ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ.. -ನಿಂಬೆಹಣ್ಣು ಗಂಟಲಿನಲ್ಲಿ ಸಿಲುಕಿ 9 ತಿಂಗಳ ಕಂದಮ್ಮ ಸಾವು!

ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ.. -ನಿಂಬೆಹಣ್ಣು ಗಂಟಲಿನಲ್ಲಿ ಸಿಲುಕಿ 9 ತಿಂಗಳ ಕಂದಮ್ಮ ಸಾವು!

ಮನೆಯಲ್ಲಿ ಮಕ್ಕಳು ಇದ್ದರೆ ಮೈ ಎಲ್ಲಾ ಕಣ್ಣಾಗಿರಬೇಕು.. ಕೈಗೆ ಸಿಕ್ಕ ವಸ್ತುಗಳನ್ನ ಹಿಡಿದು ಆಟವಾಡುತ್ತಿರುತ್ತಾರೆ.. ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುತ್ತಾರೆ.. ಒಂಚೂರು ಯಾಮಾರಿದರೂ ನಡೆಯಬಾರದ ದುರಂತ ನಡೆದು ಹೋಗುತ್ತದೆ. ಇಲ್ಲೊಂದು ಮಗು ಆಟವಾಡುತ್ತಿರುವ ವೇಳೆ ನಿಂಬೆ ಹಣ್ಣಿನ ರೂಪದಲ್ಲಿ ಯಮ ಎಂಟ್ರಿಕೊಟ್ಟಿದ್ದಾನೆ. ನಿಂಬೆಹಣ್ಣು ಗಂಟಲಿನಲ್ಲಿ ಸಿಲುಕಿ 9 ತಿಂಗಳ ಮಗುವೊಂದು ಸಾವನ್ನಪ್ಪಿದೆ.

ಇದನ್ನೂ ಓದಿ: ಚೀನಾ ತೆಕ್ಕೆಗೆ ಬಿದ್ದ ಮಾಲ್ಡೀವ್ಸ್ ಸ್ಥಿತಿ ಏನಾಗಿದೆ ? – ಭಾರತಕ್ಕೆ ಚೀನಾದಿಂದ ಕಾದಿದೆಯಾ ಅಪಾಯ?

ಈ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. 9 ತಿಂಗಳ ಹೆಣ್ಣು ಮಗು ಆಟವಾಡುತ್ತಿರುವಾಗ ಆಕಸ್ಮಿಕವಾಗಿ ನಿಂಬೆಹಣ್ಣನ್ನು ನುಂಗಿದೆ. ನಿಂಬೆ ಹಣ್ಣು ಗಂಟಲಿನಲ್ಲಿ ಸಿಲುಕಿದ್ದು, ಉಸಿರುಗಟ್ಟಿ ಸಾವನ್ನಪ್ಪಿದೆ. ಮೃತ ಬಾಲಕಿಯನ್ನು ಜಸ್ವಿತಾ ಎಂದು ಗುರುತಿಸಲಾಗಿದೆ.

ಪೆದ್ದವಡುಗೂರು ಮಂಡಲದ ಮಲ್ಲೇನಿಪಲ್ಲಿಯ ಸಕಿದೀಪ ಮತ್ತು ಗೋವಿಂದರಾಜ್ ದಂಪತಿ ಏಳು ವರ್ಷಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ವಿಧಿಯ ಆಟವೇ ಕ್ರೂರವಾಗಿತ್ತು. ನಿಂಬೆಹಣ್ಣಿನ ರೂಪದಲ್ಲಿ ಸಾವು ಆ ಪುಟ್ಟ ಹುಡುಗಿಯನ್ನು ಬೆನ್ನಟ್ಟಿತು. ಜಸ್ವಿತಾ ಮನೆಯ ಜಗುಲಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ ವರಾಂಡಾದಲ್ಲಿ ಬಿದ್ದಿದ್ದ ನಿಂಬೆಹಣ್ಣನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿದ್ದಾಳೆ.

ಕೂಡಲೇ ಅದನ್ನು ಗಮನಿಸಿದ ತಾಯಿ  ಗಂಟಲಲ್ಲಿ ಸಿಲುಕಿದ್ದ ನಿಂಬೆಹಣ್ಣನ್ನು ತೆಗೆಯಲು ಯತ್ನಿಸಿದ್ದಾಳೆ. ಆದರೆ ಸಾಧ್ಯವಾಗಿಲ್ಲ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿಗೆ ಉಸಿರಾಡಲು ತೊಂದರೆಯಾಗುತ್ತಿದ್ದು, ಉತ್ತಮ ಚಿಕಿತ್ಸೆಗಾಗಿ ಪಾಮಿಡಿಗೆ ಕರೆದೊಯ್ಯಲಾಗಿದೆ.

ವೈದ್ಯರು ಪರೀಕ್ಷಿಸಿ ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಮಗಳ ಸಾವಿನಿಂದ ದಂಪತಿ ದುಃಖತಪ್ತರಾಗಿದ್ದರು. ಏಳು ವರ್ಷಗಳ ನಂತರ ಜನಿಸಿದ ಮಗುವನ್ನು ಕಳೆದುಕೊಂಡಿದ್ದಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Shwetha M