ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಕ್ರಿಕೆಟ್ ಜಗತ್ತಿನ ಹೀರೋ – ಜೈಸ್ವಾಲ್ ಯಶಸ್ಸಿನ ಹಿಂದಿದೆ ರೋಚಕ ಕಥೆ..!

ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಕ್ರಿಕೆಟ್ ಜಗತ್ತಿನ ಹೀರೋ – ಜೈಸ್ವಾಲ್ ಯಶಸ್ಸಿನ ಹಿಂದಿದೆ ರೋಚಕ ಕಥೆ..!

ಐಪಿಎಲ್‌ನಲ್ಲಿ ಮಿಂಚುತ್ತಿರುವ ಕ್ರಿಕೆಟ್ ತಾರೆ ಯಶಸ್ವಿ ಜೈಸ್ವಾಲ್ ಚೊಚ್ಚಲ ಶತಕ ಭಾರಿಸುವ ಮೂಲಕ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಅವರ ಕ್ರಿಕೆಟ್ ಪಯಣವೇ ಒಂದು ರೋಚಕ ಕಥೆ. ಜೈಸ್ವಾಲ್ ಮೂಲತಃ ಉತ್ತರ ಪ್ರದೇಶದ ಹುಡುಗ. 11ನೇ ವಯಸ್ಸಿಗೆ ಕ್ರಿಕೆಟ್ ಆಟಗಾರ ಆಗಬೇಕೆಂಬ ಮಹದಾಸೆಯಿಂದ ಪುಟ್ಟ ಹುಡುಗ ಮನೆಬಿಟ್ಟು ಮುಂಬೈನತ್ತ ಪಯಣ ಬೆಳೆಸಿದ. ನಂತರ ಜೈಸ್ವಾಲ್ ಜೀವನದಲ್ಲಿ ನಡೆದಿದ್ದು ಏಳುಬೀಳಿನ ಹಾದಿ.. ಅದೆಲ್ಲವನ್ನೂ ಮೀರಿ ಬೆಳೆದ ಜೈಸ್ವಾಲ್ ಈಗ ಕ್ರಿಕೆಟ್ ಲೋಕದ ಭರವಸೆಯ ತಾರೆ.

ಇದನ್ನೂ ಓದಿ:  ನನ್ನ ಕಷ್ಟ ನನಗೆ ಮಾತ್ರ ಇರಲಿ, ಬೇರೆ ಬಡಪ್ರತಿಭೆಗಳೂ ಬೆಳೆಯಲಿ – ರಿಂಕು ಸಿಂಗ್ ರಿಯಲಿ ಗ್ರೇಟ್..!

ಮಧ್ಯಮ ವರ್ಗದ ಕುಟುಂಬದ ಜೈಸ್ವಾಲ್ ಅಪ್ಪ, ಪುಟ್ಟ ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡಿದ್ದರು. 6 ಮಕ್ಕಳಲ್ಲಿ ನಾಲ್ಕನೆಯವನಾದ ಜೈಸ್ವಾಲ್‌ಗೆ ಕ್ರಿಕೆಟ್ ನದ್ದೇ ಗುಂಗು. ಕ್ರಿಕೆಟ್ ಆಡುತ್ತೇನೆ ಅನ್ನೋ ಹಠತೊಟ್ಟ ಹುಡುಗ, ಉತ್ತರಪ್ರದೇಶದಿಂದ ಮನೆ ಬಿಟ್ಟು ಮುಂಬೈಗೆ ಬರುತ್ತಾನೆ. ಈ ಕುರಿತಂತೆ 2020ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶಸ್ವಿ ಜೈಸ್ವಾಲ್, ಮೊದಲಿಗೆ ನಾನು ಮುಂಬೈನ ಡೈರಿಯಲ್ಲಿ ಮಲಗುತ್ತಿದ್ದೆ. ಇದಾದ ಬಳಿಕ ನಮ್ಮ ಅಂಕಲ್ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಒಂದು ದಿನ ಅವರು ನೀನು ಇರಲು ಬೇರೆ ಜಾಗ ಹುಡುಕಿಕೋ ಎಂದರು. ಇದಾದ ಬಳಿಕ ನಾನು ಮುಂಬೈ ಸ್ಪೋರ್ಟ್ಸ್ ಗ್ರೌಂಡ್ ಸಮೀಪದಲ್ಲಿರುವ ಆಝಾದ್ ಮೈದಾನದ ಬಳಿ ಟೆಂಟ್‌ನಲ್ಲಿ ಉಳಿದುಕೊಂಡಿದ್ದೆ. ಹಗಲು ಹೊತ್ತಿನಲ್ಲಿ ನಾನಲ್ಲಿಯೇ ಕ್ರಿಕೆಟ್ ಆಡುತ್ತಿದ್ದೆ. ಮುಂಬೈನ ಪ್ರಸಿದ್ದ ರಸ್ತೆಯೊಂದರಲ್ಲಿ ರಾತ್ರಿ ವೇಳೆಗೆ ಪಾನಿಪೂರಿ ಮಾರುತ್ತಿದ್ದೆ. ಅದರಲ್ಲಿ ಬಂದ ಹಣವನ್ನು ನನ್ನ ಊಟದ ವ್ಯವಸ್ಥೆಗೆ ಬಳಸಿಕೊಳ್ಳುತ್ತಿದ್ದೆ ಎಂದು ಯಶಸ್ವಿ ಜೈಸ್ವಾಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಚೆನ್ನಾಗಿ ಆಡಿದರೆ ಟೆಂಟ್ ನಲ್ಲಿ ಇರಲು ಅವಕಾಶ ನೀಡುವುದಾಗಿ ಹೇಳಿದ್ದರು. ಆ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದರಿಂದ ಬದುಕು ಬದಲಾಗಿ ಹೋಯಿತು. ಮಲಗಲು ಜಾಗವೂ ಸಿಕ್ಕಿತು. ಆಡಲು ಅವಕಾಶಗಳು ಸಿಗುತ್ತಾ ಹೋದವು. ಇದಾದ ಬಳಿಕ ಯಶಸ್ವಿ ಜೈಸ್ವಾಲ್, ಕೋಚ್ ಜ್ವಾಲಾ ಸಿಂಗ್ ಅವರ ಕಣ್ಣಿಗೆ ಬಿದ್ದರು. ಜ್ವಾಲಾ ರಾಜ್ಯಮಟ್ಟದ ಆಟಗಾರರಾಗಿದ್ದರು. ನನಗಿಂತ ಚಿಕ್ಕವನಾದ ಯಶಸ್ವಿ ಆಟವನ್ನು ಗಮನಿಸಿದ ಬಳಿಕ ಕ್ರಿಕೆಟ್ ಜರ್ನಿ ಮುಂದುವರೆಸಲು ದೇವರು ನನಗೆ ಇನ್ನೊಂದು ಅವಕಾಶ ನೀಡಿದ ಎಂದು ಭಾವಿಸಿದೆ ಎಂದು ಜ್ವಾಲಾ ಸಿಂಗ್ ಹೇಳಿದ್ದರು.

ನಿರಂತರ ಪರಿಶ್ರಮದ ಬಳಿಕ 2019ರಲ್ಲಿ ಮುಂಬೈ ತಂಡದಲ್ಲಿ ಸ್ಥಾನ ಪಡೆದ ಯಶಸ್ವಿ ಜೈಸ್ವಾಲ್ ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಇನ್ನು ಇದೇ ವರ್ಷ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಜೈಸ್ವಾಲ್ ಸೇರಿಕೊಂಡರು. ಇದೀಗ ಯಶಸ್ವಿ ಜೈಸ್ವಾಲ್, ಮುಂಬೈ ಎದುರು ಶತಕ ಸಿಡಿಸುವುದರ ಜತೆಗೆ 9 ಪಂದ್ಯಗಳಿಂದ 47.56ರ ಬ್ಯಾಟಿಂಗ್ ಸರಾಸರಿಯಲ್ಲಿ 428 ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

ಪಂದ್ಯ ಮುಗಿದ ನಂತರ ಮಾತನಾಡಿದ ಜೈಸ್ವಾಲ್, “ನನ್ನ ಇನಿಂಗ್ಸ್‌ನ ಪ್ರತಿಯೊಂದು ಭಾಗವನ್ನು ಆನಂದಿಸಿದ್ದೇನೆ. ಸರಿಯಾದ ರೀತಿಯಲ್ಲಿ ಆಲೋಚಿಸುತ್ತಿದ್ದೆ. ಸರಿಯಾದ ಹೊಡೆತಗಳನ್ನು ಆಯ್ಕೆ ಮಾಡಿಕೊಂಡೆ. ನಾನು ಆಡುವ ಎಲ್ಲ ಹೊಡೆತಗಳ ಕಡೆಗೆ ಕಠಿಣ ಅಭ್ಯಾಸ ಮಾಡಿದ್ದೇನೆ. ಅದು ಮ್ಯಾಚ್ ಆಗಲಿ, ನೆಟ್ಸ್ ಆಗಲಿ ನಾನು ಬ್ಯಾಟ್ ಹಿಡಿದಾಗ ನನ್ನಲ್ಲಿ ಆವರಿಸುವ ಭಾವನೆ ಒಂದೇ. ಝುಬಿನ್ ಸರ್ ಜೊತೆಗೂಡಿ ಬ್ಯಾಟಿಂಗ್ ಕಡೆಗೆ ಕಠಿಣ ಶ್ರಮ ವಹಿಸಿದ್ದೇನೆ. ಇದು ನನ್ನ ವಿಶೇಷ, ಇದು ಆರಂಭವಷ್ಟೇ, ಇನ್ನೂ ಸಾಧಿಸುವುದು ಬಹಳಷ್ಟಿದೆ. ಆ ಕಡೆಗೆ ಎದುರು ನೋಡುತ್ತಿದ್ದೇನೆ. ತಂಡದಲ್ಲಿ ನನ್ನ ಪಾತ್ರದ ಬಗ್ಗೆ ಸ್ಪಷ್ಟತೆ ಇದೆ.” ಎಂದಿದ್ದಾರೆ.

suddiyaana