ಸೋತ PAK ತಂಡಕ್ಕೆ ಮೇಜರ್ ಸರ್ಜರಿ – ಐವರು ಸ್ಟಾರ್ ಪ್ಲೇಯರ್ಸ್ ಗೆ ಗೇಟ್ ಪಾಸ್?

1996 ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಆಯೋಜಿಸುತ್ತಿರುವ ಐಸಿಸಿ ಟೂರ್ನಮೆಂಟ್ ಇದು. ಆದ್ರೆ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ದುಬೈನಲ್ಲಿ ಭಾರತದ ವಿರುದ್ಧವೂ ಸೋಲು ಕಂಡಿತ್ತು. ಆಡಿದ ಎರಡು ಪಂದ್ಯಗಳಲ್ಲಿ ಎರಡನ್ನೂ ಸೋತು ಟೂರ್ನಿಯಲ್ಲಿ ಹೊರ ಬಿದ್ದಿದೆ. ಅದ್ರಲ್ಲೂ ಭಾರತದ ವಿರುದ್ಧದ ಸೋಲಿನ ಬಳಿಕ ತಂಡದ ವಿರುದ್ಧ ಪಾಕಿಸ್ತಾನದಲ್ಲಿ ಆಕ್ರೋಶ ಭುಗಿಲೆದ್ದಿದೆ. ಫ್ಯಾನ್ಸ್ ಮಾತ್ರವಲ್ಲದೆ ಮಾಜಿ ಕ್ರಿಕೆಟರ್ಸ್ ಕೂಡ ಕೆಂಡ ಕಾರುತ್ತಿದ್ದಾರೆ. ಸೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೆಲ ಸೆಲೆಕ್ಟರ್ಸ್, ಕೋಚಿಂಗ್ ಸ್ಟಾಫ್ಸ್ ಹಾಗೇ ಕೆಲ ಆಟಗಾರರನ್ನ ಕೈಬಿಡೋ ಪ್ಲ್ಯಾನ್ನಲ್ಲಿದೆ.
ಇದನ್ನೂ ಓದಿ : ಭಾರತದ ಗೆಲುವಿಗೆ ಆಸ್ಟ್ರೇಲಿಯಾ & ಇಂಗ್ಲೆಂಡ್ ಕ್ಯಾತೆ – ಟೀಂ ಇಂಡಿಯಾಗೆ ಒಂದೇ ಪಿಚ್ ಪ್ಲಸ್?
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ತಂಡ ಇಷ್ಟೊಂದು ಹೀನಾಯವಾಗಿ ಸೋಲೋದಕ್ಕೆ ಕಾರಣ ಅವ್ರ ಬದಲಾವಣೆ ನಿಯಮ. ಕಳೆದ ಮೂರು ವರ್ಷಗಳಲ್ಲಿ ತಂಡವು 26 ಬೇರೆ ಬೇರೆ ಆಯ್ಕೆದಾರರು, 8 ಕೋಚ್ ಗಳು ಹಾಗೇ ನಾಲ್ವರು ನಾಯಕರನ್ನ ಕಂಡಿದೆ. 2023 ರ ವಿಶ್ವಕಪ್ ನಂತರ ಒಂದು ವರ್ಷ ಪೂರ್ತಿ ಪಾಕಿಸ್ತಾನ ಏಕದಿನ ಪಂದ್ಯಗಳನ್ನ ಆಡಿಯೇ ಇರಲಿಲ್ಲ. ಆ ನಂತ್ರ 2024ರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಗಳಲ್ಲಿ ಕಣಕ್ಕಿಳಿದಿತ್ತು.. ಆದ್ರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ನಡೆದ ತ್ರಿಕೋನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲಿನ ಪ್ರದರ್ಶನ ನೀಡಿದೆ. 2017ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ 2021ರಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ರೆ 2022ರ ವಿಶ್ವಕಪ್ನಲ್ಲಿ ಪಾಕಿಸ್ತಾನ ಫೈನಲ್ ತಲುಪಿತ್ತು. ಆದ್ರೆ 2024ರ ಟಿ-20 ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಅದ್ರಲ್ಲೂ ಅಮೆರಿಕದಂತಹ ಕ್ರಿಕೆಟ್ ಶಿಶುಗಳ ಎದುರೇ ಸೋತು ಸುಣ್ಣವಾಗಿದೆ. ಹಾಗೇ ಏಕದಿನ ಮತ್ತು ಟೆಸ್ಟ್ ಅಂತಾ ಬಂದಾಗ ಪಾಕ್ ಟೀಂ ಸಾಮರ್ಥ್ಯ ಕುಸಿತವಾಗ್ತಾನೇ ಇದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜಾರಿಗೆ ಬಂದ ಮೇಲೆ ಕಳೆದ ಎರಡು ಆವೃತ್ತಿಗಳಲ್ಲಿ 5 ಮತ್ತು 7ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ 2023-25ನೇ ಸಾಲಿನ ಆವೃತ್ತಿಯಲ್ಲಿ 9ನೇ ಸ್ಥಾನ ತಲುಪಿದೆ. ಈಗ 8 ತಂಡಗಳ ಚಾಂಪಿಯನ್ಸ್ ಟ್ರೋಫಿಯಲ್ಲಿ ಗ್ರೂಪ್ ಸ್ಟೇಜ್ನೂ ದಾಟೋಕೆ ಸಾಧ್ಯವಾಗಿಲ್ಲ. ಇದ್ರ ಎಫೆಕ್ಟ್ ಈಗ ಟೀಂ & ಸ್ಟಾಫ್ಸ್ ಮೇಲೆ ಬೀಳ್ತಿದೆ.
ಪಾಕಿಸ್ತಾನದಲ್ಲಿ ಮೇಜರ್ ಬ್ಲಂಡರ್ ಆಗ್ತಿರೋದು ಕೋಚ್ಗಳ ಬದಲಾವಣೆ. ಟೀಮ್ ಇಂಡಿಯಾದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಸದ್ಯ ಪಾಕಿಸ್ತಾನದ ಸೀಮಿತ ಓವರ್‌ಗಳ ಕ್ರಿಕೆಟ್‌ನ ಕೋಚ್ ಆಗಿದ್ದರು. ಆದರೆ 2024 ರಲ್ಲಿ ಅವರು ರಾಜೀನಾಮೆ ನೀಡಿದರು. ಏತನ್ಮಧ್ಯೆ, ಜೇಸನ್ ಗಿಲ್ಲೆಸ್ಪಿ ಪಾಕಿಸ್ತಾನ ಟೆಸ್ಟ್ ತಂಡದ ಕೋಚಿಂಗ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ನಂತರ, ಆಕಿಬ್ ಜಾವೇದ್ ಅವರನ್ನು ಪಾಕಿಸ್ತಾನದ ಮಧ್ಯಂತರ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರಿಗೆ ಮೊಹಮ್ಮದ್ ಮಸ್ರೂರ್ (ಬ್ಯಾಟಿಂಗ್ ಕೋಚ್), ಅಬ್ದುಲ್ ರೆಹಮಾನ್ (ಸ್ಪಿನ್ ಬೌಲಿಂಗ್ ಕೋಚ್) ಮತ್ತು ಶಾಹಿದ್ ಅಸ್ಲಾಂ (ಸಹಾಯಕ ಕೋಚ್) ಅವರು ತರಬೇತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇದೀಗ ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆ ಮಾಡೋಕೆ ಮುಂದಾದ್ರೆ ಇವ್ರಿಗೆಲ್ಲಾ ಗೇಟ್ ಪಾಸ್ ಸಿಗ್ಬೋದು.
ಪಾಕಿಸ್ತಾನದ ಸೋಲಿನ ನಂತರ ಮಾಜಿ ವೇಗಿ ವಾಸಿಮ್ ಅಕ್ರಮ್ ಬೇಸರ ವ್ಯಕ್ತಪಡಿಸಿದ್ದಾರೆ. ಐದರಿಂದ ಆರು ಬದಲಾವಣೆಗಳನ್ನು ಮಾಡಿ ಕ್ರಿಕೆಟ್ ಆಡುವ ಹೊಸ ಆಟಗಾರರನ್ನು ನೇಮಿಸಬೇಕು ಎಂದಿದ್ದಾರೆ. ವಕಾರ್ ಯೂನಸ್, ಶೋಯೆಬ್ ಅಖ್ತರ್ ಸೇರಿದಂತೆ ಅನೇಕ ಪಾಕಿಸ್ತಾನಿ ಮಾಜಿ ಆಟಗಾರರು ತಂಡದಲ್ಲಿ ಬದಲಾವಣೆಯ ಬೇಡಿಕೆ ಇಟ್ಟಿದ್ದಾರೆ. ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ತಮ್ಮ ನಾಯಕತ್ವವನ್ನು ಕಳೆದುಕೊಳ್ಳಬಹುದು. ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಬಾಬರ್ ಆಝಂನಂತಹ ಸ್ಟಾರ್ ಬ್ಯಾಟ್ಸ್‌ಮನ್‌ನನ್ನು ಸಹ ತಂಡದಿಂದ ಕೈಬಿಡಬಹುದು. ಫಖರ್ ಜಮಾನ್ ಗಾಯದಿಂದಾಗಿ ಪಾಕಿಸ್ತಾನ ತಂಡಕ್ಕೆ ಸೇರ್ಪಡೆಗೊಂಡಿದ್ದ ಇಮಾಮ್ ಉಲ್ ಹಕ್ ಭಾರತದ ವಿರುದ್ಧ ಆಡುವ ಅವಕಾಶ ಪಡೆದರು. ಆದರೆ ಅವರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಮಾಮ್ ಅವರನ್ನು ಮತ್ತೆ ತಂಡದಿಂದ ಹೊರಹಾಕಬಹುದು. ತಯ್ಯಬ್ ತಾಹಿರ್ ಮತ್ತು ಶಾಹೀನ್ ಅಫ್ರಿದಿಯಂತಹ ಆಟಗಾರರ ಮೇಲೂ ತೂಗುಗತ್ತಿ ನೇತಾಡಲಾರಂಭಿಸಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಅಫ್ರಿದಿ ಎರಡು ವಿಕೆಟ್‌ಗಳನ್ನು ಪಡೆದರಾದರೂ ಅವರು 8 ಓವರ್‌ಗಳಲ್ಲಿ 74 ರನ್‌ಗಳನ್ನು ನೀಡಿದರು.