ತಂದೆಯಿಲ್ಲ, ಅಪಘಾತದಲ್ಲಿ ಕಾಲು ಹೋಯಿತು – ಭಾರತಕ್ಕೆ ಚಿನ್ನ ತಂದವನ ಯಶೋಗಾಥೆ

ತಂದೆಯಿಲ್ಲ, ಅಪಘಾತದಲ್ಲಿ ಕಾಲು ಹೋಯಿತು – ಭಾರತಕ್ಕೆ ಚಿನ್ನ ತಂದವನ ಯಶೋಗಾಥೆ

ಭಾರತದ ಜಾವೆಲಿನ್ ತಾರೆ ಸುಮಿತ್ ಆಂಟಿಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದ ಸುಮಿತ್ ಈ ಬಾರಿ ದಾಖಲೆಯೊಂದಿಗೆ ಬಂಗಾರದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಇದನ್ನೂ ಓದಿ: ಹರಾಜಿನಲ್ಲಿ ಜಸ್ಪ್ರೀತ್ ಬುಮ್ರಾ ಇತಿಹಾಸ – ಕುಲ್ದೀಪ್, ಸ್ಟಾರ್ಕ್ ಡಿಮ್ಯಾಂಡ್ ಎಷ್ಟು?

ಭಾರತದ ಜಾವೆಲಿನ್ ತಾರೆ ಸುಮಿತ್ ಆಂಟಿಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದು ಬೀಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದ ಸುಮಿತ್​, ಪ್ಯಾರಿಸ್​ನಲ್ಲೂ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ. ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್, ಮೊದಲ ಬಾರಿಗೆ 69.11 ಮೀಟರ್ ದೂರ ಎಸೆದರೆ, ಎರಡನೇ ಬಾರಿಗೆ ಅತ್ಯಧಿಕ ಅಂದರೆ 70.59 ಮೀಟರ್ ದೂರ ಎಸೆದು ಇತಿಹಾಸ ನಿರ್ಮಿಸಿದರು. ಅವರ ಮೂರನೇ ಎಸೆತ 66.66 ಮೀಟರ್ ದೂರ ಹೋಗಿ ಬಿದ್ದಿತ್ತು. ನಾಲ್ಕನೇ ಎಸೆತವನ್ನು ಅಸಿಂಧು ಎಂದು ಘೋಷಿಸಲಾಯಿತು. ಸುಮಿತ್ ಐದನೇ ಎಸೆತದಲ್ಲಿ 69.04 ಮೀ ದೂರ ಎಸೆದು ಅದ್ಭುತ ಪ್ರದರ್ಶನ ನೀಡಿದರು.

7 ಜೂನ್ 1998 ರಂದು ಜನಿಸಿದ ಸುಮಿತ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ತಂದೆ ರಾಮಕುಮಾರ್ ವಾಯುಪಡೆಯಲ್ಲಿದ್ದರು. ಅವರು ಅನಾರೋಗ್ಯದ ಕಾರಣ ನಿಧನರಾದರು. ಸುಮಿತ್​ಗೆ ಮೂವರು ಸಹೋದರಿಯರು. ತಂದೆಯ ನಿಧನದ ನಂತರ ಸುಮಿತ್ ಸಹೋದರಿಯರು, ತಾಯಿಯ ಆಶ್ರಯದಲ್ಲಿ ದುಃಖವನ್ನು ಹಂಚಿಕೊಂಡು ಬೆಳೆದರು. ತಂದೆಯನ್ನು ಕಳೆದುಕೊಂಡ ನಂತರ ಸುಮಿತ್ ಮತ್ತೊಂದು ಆಘಾತ ಎದುರಿಸಿದರು. 12ನೇ ತರಗತಿಯಲ್ಲಿದ್ದಾಗ ರಸ್ತೆ ಅಪಘಾತಕ್ಕೀಡಾಗಿದ್ದರು. ಸುಮಿತ್‌ನ ಪ್ರಾಣ ಉಳಿಯಿತು, ಆದರೆ ಕಾಲು ಕಳೆದುಕೊಂಡರು. ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದಾಗ ಬೈಕ್‌ಗೆ ಟ್ರ್ಯಾಕ್ಟರ್ ಟ್ರಾಲಿ ಡಿಕ್ಕಿ ಹೊಡೆದು ಅಪಘಾತ ನಡೆದು ಹೋಗಿತ್ತು.

ಮೊದಲೇ ತಂದೆೆಯಿಲ್ಲ. ಸಹೋದರಿಯರು, ಮನೆಯ ಜವಾಬ್ದಾರಿ ಹೆಗಲೇರಿತ್ತು. ಇದರ ಮಧ್ಯೆ ಮನೆಗೆ ಆಧಾರಸ್ತಂಭವಾಗಿದ್ದ ಸುಮಿತ್ ಕಾಲು ಕಳೆದುಕೊಂಡಿದ್ದರು. ಹಣೆಬರಹ ಅಂತಾ ಹೆದರಿ ಸುಮ್ಮನೆ ಕೂರಲಿಲ್ಲ ಸುಮಿತ್. ಸುಮಿತ್​ Sports Authority of India ಸೆಂಟರ್ ಸೇರಿಕೊಂಡರು. ಅಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ನವಲ್ ಸಿಂಗ್​ರಿಂದ ಜಾವೆಲಿನ್ ಎಸೆತ ಕಲಿತರು. 2018 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಅಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದರು. 2020 ಟೋಕಿಯೋ ಮತ್ತು 2024 ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ.

suddiyaana

Leave a Reply

Your email address will not be published. Required fields are marked *