21 ಕಿ.ಮೀ ಓಡಿಕೊಂಡು ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! – ಕಾರಣವೇನು ಗೊತ್ತಾ?

21 ಕಿ.ಮೀ ಓಡಿಕೊಂಡು ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! – ಕಾರಣವೇನು ಗೊತ್ತಾ?

ಚುನಾವಣೆ ಎಂದಾಗ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಾರೆ. ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ನಾಮಪತ್ರ ಸಲ್ಲಿಕೆಯಂದು ಕಾರ್ಯಕರ್ತರು, ಪಕ್ಷದ ನಾಯಕರೆಲ್ಲರೂ ಅದ್ದೂರಿಯಾಗಿ ರೋಡ್‌ ಶೋ ನಡೆಸುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ 21 ಕಿ.ಮೀ ಓಡಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ!

ಇದನ್ನೂ ಓದಿ: ಸ್ಯಾಂಡಲ್‌ವುಡ್‌ನಲ್ಲಿ ‘ಡೇರ್‌ಡೆವಿಲ್ ಮುಸ್ತಾಫಾ’ ಹವಾ – ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ

ಬಂಗಾಳದಲ್ಲಿ ಪಂಚಾಯತ್‌ ಚುನಾವಣೆಗೆ ಡೇಟ್‌ ಫಿಕ್ಸ್‌ ಆಗಿದೆ. ಜುಲೈ 8 ರಂದು ಒಂದೇ ಹಂತದಲ್ಲಿ ಪಂಚಾಯತ್‌ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ಅಧಿಕಾರದ ಚುಕ್ಕಾಡಿ ಹಿಡಿಯಲು ನಾನಾ ಸರ್ಕಸ್‌ ಮಾಡುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಡಾರ್ಜಿಲಿಂಗ್ ಹಿಲ್ಸ್ ನ ಶರಣ್ ಸುಬ್ಬ‌ ಎನ್ನುವವರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕ್ರಮದಂತೆ ಚುನಾವಣೆಗೆ ಸ್ಪರ್ಧಿಸಲು ಅವರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರು ನಾಮಪತ್ರ ಸಲ್ಲಿಸಲು ಹೋದ ವಿಧಾನವೇ ಸುದ್ದಿಯಾಗಿದೆ. ಉಳಿದ ಅಭ್ಯರ್ಥಿಗಳಂತೆ ಕಾರಿನಲ್ಲಿಅಪಾರ ಬೆಂಬಲಿಗರ ದಂಡಿನೊಂದಿಗೆ ಅವರು ನಾಮಪತ್ರ ಸಲ್ಲಿಸುವ ಕಚೇರಿಗೆ ಹೋಗಿಲ್ಲ ಬದಲಾಗಿ. 21 ಕಿ.ಮೀ ಓಡಿಕೊಂಡು ಹೋಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಶರಣ್ ಸುಬ್ಬ‌ ನಾಮಪತ್ರ ಸಲ್ಲಿಸಲು 21 ಕಿ.ಮೀ ದೂರದಲ್ಲಿರುವ ಸುಖಿಯಾಪೋಖ್ರಿ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿಗೆ ಓಡಿಕೊಂಡು ಹೋಗಲು ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗ್ಗೆ 4 ಗಂಟೆಗೆ ನಾಮಪತ್ರವನ್ನು ಹಿಡಿದುಕೊಂಡು ಸೋನಾಡದಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಸುಖಿಯಾಪೋಖ್ರಿ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿಗೆ ಓಡಿಕೊಂಡು ಹೋಗಿದ್ದಾರೆ. 4 ಗಂಟೆಯಲ್ಲಿ ತನ್ನ ಓಟವನ್ನು ಪೂರ್ಣಗೊಳಿಸಿ, ನಾಮಪತ್ರ ಸಲ್ಲಿಸುವ ಕಚೇರಿಗೆ ಬಂದಿದ್ದಾರೆ. ಆದರೆ ಅವರು ತಲುಪುವ ವೇಳೆಗೆ ಕಚೇರಿ ಇನ್ನೂ ತೆರೆದಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಕೂತು ಕಾದ ಬಳಿಕ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಈ ರೀತಿಯಾಗಿ ನಾಮಪತ್ರ ಸಲ್ಲಿಸಿದರ ಹಿಂದಿನ ಉದ್ದೇಶದ ಕುರಿತು ಮಾತನಾಡಿದ ಅವರು, ಮುಖ್ಯವಾಗಿ ಊರಿನ ಸಂಚಾರ ದಟ್ಟಣೆಯನ್ನು ಉಲ್ಲೇಖಿಸಿದರು. ಜನ ಕಡಿಮೆ ದೂರದ ಸಂಚಾರಕ್ಕೂ ವಾಹನವನ್ನು ಬಳಸುತ್ತಿದ್ದಾರೆ. ಹೆಚ್ಚಿನ ವಾಹನ ದಟ್ಟಣೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಸಂಚಾರ ದಟ್ಟಣೆ ಮತ್ತು ಪರಿಸರದ ಮೇಲಿನ ಪ್ರಭಾವ ಎರಡನ್ನೂ ಕಡಿಮೆ ಮಾಡಲು ಪರ್ಯಾಯ ಸಾರಿಗೆ ಸಾಧನವಾಗಿ ನಡೆದುಕೊಂಡು ಹೋಗುವ ವಿಧಾನ ಮುಖ್ಯ. ಅದನ್ನು ಮಾಡಿದರೆ ಪರಿಸರ ಹಾಗೂ ಆರೋಗ್ಯ ಎರಡಕ್ಕೂ ಉತ್ತಮ ಎಂದು ಹೇಳಿದ್ದಾರೆ.

suddiyaana