ಸಂಸತ್ತಿನಲ್ಲಿ ಬಾಕ್ಸ್ ಆಫೀಸ್ ಹಿಟ್ ಮೂವಿ – ಛಾವಾ ಸಿನಿಮಾ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ!

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟಿಸಿರುವ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿದೆ. ಹಲವು ಹಳೆಯ ದಾಖಲೆಗಳನ್ನು ಮುರಿದು ಇನ್ನೂ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಇತ್ತೀಚೆಗಷ್ಟೆ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗಿ, ಆಂಧ್ರ, ತೆಲಂಗಾಣಗಳಲ್ಲಿಯೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದ ಸಿನಿಮಾವನ್ನ ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೆಎಲ್ ರಾಹುಲ್ ಮನೆಗೆ ಕಾಲಿಟ್ಟ ಮಹಾಲಕ್ಷ್ಮಿ – ಹೆಣ್ಣು ಮಗುವಿನ ತಂದೆಯಾದ ಕೆ.ಎಲ್. ರಾಹುಲ್, ಅತಿಯಾ
ಫೆ.14 ರಂದು ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಸಿನಿಮಾ ದೇಶ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಅವರ ಧೈರ್ಯ ಮತ್ತು ಔರಂಗಜೇಬನಿಂದಾಗಿ ಅನುಭವಿಸಿದ ಹಿಂಸೆಯನ್ನು ವಿವರಿಸುತ್ತದೆ. ದೇಶ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಸಿನಿಮಾ ಕುರಿತು ಕಳೆದ ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಭಾಷಣದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ವೀಕ್ಷಿಸಲಿದ್ದಾರೆ. ಮಾ.27 ರಂದು ಸಂಸತ್ತಿನಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುವುದು ಎಂದು ವರದಿಯಾಗಿದೆ.
ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ಛಾವಾ ಸಿನಿಮಾವನ್ನು ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಛಾವಾ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಸೇರಿದಂತೆ ಎಲ್ಲಾ ಕೇಂದ್ರ ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೊತೆಗೆ ಛಾವಾ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್ ಹಾಗೂ ಇಡೀ ಸಿನಿಮಾ ತಂಡವು ಹಾಜರಾಗುವ ನಿರೀಕ್ಷೆಯಿದೆ.