಿದ್ದಾರೆ. ಅದಾನಿ ಮುತ್ತು ಸೊರೊಸ್ ವಿಚಾರವಾಗಿ ಕಳೆದ ಎರಡು ವಾರಗಳಿಂದ ಕಲಾಪ ಸರಿಯಾಗಿ ನಡೆಯುತ್ತಿಲ್ಲ. ಈ ನಡುವೆ ಕಲಾಪದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುಮಗ ಕಲಾಪಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಟೂರ್ನಿಯನ್ನೇ ಬಹಿಷ್ಕರಿಸುತ್ತಾ ಪಾಕಿಸ್ತಾನ? – ಚಾಂಪಿಯನ್ಸ್ ಟ್ರೋಫಿಗೆ ಮೇಜರ್ ಟ್ವಿಸ್ಟ್
ಅದಾನಿ ವಿಷಯ ಪ್ರಸ್ತಾಪ ಮತ್ತು ಜಾರ್ಜ್ ಸೋರೊಸ್-ಕಾಂಗ್ರೆಸ್ ಸಂಪರ್ಕ ಕುರಿತ ಬಿಜೆಪಿಯವರ ಆರೋಪ ಕಲಾಪವನ್ನ ನುಂಗಿಹಾಕಿವೆ. ಸಚಿವ ರಿಜಿಜು ಶೂನ್ಯವೇಳೆಯಲ್ಲಿ ಮಾಡಿದ ಈ ಆರೋಪಕ್ಕೆ ಕಾಂಗ್ರೆಸ್ ಪಕ್ಷದ ಗೌರವ್ ಗೊಗೊಯಿ ಮತ್ತು ಇತರೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರ ಪೀಠದ ಎದುರು ಗುಂಪುಗೂಡಿ ಪ್ರತಿಭಟಿಸಿದರು. ಇದು ದಿನ ನಿತ್ಯ ಕಲಾಪವನ್ನ ತಿಂದು ಹಾಕಿದೆ.
ಸುಗಮ ಕಲಾಪಕ್ಕೆ ರಾಹುಲ್ ಮನವಿ
ಇನ್ನು ಸಂಸತ್ ಕಲಾಪ ಬಿಕ್ಕಟ್ಟಿನ ನಡುವೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿಯಾದ್ರು. ತಮ್ಮ ವಿರುದ್ಧ ಬಿಜೆಪಿ ಸಂಸದರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ದಾಖಲೆಯಿಂದ ತೆಗೆದು ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನನ್ನ ವಿರುದ್ಧ ಆರೋಪ ಮಾಡುತ್ತಿದೆ. ಆದರೆ, ಇಂತಹ ಯಾವುದೇ ಆರೋಪಗಳಿಂದ ನಾನು ವಿಚಲಿತನಾಗುವುದಿಲ್ಲ ಎಂದಿದ್ದಾರೆ. ಡಿಸೆಂಬರ್ 13 ರಿಂದ ಲೋಕಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆಗೆ ತಮ್ಮ ಪಕ್ಷ ಬಯಸಿದ್ದು, ಸುಗಮ ಕಲಾಪಕ್ಕೆ ನಾವು ಯತ್ನಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಡಿ.13 ರಂದು ಸಂವಿಧಾನ ಕುರಿತು ಚರ್ಚೆ
ಇನ್ನು ಸಂಸತ್ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸ್ಪೀಕರ್ ಜೊತೆಗೆ ಮಾತನಾಡಿದ್ದೇನೆ .ಬಿಜೆಪಿ ಎಲ್ಲಾ ರೀತಿಯ ನಿರಾಧಾರ ಆರೋಪಗಳನ್ನು ಮುಂದುವರೆಸಿದೆ. ಆದರೆ, ನಾವು ಸುಗಮ ಕಲಾಪಕ್ಕೆ ಸಹಕರಿಸಲು ನಿರ್ಧರಿಸಿದ್ದೇವೆ. ಬಿಜೆಪಿಯವರು ಏನೇ ಪ್ರಚೋದಿಸಲಿ, ಅವರಿಗೆ ಅವಕಾಶ ಮಾಡಿಕೊಡುತ್ತೇವೆ. ಆದರೆ, ನಾವು ಸುಗಮ ಕಲಾಪ ನಡೆಯಲು ಅವಕಾಶ ಮಾಡಿಕೊಡುವುದಕ್ಕೆ ರೆಡಿಯಿದ್ದೇವೆ. ಡಿಸೆಂಬರ್ 13 ರಂದು ಸಂವಿಧಾನ ಕುರಿತ ಚರ್ಚೆಗೆ ಬಯಸಿದ್ದೇವೆ. ಬಿಜೆಪಿ ಸಂಸದರು ನನ್ನ ಬಗ್ಗೆ ಏನೇ ಮಾತನಾಡಲಿ, ಆದರೆ ಸಂವಿಧಾನ ಕುರಿತು ಚರ್ಚೆ ನಡೆಯಬೇಕು. ಇದು ತುಂಬಾ ಸರಳವಾಗಿದೆ. ಅದಾನಿ ವಿಚಾರದ ಬಗ್ಗೆ ಚರ್ಚೆಗೆ ಅವರು ಸಿದ್ಧರಿಲ್ಲ. ಅದಾನಿ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅಧಿವೇಶನದ ಕೊನೆಯವರೆಗೂ ನಾವು ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯಸಭೆ ಕಲಾಪದಲ್ಲಿ ಗದ್ದಲ ಗಲಾಟೆ
ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಅವರ ಪಕ್ಷಪಾತಿ ಧೋರಣೆ ಖಂಡಿಸಿ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ರು. ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಸಭಾಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು. ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ಒತ್ತಾಯಿಸಿದರು. ಇದಕ್ಕೆ ಸಭಾಪತಿಗಳು ಒಪ್ಪದೆ, ಪಟ್ಟಿ ಮಾಡಲಾದ ವಿಷಯಗಳ ಕುರಿತು ಚರ್ಚೆಗೆ ಅನುಮತಿ ನೀಡಿದರು. ಇದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗದ್ದಲವನ್ನುಂಟು ಮಾಡಿತು. ರಾಜ್ಯಸಭೆ ಸಭಾಪತಿ ಜಗದೀಪ್ ಧನ್‌ಕರ್ ವಿರುದ್ಧ ಮಂಗಳವಾರ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಹೀಗೆ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಗದ್ದಲ ಗಲಾಟೆಯಿಂದ ಕೊನೆಕೊಳ್ಳುತ್ತಿದ್ದು, ಉಪಯೋಗಕ್ಕೆ ಬರುವಂತಹ ಒಂದೇ ಒಂದು ಚರ್ಚೆಗಳು ನಡೆಯುತ್ತಿಲ್ಲ.