ಟೊಮ್ಯಾಟೊಗೆ ಈಗ ಚಿನ್ನದ ಬೆಲೆ – ಕೆಂಪು ರಾಜನಿಂದಲೇ ಮಗಳಿಗೆ ತುಲಾಭಾರ ಮಾಡಿಸಿದ ಪೋಷಕರು!

ಟೊಮ್ಯಾಟೊಗೆ ಈಗ ಚಿನ್ನದ ಬೆಲೆ – ಕೆಂಪು ರಾಜನಿಂದಲೇ ಮಗಳಿಗೆ ತುಲಾಭಾರ ಮಾಡಿಸಿದ ಪೋಷಕರು!

ಸಂಕಷ್ಟದ ಸಮಯದಲ್ಲಿ ದೇವರ ಸನ್ನಿಧಿಯಲ್ಲಿ ತುಲಾಭಾರ ಮಾಡಿಸುತ್ತೇವೆ ಅಂತಾ ಅನೇಕರು ಹರಕೆ ಹೊರುತ್ತಾರೆ. ತುಲಾಭಾರದ ವೇಳೆ ಅಕ್ಕಿ, ಬೆಲ್ಲ, ಸಕ್ಕರೆ, ನಾಣ್ಯ, ತೆಂಗಿನಕಾಯಿ, ದವಸ ಧಾನ್ಯ ಹೀಗೆ ನಾನಾ ವಸ್ತುಗಳ ತುಲಾಭಾರ ನಡೆಯುತ್ತದೆ. ಕೆಲವರು ಚಿನ್ನ-ಬೆಳ್ಳಿಯಿಂದ ತುಲಾಭಾರ ಮಾಡಿಸಿಕೊಳ್ಳುವುದೂ ಉಂಟು. ಆದರೆ ಇಲ್ಲೊಂದು ಕಡೆ ಟೊಮೆಟೊಗಳಿಂದಲೇ ತುಲಾಭಾರ ನಡೆದಿದೆ!

ಟೊಮ್ಯಾಟೊ ಬೆಲೆ ಜನರ ನಿದ್ದೆಗೆಡಿಸಿದೆ. ದಿನ ನಿತ್ಯ ಬೆಳಗಾದರೆ ಪೆಟ್ರೋಲ್‌, ಚಿನ್ನದ ಬೆಲೆಯಂತೆ ಟೊಮ್ಯಾಟೊ ದರ ಎಷ್ಟು ಅಂತಾ ಕೇಳುವಂತಾಗಿದೆ. ಆದರೆ ಅಡುಗೆಮನೆಯ ಕೆಂಪು ರಾಜನ ಬೆಲೆ ಹೆಚ್ಚಾದ ಬೆನ್ನಲ್ಲೇ ಟೊಮ್ಯಾಟೊ ಗಿಫ್ಟ್ ಮಾಡೋದು, ಅಂಗಡಿಗೆ ಸಿಸಿ ಟಿವಿ ಅಳವಡಿಸೋದು, ಟೊಮ್ಯಾಟೊವನ್ನು ಕಾಯಲು ಬೌನ್ಸರ್‌ಗಳನ್ನು ನೇಮಿಸೋದನ್ನ ಕೇಳಿದ್ದೇವೆ. ಇದೀಗ ಇಲ್ಲೊಂದು ಕುಟುಂಬ ಟೊಮ್ಯಾಟೊದಿಂದ ಮಗಳ ತುಲಾಭಾರ ಮಾಡಿದ್ದಾರೆ.

ಇದನ್ನೂ ಓದಿ: ಚೀತಾಗಳಿಗೆ ಕಂಟಕವಾಯ್ತು ರೇಡಿಯೋ ಕಾಲರ್‌! – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ನೂಕಲಮ್ಮ ದೇವಸ್ಥಾನದಲ್ಲಿ ದುಬಾರಿ ಬೆಲೆಯ ಟೊಮ್ಯಾಟೊ ತುಲಾಭಾರ ನಡೆದಿದೆ. ಅನಕಾಪಲ್ಲಿ ಪಟ್ಟಣದ ಮಲ್ಲ ಜಗ್ಗ ಅಪ್ಪರಾವ್ ಮತ್ತು ಮೋಹಿನಿ ದಂಪತಿಯು ತಮ್ಮ ಪುತ್ರಿ ಭವಿಷ್ಯಾಳಿಗೆ ಟೊಮ್ಯಾಟೊಗಳಲ್ಲಿ ತುಲಾಭಾರ ನಡೆಸಿದ್ದಾರೆ.

ಭವಿಷ್ಯಾಳ ತುಲಾಭಾರ ನಡೆಸುವ ವೇಳೆ ಆಕೆಯ ತೂಕಕ್ಕೆ ಸಮನಾಗಿ 51 ಕೆಜಿ ಟೊಮ್ಯಾಟೊ ಇಡಲಾಗಿದ್ದು, ಅದರ ಜೊತೆ ಬೆಲ್ಲ ಮತ್ತು ಸಕ್ಕರೆಯನ್ನು ಕೂಡ ಇಡಲಾಗಿತ್ತು. ತುಲಾಭಾರಕ್ಕೆ ಬಳಸಿದ ಟೊಮ್ಯಾಟೊ ಮತ್ತು ಸಕ್ಕರೆಯನ್ನು ನೂಕಲಮ್ಮ ದೇವಸ್ಥಾನದಲ್ಲಿ ಪ್ರತಿನಿತ್ಯ ನೀಡುವ ಅನ್ನದಾನಕ್ಕೆ ಬಳಸಲಾಗುವುದು ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 120 ರಿಂದ 150 ರೂಪಾಯಿ ಇದ್ದುದರಿಂದ ತುಲಾಭಾರದಲ್ಲಿ ದರ್ಶನಕ್ಕೆ ಬಂದ ಭಕ್ತರು ಆಶ್ಚರ್ಯಚಕಿತರಾಗಿ ವೀಕ್ಷಿಸಿದ್ದಾರೆ.

ದೇಶಾದ್ಯಂತ ಟೊಮ್ಯಾಟೊ ಬೆಲೆ ಗಗನಕ್ಕೇರಿರುವ ಈ ವೇಳೆಯಲ್ಲಿ ಟೊಮ್ಯಾಟೊ ತುಲಾಭಾರ ವಿಶೇಷವಾಗಿ ಕಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ತುಲಾಭಾರದ ಫೋಟೋ ವೈರಲ್​ ಆಗಿದೆ. ಟೊಮ್ಯಾಟೊ ಬೆಲೆ ಏರಿಕೆಯಿಂದಾಗಿ ಕೆಲವು ಹೋಟೆಲ್‌ಗಳು ತಮ್ಮ ಆಹಾರಗಳಲ್ಲಿ ಟೊಮ್ಯಾಟೊ ಬಳಸುವುದನ್ನು ಸಹ ಕಡಿಮೆ ಮಾಡಿವೆ. ಪ್ರತಿಷ್ಠಿತ ಫಾಸ್ಟ್​ಫುಡ್​ ಕಂಪನಿ ಮೆಕ್‌ಡೋನಾಲ್ಡ್ಸ್, ಪಿಜ್ಜಾ, ಬರ್ಗರ್​ನಲ್ಲಿ ಟೊಮ್ಯಾಟೊ ಹಾಕಲ್ಲ ಅಂತ ಹೇಳಿದೆ. ಕೆಲವೆಡೆ ರೈತ ಬೆಳೆದ ಟೊಮ್ಯಾಟೊ ಬೆಳೆಯ ಕಳ್ಳತನವಾಗುತ್ತಿದೆ.

suddiyaana