ಪರಪ್ಪನ ಅಗ್ರಹಾರದಲ್ಲಿ ಬೀಡಿ, ಸಿಗರೇಟ್‌ ಬ್ಯಾನ್!‌ – ಊಟ ಬಿಟ್ಟು ಪ್ರತಿಭಟನೆಗಿಳಿದ ಖೈದಿಗಳು!

ಪರಪ್ಪನ ಅಗ್ರಹಾರದಲ್ಲಿ ಬೀಡಿ, ಸಿಗರೇಟ್‌ ಬ್ಯಾನ್!‌ – ಊಟ ಬಿಟ್ಟು ಪ್ರತಿಭಟನೆಗಿಳಿದ ಖೈದಿಗಳು!

ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಖೈದಿಗಳಿಗೆ ಖಡಕ್‌ ರೂಲ್ಸ್‌ಗಳನ್ನ ಜಾರಿಗೆ ತರಲಾಗುತ್ತಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರದಲ್ಲಿ  ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್ ಬಂದ್ ಮಾಡಲಾಗಿತ್ತು. ಇದೀಗ ಜೈಲಾಧಿಕಾರಿಗಳ ವಿರುದ್ಧ ಖೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 15 ದಿನದಲ್ಲೇ ಕೋಟಿ ಒಡೆಯನಾದ ಅಯ್ಯಪ್ಪ! – ಶಬರಿಮಲೆ ಅಯ್ಯಪ್ಪನ ಹುಂಡಿಗೆ 92 ಕೋಟಿ ರೂ!

ಜೈಲಿನಲ್ಲಿನ ಅಕ್ರಮ ಚಟುವಟಿಕೆಗಳ ವಿಡಿಯೋ ಹೊರಬಂದ ಬೆನ್ನಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಭೆ ನಡೆಸಿ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಿದ್ದರು. ಇದರ ಬಳಿಕ ಸರ್ಕಾರ ರಾಜ್ಯದ ಎಲ್ಲಾ ಕಾರಾಗೃಹಗಳ ಸುಧಾರಣೆಗಾಗಿ ಉನ್ನತ ಮಟ್ಟದ ಹೈಪವರ್ ಸಮಿತಿಯನ್ನು ರಚಿಸಿದೆ. ಅಲ್ಲದೇ  ಸರ್ಕಾರ ಜೈಲು ಆಡಳಿತದಲ್ಲಿ ಬದಲಾವಣೆ ಮಾಡಿ ಅಂಶುಕುಮಾರ್ ಅವರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಿತ್ತು. ಅವರ ನಿರ್ದೇಶನದಂತೆ ಜೈಲಿನಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್ ಹಾಗೂ ಇತರ ನಿಷೇಧಿತ ವಸ್ತುಗಳ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿತ್ತು. ಇದೀಗ ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್ ಬಂದ್ ಮಾಡಿದ್ದಕ್ಕೆ ಕೈದಿಗಳು ಪ್ರತಿಭಟನೆಗಿಳಿದಿದ್ದಾರೆ. ಕಳೆದ ಮೂರು ದಿನಗಳಿಂದ ಊಟ ತಿಂಡಿ ಬಿಟ್ಟು ಧರಣಿ ಮಾಡುತ್ತಿರುವ ಬಂಧಿತರು ನಿಷೇಧಿತ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಜೈಲು ಕೈಪಿಡಿ ಪ್ರಕಾರ ಈ ವಸ್ತುಗಳ ಮಾರಾಟ ಕಾನೂನುಬಾಹಿರವಾಗಿರುವ ಕಾರಣ ಜೈಲು ಸಿಬ್ಬಂದಿಯೇ ಇದುವರೆಗೆ ಅವುಗಳನ್ನು ಒಳಕ್ಕೆ ತರಲಾಗುತ್ತಿದ್ದುದಾಗಿ ಆರೋಪಿಸಲಾಗಿತ್ತು. ಇತ್ತೀಚಿನ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದರಿಂದ ಆಡಳಿತ ಮತ್ತಷ್ಟು ಜಾಗೃತಗೊಂಡಿದೆ. ಈ ಹಿನ್ನೆಲೆ ಬೀಡಿ–ಸಿಗರೇಟ್ ಮಾರಾಟ ನಿಲ್ಲಿಸಿದ್ದಕ್ಕೆ ಅಸಮಾಧಾನಗೊಂಡ ಕೈದಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ದಿನಗಳಿಂದ ಕೈದಿಗಳಿಂದ ಧರಣಿ ಮತ್ತು ಉಪವಾಸ ಪ್ರತಿಭಟನೆ ನಡೆಸುತ್ತಿದ್ದು, ಮಾರಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಜೈಲು ನಿಯಮಾವಳಿಯ ಪ್ರಕಾರವೇ ಕ್ರಮ ಜರುಗಿಸಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ.

Shwetha M