ಪಾಕ್‌ ಮುಂದೆ ಸೋತ ಬಾಂಗ್ಲಾದೇಶ – ಭಾರತ -ಪಾಕ್‌ ನಡುವೆ ಏಷ್ಯಾಕಪ್‌ ಫೈನಲ್!

ಪಾಕ್‌ ಮುಂದೆ ಸೋತ ಬಾಂಗ್ಲಾದೇಶ – ಭಾರತ -ಪಾಕ್‌ ನಡುವೆ ಏಷ್ಯಾಕಪ್‌ ಫೈನಲ್!

ಏಷ್ಯಾಕಪ್‌ ಸೂಪರ್ 4 ಸುತ್ತಿನಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶ ತಂಡವನ್ನ ಮಣಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ 11 ರನ್‌ಗಳ ಸೋಲುಣಿಸಿದ ಪಾಕಿಸ್ತಾನ ತಂಡ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಹೀಗಾಗಿ ಇದೇ ಮೊದಲಬಾರಿಗೆ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ: ಇಡೀ ದಿನ ಖುಷಿಯಾಗಿರಬೇಕಾ? – ಬೆಳಗ್ಗೆ ಎದ್ದ ತಕ್ಷಣ ಈ ಟಿಪ್ಸ್ ಫಾಲೋ ಮಾಡಿ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟಾಸ್ ಸೋತ ನಂತರ, ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ  ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಾಕಿಸ್ತಾನದ ಬ್ಯಾಟರ್ ಗಳು ಕೈಕೊಟ್ಟರೂ ಬೌಲರ್ ಗಳ ಸಾಹಸದಿಂದಾಗಿ ಪಂದ್ಯ ರೋಮಾಂಚಕ ಅಂತ್ಯ ಕಾಣುವಂತಾಯಿತು. ಬಾಂಗ್ಲಾದೇಶ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಹಿನ್ ಶಾ ಅಫ್ರಿದಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಇನ್ನು ಸೆಪ್ಟೆಂಬರ್ 28 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪಾಕಿಸ್ತಾನ ತಂಡ, ಸಾಂಪ್ರದಾಯಿಕ ಎದುರಾಳಿ ಭಾರತ ತಂಡವನ್ನು ಎದುರಿಸಲಿದೆ. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ.  1984ರಲ್ಲಿ ಏಷ್ಯಾ ಕಪ್ ಪ್ರಾರಂಭವಾದ ಬಳಿಕ ಈವರೆಗೆ ಒಟ್ಟು 16 ಬಾರಿ ಉಭಯ ತಂಡಗಳ ನಡುವೆ ಪಂದ್ಯಾವಳಿ ಜರುಗಿದೆ. ಆದ್ರೆ ಈವರೆಗೂ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ಫೈನಲ್ ತಲುಪಿದ್ದಿಲ್ಲ. ಇದೀಗ ಭಾನುವಾರದಂದು ನಡೆಯಲಿರುವ ಪಂದ್ಯ ಅಕ್ಷರಶಃ ಹೈವೋಲ್ಟೇಜ್ ಪಂದ್ಯವಾಗಲಿದೆ.

Shwetha M