ಟ್ಯೂಷನ್ನಲ್ಲಿ ಬೈದ್ರು ಅಂತಾ ಮನೆ ಬಿಟ್ಟು ಹೋದ ಬಾಲಕ – ಮೂರು ದಿನಗಳ ಬಳಿಕ ಸಿಕ್ಕಿದ್ದೆಲ್ಲಿ ಗೊತ್ತಾ?

ಟ್ಯೂಷನ್ನಲ್ಲಿ ಬೈದ್ರು ಅಂತಾ ಮನೆ ಬಿಟ್ಟು ಹೋದ ಬಾಲಕ – ಮೂರು ದಿನಗಳ ಬಳಿಕ ಸಿಕ್ಕಿದ್ದೆಲ್ಲಿ ಗೊತ್ತಾ?

ಮಕ್ಕಳು ಓದುವುದರಲ್ಲಿ ಹಿಂದೆ ಉಳಿದಿದ್ರೆ ಪೆಟ್ಟುಕೊಟ್ಟು ಬುದ್ದಿವಾದ ಹೇಳಿ ಓದಿಸುತ್ತಿದ್ದರು. ಶಿಕ್ಷಕರ ಕೈಯಿಂದ ಏಟು ಬೀಳುತ್ತೆ ಅನ್ನೋ ಭಯದಿಂದ ವಿದ್ಯಾರ್ಥಿಗಳು ಓದುತ್ತಿದ್ದರು. ಆದ್ರೆ ಈಗ ಮಕ್ಕಳು ಓದುವುದ್ರಲ್ಲಿ ಹಿಂದೆ ಉಳಿದಿದ್ರೆ ಪೋಷಕರು ಟ್ಯೂಷನ್‌ಗೆ ಕಳುಹಿಸುತ್ತಾರೆ. ಹೀಗಾದ್ರೂ ಮಕ್ಕಳು ಚೆನ್ನಾಗಿ ಓದಲಿ ಅಂತಾ ಬಯಸ್ತಾರೆ. ಇಲ್ಲೊಬ್ಬ ಬಾಲಕನನ್ನು ಚೆನ್ನಾಗಿ ಓದಲಿ ಅಂತಾ ಪೋಷಕರು ಟ್ಯೂಷನ್‌ಗೆ ಕಳುಹಿಸಿದ್ದಾರೆ. ಆದ್ರೆ ಆ ಬಾಲಕ ಇಲ್ಲೂ ಕಾಪಿ ಹೊಡೆದಿದ್ದು, ಬೈದು ಬುದ್ದಿವಾದ ಹೇಳಿದ್ದಕ್ಕೆ ಬಾಲಕ ಮನೆಬಿಟ್ಟು ಹೋಗಿದ್ದಾನೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಮತ್ತೊಂದು FIR ದಾಖಲು! – ಅರೆಸ್ಟ್ ಆಗ್ತಾರಾ ರಾಗಾ?

ಹೌದು, ಈ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.  ಕಳೆದ ಭಾನುವಾರ ಟ್ಯೂಷನ್‌ನಿಂದ ನಾಪತ್ತೆಯಾಗಿದ್ದ ಬಾಲಕ ಪರಿನವ್ ಮೂರು ದಿನದ ಬಳಿಕ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಸಿಕ್ಕಿದ್ದಾನೆ. ಬಾಲಕನಿಗಾಗಿ ತೀವ್ರ ಹುಡುಕಾಟ ನಡೆಸಿದ್ದ ಬೆಂಗಳೂರಿನ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಜನವರಿ 21ರಂದು 6ನೇ ತರಗತಿ ಓದುತ್ತಿದ್ದ ಪರಿನವ್ ಅನ್ನು ಅವನ ತಂದೆ ವೈಟ್ ಫೀಲ್ಡ್‌ನ ಅಲೆನ್ ಎಂಬ ಟ್ಯೂಷನ್‌ಗೆ ಡ್ರಾಪ್ ಮಾಡಿ ಹೋಗಿದ್ರು. ಅವತ್ತು ಮಧ್ಯಾಹ್ನ ಪರಿನವ್‌ ತಂದೆ ಮತ್ತೆ ಪಿಕ್ ಮಾಡೋಕೆ ತಡವಾಗಿದ್ದು ಅಷ್ಟರಲ್ಲಿ ನಾಪತ್ತೆಯಾಗಿದ್ದಾನೆ. ಟ್ಯೂಷನ್‌ನಿಂದ ಮಾರತ್‌ಹಳ್ಳಿವರೆಗೂ ನಡೆದುಕೊಂಡು ಬಂದಿರುವ ಬಾಲಕ ನಂತರ ಬಿಎಂಟಿಸಿ ಬಸ್ ಹತ್ತಿ ಮೆಜೆಸ್ಟಿಕ್‌ಗೆ ಬಂದಿದ್ದಾನೆ. ಪರಿನವ್‌ ಬಸ್ ಹತ್ತಿ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ನಂತರ ಬಾಲಕ ಎಲ್ಲೂ ಪತ್ತೆಯಾಗಿರಲಿಲ್ಲ.

ಬಾಲಕ ನಾಪತ್ತೆಯಾಗಿದ್ದಕ್ಕೆ ಪೋಷಕರು ಕಂಗಾಲಾಗಿದ್ದು, ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪೊಲೀಸರು ನಾಪತ್ತೆಯಾದ ಬಾಲಕನಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ತಂದೆ, ತಾಯಿ, ಕುಟುಂಬಸ್ಥರು ಎಲ್ಲೆಡೆ ನಾಪತ್ತೆಯಾದ ಬಾಲಕ ಪೋಸ್ಟ್ ಹಾಕೋದ್ರ ಜೊತೆಗೆ ಯಾರಿಗಾದ್ರು ಸುಳಿವು ಸಿಕ್ಕಿದ್ರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಾಲಕ ನಾಪತ್ತೆಯಾದ ಸುದ್ದಿ ವೈರಲ್ ಆದ ಮೇಲೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮೆಜೆಸ್ಟಿಕ್‌ನಿಂದ ರೈಲು ಹತ್ತಿರುವ ಪರಿನವ್ ಹೈದರಾಬಾದ್‌ಗೆ ಹೋಗಿದ್ದಾನೆ. ಹೈದರಾಬಾದ್ ನಾಂಪಲ್ಲಿ ಮೆಟ್ರೋ ನಿಲ್ದಾಣದ ಬಳಿ ಬಾಲಕ ಪತ್ತೆಯಾಗಿದ್ದು ಪೋಷಕರು ಬಾಲಕನನ್ನು ಕರೆದುಕೊಂಡು ಬರುತ್ತಿದ್ದಾರೆ. ನಾಪತ್ತೆಯಾಗಿದ್ದ ಬಾಲಕ ಪತ್ತೆಯಾಗಿದ್ದಕ್ಕೆ ಪೋಷಕರ ಮುಖದಲ್ಲಿ ಮತ್ತೆ ಸಂತಸ ಮೂಡಿದೆ.

Shwetha M