ಪಪ್ಪಾ.. ನಾನು ಇನ್ನೂ ಬದುಕಿದ್ದೇನೆ..! – ಮಗಳ ಅಂತ್ಯಸಂಸ್ಕಾರದ ನಂತರ ಬಂತು ವಿಡಿಯೋ ಕಾಲ್!

ಪಪ್ಪಾ.. ನಾನು ಇನ್ನೂ ಬದುಕಿದ್ದೇನೆ..! – ಮಗಳ ಅಂತ್ಯಸಂಸ್ಕಾರದ ನಂತರ ಬಂತು ವಿಡಿಯೋ ಕಾಲ್!

ಮನೆ ಮಗಳು ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಳಿ ಬದುಕಬೇಕಾಗಿದ್ದ ಮಗಳು ಶವವಾಗಿ ಮಲಗಿದ್ದಾಳೆ ಎಂದು ಪೋಷಕರು ಶೋಕದಲ್ಲಿ ಮುಳುಗಿದ್ದರು. ದುಖಃದಲ್ಲಿಯೇ ಸಂಬಂಧಿಕರು, ಗ್ರಾಮಸ್ಥರು ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ತನ್ನ ಮುದ್ದು ಮಗಳ ಚಿತೆಗೆ ಬೆಂಕಿ ಇಡಲು ತಂದೆಗೆ ಧೈರ್ಯ ಸಾಲಲಿಲ್ಲ. ಅಜ್ಜನೇ ಮೊಮ್ಮಗಳ ಅಂತಿಮ ಕಾರ್ಯ ಮಾಡಬೇಕಾಯಿತು. ಅಂತಿಮ ವಿಧಿವಿಧಾನ ನೆರವೇರಿದ ನಂತರ ಶ್ರಾದ್ಧ ಕರ್ಮ ತಯಾರಿಯಲ್ಲಿ ಕುಟುಂಬಸ್ಥರು ತೊಡಗಿದರು. ಅಷ್ಟರಲ್ಲಾಗಲೇ ಒಂದು ವಿಡಿಯೋ ಕಾಲ್‌ಬಂತು.. ಪಪ್ಪಾ.. ನಾನು ಇನ್ನೂ ಬದುಕಿದ್ದೇನೆ ಎಂದು ಧ್ವನಿಯೊಂದು ಕೇಳಿದೆ! ಈ ಧ್ವನಿಯನ್ನು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ!

ಕುಟುಂಬಸ್ಥರು ಶ್ರಾದ್ಧ ತಯಾರಿಯಲ್ಲಿ ತೊಡಗಿದ್ದಾಗ ಬಂದ ಕರೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ ಯುವತಿಯದ್ದಾಗಿತ್ತು. ಅವರ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ಅದಾಗಲೇ ಮಾಡಿ ಮುಗಿಸಿದ್ದರು. ಹಾಗಾದರೆ ಅದು ಆಕೆಯ ಶವವಲ್ಲದಿದ್ದರೆ ಯಾರ ಶವ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಮೃತ ದೇಹವನ್ನು ಗುರುತಿಸುವಲ್ಲಿ ಹೇಗೆ ತಪ್ಪಾಯಿತು ಎಂದು ಸಂಬಂಧಿಕರು ಚಿಂತಿತರಾಗಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ – ಪ್ರೀತಿಸಿ ಒಂದಾಗಿದ್ದ ಕಿರಿಕ್ ಕೀರ್ತಿ, ಅರ್ಪಿತಾ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯ

ಏನಿದು ಘಟನೆ?

ಬಿಹಾರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಅಂಶು ಕುಮಾರಿ ಎಂಬ ಯುವತಿ ಕಳೆದು ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಎಷ್ಟು ಹುಡುಕಿದರೂ ಆಕೆ ಸಿಕ್ಕಿರಲಿಲ್ಲ. ಮಾಹಿತಿಯ ಪ್ರಕಾರ, ಆಗಸ್ಟ್ 15 ರಂದು ದುಧ್ವಾ ಗ್ರಾಮದ ಕಾಲುವೆಯಲ್ಲಿ ತೇಲುತ್ತಿದ್ದ ಅಪರಿಚಿತ ಹುಡುಗಿಯ ಶವವನ್ನು ಪೊಲೀಸರು ವಶಪಡಿಸಿಕೊಂಡರು. ಮೃತದೇಹದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬಿಶನ್‌ಪುರದ ನಿವಾಸಿ ವಿನೋದ್ ಮಂಡಲ್ ಮೃತ ದೇಹವನ್ನು ತನ್ನ ಮಗಳು ಅಂಶು ಕುಮಾರಿ ಎಂದು ಗುರುತಿಸಿದ್ದಾರೆ. ಅದು ಹಲವು ದಿನಗಳ ಶವವಾಗಿದ್ದರಿಂದ ಆಕೆಯ ಮುಖ ಘೋರವಾಗಿತ್ತು. ಯುವತಿಯ ದೇಹದ ಮೇಲಿದ್ದ ಬಟ್ಟೆ ಮತ್ತು ಬೆರಳುಗಳ ಆಧಾರದ ಮೇಲೆ ಸಂಬಂಧಿಕರು ಮೃತದೇಹವನ್ನು ಗುರುತಿಸಿದ್ದಾರೆ.

ಯುವಕನನ್ನು ಲವ್ ಮಾಡಿದ್ದ ಅಂಶು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಮಗಳನ್ನು ತಮ್ಮದೇ ಮಟ್ಟದಲ್ಲಿ ಹುಡುಕಿದರೂ ಆಕೆಯ ಕುರುಹು ಪತ್ತೆಯಾಗಿರಲಿಲ್ಲ. ಹಾಗಾಗಿ ಅಂಶುವನ್ನು ಕೊಂದು ಶವವನ್ನು ಕಾಲುವೆಗೆ ಎಸೆಯಲಾಗಿದೆ ಎಂದು ಸಂಬಂಧಿಕರು ಊಹಿಸಿದ್ದಾರೆ.

ಅಂಶು ಕುಮಾರಿ ಮನೆಯಿಂದ ನಾಪತ್ತೆಯಾದ ಬಳಿಕ ತನ್ನ ಪ್ರಿಯಕರನನ್ನು ದೇವಸ್ಥಾನದಲ್ಲಿ ಮದುವೆಯಾಗಿ ತನ್ನ ಅತ್ತೆಯೊಂದಿಗೆ ವಾಸವಾಗಿದ್ದಳು. ಇಲ್ಲಿ, ತನ್ನ ಅಂತ್ಯಕ್ರಿಯೆಯ ಸುದ್ದಿ ಮಾಧ್ಯಮದಲ್ಲಿ ಬಂದಾಗ ಅಂಶು ದಿಗ್ಭ್ರಮೆಗೊಳ್ಳುತ್ತಾಳೆ. ಬಂಧುಗಳ ಒಪ್ಪಿಗೆ ಇಲ್ಲದೇ ಮದುವೆಯಾಗಿರುವ ಭಯದಿಂದ ಕೊನೆಗೆ ಶುಕ್ರವಾರ ತನ್ನ ತಾಯಿಯ ಮನೆಗೆ ವಿಡಿಯೋ ಕಾಲ್ ಮಾಡಿ ತಾನು ಬದುಕಿರುವುದಾಗಿ ತಿಳಿಸಿದ್ದಾಳೆ.

ಅಂಶು ಕುಮಾರಿ ಈಗ ಬದುಕುಳಿದಿರುವ ಸಾಕ್ಷಿ ಬಯಲಿಗೆ ಬಂದಿದ್ದು, ಅದು ಯಾವ ಬಾಲಕಿಯ ಮೃತದೇಹ ಎಂಬುವುದು ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿದೆ. ಆ ಮೃತದೇಹ ಗಮನಿಸಿದಾಗ ಅತ್ಯಾಚಾರದ ನಂತರ ಕೊಲೆಯಾಗಿರುವ ಸಾಧ್ಯತೆಯೂ ವ್ಯಕ್ತವಾಗಿದ್ದು, ಪೊಲೀಸರ ಸವಾಲು ಕೂಡ ಹೆಚ್ಚಿದೆ. ಅಪರಿಚಿತ ಮೃತದೇಹದ ಅಂತಿಮ ಸಂಸ್ಕಾರವನ್ನು ಮಾಡಲಾಗಿದೆ. ಮೃತದೇಹದ ಬಳಿ ಸಿಕ್ಕ ಅಗತ್ಯ ವಸ್ತುಗಳು ಹಾಗೂ ಬಟ್ಟೆಗಳು ಇನ್ನೂ ಸುರಕ್ಷಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮೃತದೇಹ ಯಾರದ್ದೆಂದು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

suddiyaana