ಸಂಸತ್ತಿನಲ್ಲಿ ಭಾರಿ ಭದ್ರತಾ ಲೋಪ – ಕಲಾಪದ ವೇಳೆ ಪ್ರತಿಭಟಿಸಿದ ಐವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು
ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ವೈಫಲ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಂಸತ್ ಒಳಗೆ ಟಿಯರ್ ಗ್ಯಾಸ್ ದಾಳಿ ನಡೆಸಿದ್ದರು. ಈ ವಿಚಾರ ದೇಶದಾದ್ಯಂತ ಭಾರಿ ಚರ್ಚೆಯಾಗುತ್ತಿದ್ದು, ಗುರುವಾರ ಲೋಕಸಭೆಯಲ್ಲೂ ಕೂಡ ಭಾರಿ ಚರ್ಚೆಯಾಗಿದೆ. ಈ ವೇಳೆ ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಐವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ 8 ಲೋಕಸಭೆ ಸಿಬ್ಬಂದಿ ಅಮಾನತು!
ಹೌದು ಬುಧವಾರ ಸಂಭವಿಸಿದ ಭಾರಿ ಭದ್ರತಾ ಲೋಪ ಪ್ರಕರಣದ ಕುರಿತು ಲೋಕ ಸಭಾ ಕಲಾಪದ ವೇಳೆ ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದರು. ಕಲಾಪದ ವೇಳೆ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಸಂಸದರ ಅಶಿಸ್ತಿನ ವರ್ತನೆಗಾಗಿ ಐವರು ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಬೆಳಗ್ಗೆಯಷ್ಟೇ ಟಿಎಂಸಿಯ ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯಾನ್ ಅವರನ್ನು ಇದೇ ಕಾರಣಗಳಿಂದಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆಯಲ್ಲಿ 5 ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಸದನದ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಜಿಗಿದ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನ ಭದ್ರತೆಯನ್ನು ಪರಿಶೀಲಿಸುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆಯಬಹುದು ಎನ್ನಲಾಗಿದೆ. ಸರ್ವಪಕ್ಷ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಸಂಸದ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಯನ್ನು ಉಲ್ಲೇಖಿಸಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತು.