ವಿಶ್ವ ದಾಖಲೆ ಬರೆದ ಪಾಕ್ ಮಹಿಳಾ ಕ್ರಿಕೆಟರ್ ಅಮೀನ್
ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ 30 ವರ್ಷದ ಮಹಿಳಾ ಬ್ಯಾಟರ್ ಸಿದ್ರಾ ಅಮೀನ್ ಇತಿಹಾಸ ನಿರ್ಮಿಸಿದ್ದಾರೆ. ಅಮೀನ್ 151 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 176 ರನ್ ಗಳಿಸಿದರು. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದು 5ನೇ ಅತಿ ದೊಡ್ಡ ಇನ್ನಿಂಗ್ಸ್ ಆಗಿದ್ದು, ಆಕೆಯ ಇನ್ನಿಂಗ್ಸ್‌ನಿಂದಾಗಿ ಪಾಕಿಸ್ತಾನ ತಂಡ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 335 ರನ್ ಗಳಿಸಿತು.
ಇದನ್ನೂ ಓದಿ:ಸೊಳ್ಳೆಗಳನ್ನು ಕೊಂದು ಕೋರ್ಟ್ ಗೆ ತಂದ ದಾವೂದ್ ಸಹಚರ: ಕಾರಣ ಕೇಳಿ ನ್ಯಾಯಾಧೀಶರೇ ಸುಸ್ತು!
ಆ ಬಳಿಕ ಪಾಕಿಸ್ತಾನವು ಐರ್ಲೆಂಡ್ ತಂಡವನ್ನು 207 ರನ್‌ಗಳಿಗೆ ಆಲೌಟ್ ಮಾಡಿತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 128 ರನ್‌ಗಳ ಜಯ ಸಾಧಿಸಿತ್ತು. ಪಾಕ್ ಬೌಲರ್ ಗಳ ಪೈಕಿ ನಿದಾ ದಾರ್ ಮೂರು ವಿಕೆಟ್ ಪಡೆದರೆ, ಫಾತಿಮಾ ಸನಾ ಮತ್ತು ನಶ್ರಾ ಸಂಧು ತಲಾ ಎರಡು ವಿಕೆಟ್ ಪಡೆದರು.
ಸಿದ್ರಾ ಅಮೀನ್ ಜೊತೆ ಮುನಿಬಾ ಅಲಿ ಕೂಡ ಶತಕ ಬಾರಿಸಿದರು. ಮುನಿಬಾ ಅಲಿ 114 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 107 ರನ್ ಗಳಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 221 ರನ್‌ಗಳ ಜೊತೆಯಾಟವಾಡಿದರು.
ಸಿದ್ರಾ ಅಮೀನ್ ಪಾಕ್ ಪರ 150ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಜವೇರಿಯಾ ಖಾನ್ ಹೆಸರಿನಲ್ಲಿತ್ತು. 2015ರಲ್ಲಿ ಶ್ರೀಲಂಕಾ ವಿರುದ್ಧ ಜವೇರಿಯಾ ಅಜೇಯ 133 ರನ್ ಗಳಿಸಿದ್ದರು.
ಮಹಿಳಾ ODI ಕ್ರಿಕೆಟ್‌ನಲ್ಲಿ, ಸಿದ್ರಾ ಅಮೀನ್‌ಗಿಂತ ಮೊದಲು ನಾಲ್ಕು ಮಹಿಳಾ ಬ್ಯಾಟರ್ಗಳು ಮಾತ್ರ ಗರಿಷ್ಠ ವೈಯಕ್ತಿಕ ಸ್ಕೋರ್‌ಗಳನ್ನು ಗಳಿಸಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ನ್ಯೂಜಿಲೆಂಡ್‌ನ 22 ವರ್ಷದ ಬ್ಯಾಟರ್ ಅಮೆಲಿಯಾ ಕೆರ್ ಹೆಸರಿನಲ್ಲಿದೆ. 4 ವರ್ಷಗಳ ಹಿಂದೆ ಐರ್ಲೆಂಡ್ ವಿರುದ್ಧ ಅಜೇಯ 232 ರನ್ ಗಳಿಸಿದ್ದರು.
ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ (229*) ಎರಡನೇ ಸ್ಥಾನದಲ್ಲಿದ್ದಾರೆ. ಐರ್ಲೆಂಡ್ ವಿರುದ್ಧ 188 ರನ್ ಗಳಿಸಿದ ಭಾರತದ ಆಟಗಾರ್ತಿ ದೀಪ್ತಿ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಅತ್ಯಧಿಕ ಸ್ಕೋರ್ ಚಾಮರಿ ಅಟಪಟ್ಟು ಅವರ ಹೆಸರಿನಲ್ಲಿದೆ. ಚಾಮರಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 178 ರನ್ ಗಳಿಸಿದರು. ಸಿದ್ರಾ ಅಮೀನ್ ಇದುವರೆಗೆ 49 ಏಕದಿನ ಪಂದ್ಯಗಳಲ್ಲಿ 26ರ ಸರಾಸರಿಯಲ್ಲಿ 1180 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಅವರು ಮೂರು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದಾರೆ.