ಬಲೂಚ್ ದಾಳಿಗೆ ಬೆಚ್ಚಿದ ಪಾಕ್ – ನಮ್ಮ ಸೈನಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆಂದ PAK ರಕ್ಷಣ ಸಚಿವ

ಪಾಕ್‌ನ ಬಂಡವಾಳ ಈಗ ಒಂದೊಂದೇ ಹೊರ ಬರುತ್ತಿದೆ. ಬಲೂಚಿಸ್ತಾನ ಪ್ರಾಂತ್ಯದ ವಿಶಾಲ ವಿಸ್ತೀರ್ಣದ ಕಾರಣದಿಂದ ಬಲೂಚ್ ಬಂಡುಕೋರರ ವಿರುದ್ಧ ಹೋರಾಡುವಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಅಸಹಾಯಕ ಸ್ಥಿತಿಯಲ್ಲಿ ಇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ಹಲವು ಪಟ್ಟಣಗಳಲ್ಲಿ ಬಲೂಚ್ ಬಂಡುಕೋರರು ಏಕಕಾಲದಲ್ಲಿ ದಾಳಿ ನಡೆಸಿ ಕನಿಷ್ಠ 80 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದು, 30ಕ್ಕಿಂತ ಹೆಚ್ಚು ಸರ್ಕಾರಿ ಆಸ್ತಿಗಳನ್ನು ನಾಶಪಡಿಸಿದ ಕೆಲವು ದಿನಗಳ ನಂತರ ರಕ್ಷಣಾ ಸಚಿವರ ಹೇಳಿಕೆ ಹೊರಬಂದಿದೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಆಸಿಫ್, ದೇಶದ ಅತಿದೊಡ್ಡ ಆದರೆ, ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಾಂತ್ಯದಲ್ಲಿ ಸೈನಿಕರು ಎದುರಿಸುತ್ತಿರುವ ಭೌಗೋಳಿಕ ಸವಾಲುಗಳನ್ನು ವಿವರಿಸಿದರು. ಪ್ರತ್ಯೇಕತಾವಾದಿ ಪಡೆಗಳು ಕನಿಷ್ಠ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ನಂತರ ಗಂಭೀರ ಭದ್ರತಾ ಪರಿಸ್ಥಿತಿ ಉಂಟಾಗಿದೆ. ಈ ದಾಳಿಗಳು ಇತ್ತೀಚಿನ ವರ್ಷಗಳಲ್ಲೇ ಪ್ರಾಣಹಾನಿ ಉಂಟುಮಾಡಿದ ಅತ್ಯಂತ ಮಾರಕ ಭದ್ರತಾ ಬಿಕ್ಕಟ್ಟಾಗಿದೆ ಎಂದು ಹೇಳಿದರು. ಇದರ ಬೆನ್ನಲ್ಲೇ ಪ್ರಾಂತ್ಯದಾದ್ಯಂತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 177 ದಂಗೆಕೋರರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನೂರಾರು ಜೇನುನೊಣ ಕಚ್ಚಿದ್ರೂ 20 ಮಕ್ಕಳನ್ನು ರಕ್ಷಿಸಿದ ಮಹಿಳೆ! – ಬದುಕುಳಿಯಲೇ ಇಲ್ಲ ಮಹಾತಾಯಿ!
ಭೌಗೋಳಿಕವಾಗಿ ಬಲೂಚಿಸ್ತಾನ ಪಾಕಿಸ್ತಾನದ ಶೇ. 40 ಕ್ಕಿಂತ ಹೆಚ್ಚು ಭಾಗವನ್ನು ಹೊಂದಿದೆ. ಅದನ್ನು ನಿಯಂತ್ರಿಸುವುದು ಜನನಿಬಿಡ ನಗರಕ್ಕಿಂತ ಬಹಳ ಕಷ್ಟಕರ. ಅಲ್ಲಿ ಬೃಹತ್ ಪ್ರಮಾಣದ ಸೈನಿಕರ ನಿಯೋಜನೆಯ ಅಗತ್ಯವಿದೆ. ನಮ್ಮ ಪಡೆಗಳು ಅಲ್ಲಿ ನಿಯೋಜಿಸಲ್ಪಟ್ಟಿದ್ದು, ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಇಷ್ಟು ವಿಶಾಲ ಪ್ರದೇಶವನ್ನು ಕಾವಲು ಕಾಯುವುದು ಮತ್ತು ಗಸ್ತು ತಿರುಗುವುದು ದೈಹಿಕವಾಗಿ ಅವರಿಗೆ ಅಸಹಾಯಕತೆಯನ್ನುಂಟುಮಾಡುತ್ತಿದೆ ಎಂದು ಅವರು ಹೇಳಿದರು.
ವಾರಾಂತ್ಯದ ಹಿಂಸಾಚಾರದಲ್ಲಿ ಕನಿಷ್ಠ 33 ನಾಗರಿಕರು ಮತ್ತು 13 ಮಂದಿ ಭದ್ರತಾ ಪಡೆಗಳು ಮೃತಪಟ್ಟಿದ್ದಾರೆ. ದಾಳಿಗಳ ಹೊಣೆ ಹೊತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಎಂಬ ಬಂಡುಕೋರ ಸಂಘಟನೆಯೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಖ್ವಾಜಾ ಆಸಿಫ್ ಸ್ಪಷ್ಟಪಡಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಹತ್ಯೆಗೆ ಕಾರಣರಾದ ಭಯೋತ್ಪಾದಕರೊಂದಿಗೆ ಯಾವುದೇ ಮಾತುಕತೆ ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅಪರಾಧಿಗಳು ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳ ನಡುವೆ ನಂಟು ಇದೆ ಎಂದು ಅವರು ಆರೋಪಿಸಿದರು. ಬಿಎಲ್‌ಎ ಹೆಸರಿನ ಅಡಿಯಲ್ಲಿ ಅಪರಾಧಿ ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಆ ಸಂಘಟನೆ ಕಳ್ಳಸಾಗಣೆಗಾರರಿಗೆ ರಕ್ಷಣೆ ನೀಡುತ್ತಿದೆ ಎಂಬುದಾಗಿ ಖ್ವಾಜಾ ಆಸಿಫ್ ಹೇಳಿದ್ದಾರೆ.

ನೋಡಿರಿ

