ಉದ್ಘಾಟನಾ ಪಂದ್ಯದಲ್ಲೇ ಪಾಕಿಸ್ತಾನ Vs ನ್ಯೂಜಿಲೆಂಡ್ – ಏಕದಿನ ಮಾದರಿಯಲ್ಲಿ ಯಾರು ಸ್ಟ್ರಾಂಗ್?

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಫೆಬ್ರವರಿ 19ರಂದು ಚಾಲನೆ ಸಿಗಲಿದೆ. ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. 8 ತಂಡಗಳ ನಡುವಿನ ಈ ಕದನ ಏಕದಿನ ಮಾದರಿಯಲ್ಲಿ ನಡೆಯಲಿದೆ. ಇದೊಂಥರಾ ಮಿನಿ ವಿಶ್ವಕಪ್ ಅಂದ್ರೂ ತಪ್ಪಿಲ್ಲ. ಹೈಬ್ರಿಡ್ ಮಾದರಿಯ ಈ ಟೂರ್ನಿಯ ಬಹುತೇಕ ಮ್ಯಾಚ್ಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ತಂಡದ ಪಂದ್ಯಗಳಿಗೆ ದುಬೈ ಆತಿಥ್ಯವಹಿಸಲಿದೆ. 29 ವರ್ಷಗಳ ಬಳಿಕ ದೊಡ್ಡ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದ್ದು ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಅಖಾಡಕ್ಕಿಳಿಯಲಿದೆ. ಆದ್ರೆ ತ್ರಿಕೋನ ಸರಣಿಯಲ್ಲಿ ಮುಖಭಂಗ ಅನುಭವಿಸಿರೋ ಪಾಕ್ಗೆ ಹೊಸ ಚಾಲೆಂಜ್ ಶುರುವಾಗಿದೆ.
ಇದನ್ನೂ ಓದಿ : ಬಿಸಿಸಿಐಗೂ ಗೊತ್ತು RCB ಗತ್ತು – IPL ಫಸ್ಟ್ ಮ್ಯಾಚ್ ಬೆಂಗಳೂರೇ ಯಾಕೆ?
ಚಾಂಪಿಯನ್ಸ್ ಟ್ರೋಫಿಯ 9ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಎದುರು ಬದುರಾಗುತ್ತಿವೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಮ್ಯಾಚ್ ಸ್ಟಾರ್ಟ್ ಆಗುತ್ತೆ. ಈಗಾಗ್ಲೇ ಈ ತಿಂಗಳ ಆರಂಭದಲ್ಲೇ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ತ್ರಿಕೋನ ಸರಣಿಯಲ್ಲಿ ಪರಸ್ಪರ ಎರಡು ಏಕದಿನ ಪಂದ್ಯಗಳನ್ನು ಆಡಿದ್ದವು. ನ್ಯೂಜಿಲೆಂಡ್ ಎರಡೂ ಪಂದ್ಯಗಳನ್ನು ಗೆದ್ದು ಸರಣಿಯನ್ನು ಗೆದ್ದುಕೊಂಡಿತು. ತವರಿನಲ್ಲೇ ಮುಖಭಂಗ ಅನುಭವಿಸಿರೋ ಪಾಕಿಸ್ತಾನ ಸದ್ಯ ಬುಧವಾರದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಇಲ್ಲಿಯವರೆಗೆ 118 ODI ಪಂದ್ಯಗಳನ್ನು ಆಡಿವೆ. ಇದ್ರಲ್ಲಿ ಮೆನ್ ಇನ್ ಗ್ರೀನ್ ತಂಡವು ನ್ಯೂಜಿಲೆಂಡ್ ವಿರುದ್ಧದ 61 ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ಬ್ಲ್ಯಾಕ್ ಕ್ಯಾಪ್ಸ್ ತಂಡವು 50 ಓವರ್‌ಗಳ ಸ್ವರೂಪದಲ್ಲಿ ಪಾಕಿಸ್ತಾನದ ವಿರುದ್ಧ 53 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡರೆ, ಮೂರು ಪಂದ್ಯಗಳು ಯಾವುದೇ ರಿಸಲ್ಟ್ ಬಂದಿಲ್ಲ. ಹಾಗೇ ಪಾಕಿಸ್ತಾನವು ತನ್ನ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ 30 ODI ಪಂದ್ಯಗಳನ್ನ ಆಡಿ 22 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 8 ಪಂದ್ಯಗಳಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿದೆ. ಆದ್ರೂ ಕೂಡ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನಕ್ಕಿಂತ ಬೆಸ್ಟ್ ರೆಕಾರ್ಡ್ಸ್ ಹೊಂದಿದೆ. ಎರಡೂ ತಂಡಗಳು ಕರಾಚಿ ಸ್ಟೇಡಿಯಮ್ನಲ್ಲಿ ಈವರೆಗೆ 9 ODI ಪಂದ್ಯಗಳನ್ನು ಆಡಿದ್ದು, ನ್ಯೂಜಿಲೆಂಡ್ 5 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಇತ್ತೀಚಿನ 5 ಪಂದ್ಯಗಳ ರೆಕಾರ್ಡ್ಸ್ ನೋಡಿದ್ರೆ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿದೆ. ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ, ನ್ಯೂಜಿಲೆಂಡ್ 3 ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ 2 ರಲ್ಲಿ ಗೆದ್ದಿದೆ. ಸೋ ಉಭಯ ತಂಡಗಳ ನಡುವೆ ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮೇಲೆ ಪಾಕಿಸ್ತಾನ ಪ್ರಾಬಲ್ಯ ಸಾಧಿಸಿದ್ದರೂ, ನಂತರದ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಕೂಡ ಉತ್ತಮ ಪ್ರದರ್ಶನ ನೀಡಿದೆ.