ಹೈಬ್ರಿಡ್ ನಲ್ಲಿ ಚಾಂಪಿಯನ್ಸ್ ಟ್ರೋಫಿ.. ಭಾರತಕ್ಕೂ ಕಾಲಿಡಲ್ಲವೆಂದ PAK – ICCಗೆ ಪಾಕ್ 3 ಕಂಡೀಷನ್ಸ್ ಏನು?

ಬಲಿಷ್ಠ ಭಾರತ ಒಂದ್ಕಡೆ. ಭಾರತದ ಬೆನ್ನಿಗೆ ನಿಂತಿರೋ ರಾಷ್ಟ್ರಗಳು ಮತ್ತೊಂದೆಡೆ. ವಿಶ್ವಕ್ರಿಕೆಟ್ನಲ್ಲಿ ಏಕಾಂಗಿಯಾದ ಪಾಕಿಸ್ತಾನ ಕೊನೆಗೂ ತಲೆಬಾಗಿದೆ. 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪಂದ್ಯಗಳನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಸೋಕೆ ಪಿಸಿಬಿ ಕೊನೆಗೂ ಒಪ್ಪಿಕೊಂಡಿದೆ. ಅದ್ರ ಜೊತೆಗೆ ಐಸಿಸಿಗೆ ಮೂರು ಕಂಡೀಷನ್ಗಳನ್ನೂ ಹಾಕಿದೆ. ಹಾಗಾದ್ರೆ ಭಾರತದ ಪಂದ್ಯಗಳು ಎಲ್ಲಿ ನಡೆಯುತ್ತವೆ? ಐಸಿಸಿಗೆ ಪಾಕ್ ಇಟ್ಟಿರೋ ಮೂರು ಡಿಮ್ಯಾಂಡ್ಸ್ ಏನು? ಇನ್ಮುಂದೆ ಭಾರತಕ್ಕೆ ಬರಲ್ವಾ ಪಾಕ್ ತಂಡ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೀರ್ತಿ ಸತ್ಯ ಕೊನೆಗೂ ರಿವೀಲ್ – ಲಕ್ಷ್ಮೀ ಪಾತ್ರಕ್ಕೆ ಹೊಸ ನಟಿ
ಚಾಂಪಿಯನ್ಸ್ ಟ್ರೋಫಿ 2025ನ್ನು ಪಾಕಿಸ್ತಾನದಲ್ಲಿ ಆಯೋಜನೆ ಮಾಡಿದ್ದೇ ಮಾಡಿದ್ದು. ವಿವಾದಗಳಿಗೆ ಕ್ಲೈಮ್ಯಾಕ್ಸ್ ಸಿಗ್ತಾನೇ ಇಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದದಿಂದಾಗಿ ಟೂರ್ನಿಯ ವೇಳಾಪಟ್ಟಿಯನ್ನೂ ರಿಲೀಸ್ ಮಾಡೋಕೆ ಆಗಿಲ್ಲ. ಇದೇ ಕಾರಣಕ್ಕೆ ಐಸಿಸಿ ನವೆಂಬರ್ 29 ಮತ್ತು 30 ರಂದು ಸಭೆ ನಿಗದಿಪಡಿಸಿತ್ತು. ಬಟ್ ಮೊದಲ ದಿನದ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳೋಕೆ ಆಗಿರಲಿಲ್ಲ. ಕೊನೆಗೆ ಐಸಿಸಿ ಮಧ್ಯ ಎಂಟ್ರಿ ಕೊಟ್ಟು ಸಮಸ್ಯೆಗೆ ಫುಲ್ಸ್ಟಾಪ್ ಇಟ್ಟಿದೆ. ಪಾಕಿಸ್ತಾನಕ್ಕೆ ನೀಡಿದ್ದ ವಾರ್ನಿಂಗ್ನಿಂದ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಈ ಪಂದ್ಯಾವಳಿಯನ್ನು ನಡೆಸಲು ಒಪ್ಪಿಕೊಂಡಿದೆ. ಆದರೆ ಕೆಲವು ಷರತ್ತುಗಳನ್ನು ಮುಂದಿಟ್ಟಿದೆ.
ಕಂಡೀಷನ್ ನಂಬರ್ – 1 : ಭಾರತದಲ್ಲಿ ಐಸಿಸಿ ಪಂದ್ಯಗಳನ್ನ ಆಯೋಜಿಸಿದ್ರೆ ನಮಗೂ ಹೈಬ್ರಿಡ್ ಮಾದರಿ!
ಪಾಕಿಸ್ತಾನದ ಮೊದಲ ಕಂಡೀಷನ್ನೇ ಇದು. ಭಾರತ ಹೇಗೆ ಪಾಕಿಸ್ತಾನಕ್ಕೆ ಬರಲ್ಲ ಅಂತಾ ಹೈಬ್ರಿಡ್ ಮಾದರಿ ಪಂದ್ಯಗಳಿಗೆ ಡಿಮ್ಯಾಂಡ್ ಮಾಡ್ತಿದ್ದಾರೋ ಹಾಗೇ ನಾವು ಕೂಡ ಭಾರತದಲ್ಲಿ ಐಸಿಸಿ ಟೂರ್ನಿ ಆಯೋಜನೆ ಮಾಡಿದ್ರೆ ಬರೋದಿಲ್ಲ ಅಂತಾ ಪಾಕ್ ಪಟ್ಟು ಹಾಕಿದೆ. 2031ರ ವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಆಯೋಜಿತ ಟೂರ್ನಿಗಳನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು. ಯಾವುದೇ ಕಾರಣಕ್ಕೂ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಪಿಸಿಬಿ ಐಸಿಸಿಗೆ ಹೇಳಿದೆ. ಭವಿಷ್ಯದಲ್ಲಿ ಭಾರತ ಆತಿಥ್ಯ ವಹಿಸಲಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕು ಎಂಬ ಷರತ್ತನ್ನು ಪಿಸಿಬಿ ಹಾಕಿದೆ. ಮುಂದಿನ 7 ವರ್ಷಗಳಲ್ಲಿ ಭಾರತವು 2026ಕ್ಕೆ T20 ವಿಶ್ವಕಪ್, 2029ಕ್ಕೆ ಚಾಂಪಿಯನ್ಸ್ ಟ್ರೋಫಿ ಹಾಗೇ 2031ಕ್ಕೆ ODI ವಿಶ್ವಕಪ್ ಆಯೋಜನೆಯ ಜಬಾವ್ದಾರಿಯನ್ನ ವಹಿಸಿಕೊಂಡಿದೆ. ಸೋ ಈಗ ಪಾಕ್ ಬೇಡಿಕೆಯಂತೆ ಈ ಮೂರು ಟೂರ್ನಿಗಳಲ್ಲಿ ಪಾಕಿಸ್ತಾನದ ಪಂದ್ಯಗಳನ್ನ ಭಾರತ ಕೂಡ ಹೈಬ್ರಿಡ್ ಮಾದರಿಯಲ್ಲಿ ಆಯೋಜನೆ ಮಾಡಬೇಕಾಗುತ್ತದೆ.
ಕಂಡೀಷನ್ ನಂಬರ್ – 2 : ವಾರ್ಷಿಕ ಆದಾಯವನ್ನು ಹೆಚ್ಚಿಸುವಂತೆ ಐಸಿಸಿಗೆ ಡಿಮ್ಯಾಂಡ್!
ಇನ್ನು ಪಾಕ್ ಕ್ರಿಕೆಟ್ ಮಂಡಳಿಯ ಎರಡನೇ ಷರತ್ತು ಆದಾಯದಲ್ಲಿ ಹೆಚ್ಚಳ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಗೆ ಸೂಚಿಸಲು ವಾರ್ಷಿಕ ಆದಾಯದಲ್ಲಿ ನಮಗೆ ಹೆಚ್ಚಿನ ಪಾಲು ನೀಡಬೇಕು ಅಂತಾ ಐಸಿಸಿ ಬಳಿ ಮನವಿ ಮಾಡಿದೆ. ಇದಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ಳುತ್ತೇವೆ. ಭಾರತದ ಪಂದ್ಯಗಳನ್ನ ಬೇರೆ ಕಡೆ ನಡೆಸಿಕೊಡ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಐಸಿಸಿ ಮುಂದಿನ ವರ್ಷ ಶೇ.5.75 ರಷ್ಟು ಪಿಸಿಬಿ ಆದಾಯವನ್ನು ಹೆಚ್ಚಿಸುವಂತೆ ಕೋರಿಕೊಂಡಿದೆ.
ಕಂಡೀಷನ್ ನಂಬರ್ – 3 : ಭಾರತ ಇರದಿದ್ರೆ ಪಾಕಿಸ್ತಾನದಲ್ಲೇ ಸೆಮಿಫೈನಲ್ & ಫೈನಲ್!
ಇನ್ನು ಪಾಕಿಸ್ತಾನದ ಮೂರನೇ ಕಂಡೀಷನ್ ಅದು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಬಗ್ಗೆಯೇ ಇದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗುಂಪು ಹಂತದಲ್ಲಿ ಭಾರತದ ಪಂದ್ಯಗಳನ್ನ ಹೈಬ್ರಿಡ್ ಮಾದರಿಯಲ್ಲೇ ನಡೆಸಿಕೊಡುತ್ತೇವೆ. ಒಂದು ವೇಳೆ ಭಾರತ ಸೆಮಿಫೈನಲ್ ಮತ್ತು ಫೈನಲ್ಗೆ ಅರ್ಹತೆ ಪಡೆಯದೇ ಹೋದ್ರೆ ಆ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸಬೇಕು. ಈ ಪಂದ್ಯಗಳನ್ನು ಲಾಹೋರ್ ಮೈದಾನದಲ್ಲಿ ಆಯೋಜಿಸಬೇಕು ಎಂಬ ಷರತ್ತು ವಿಧಿಸಿದೆ.
ಅಧಿಕೃತ ವೇಳಾಪಟ್ಟಿ ಬಿಡುಗಡೆಗೆ ಕೌಂಟ್ ಡೌನ್!
ಟೂರ್ನಿ ಆರಂಭಕ್ಕೆ ಇನ್ನು ಎರಡೂವರೆ ತಿಂಗಳಷ್ಟೇ ಬಾಕಿ ಇದೆ. ಬಟ್ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನಿಂದ ಐಸಿಸಿ ಕೂಡ ಚಾಂಪಿಯನ್ಸ್ ಟ್ರೋಫಿಗೆ ವೇಳಾಪಟ್ಟಿಯನ್ನು ಫೈನಲ್ ಮಾಡಿರಲಿಲ್ಲ. ಇದೀಗ ಶನಿವಾರ ನಡೆದ ಸಭೆಯಲ್ಲಿ ಪಾಕ್ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಅಧಿಕೃತ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟೀಂ ಇಂಡಿಯಾ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಇನ್ನೂ ಸ್ಪಷ್ಟತೆ ಇಲ್ಲ. ಈ ಮುಂಚೆ ಪಾಕಿಸ್ತಾನ ರಿಲೀಸ್ ಮಾಡಿದ್ದ ಟೈಮ್ ಟೇಬಲ್ ಪ್ರಕಾರ ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9ರ ವರೆಗೆ ನಡೆಯಲಿದೆ. ಬಟ್ ಐಸಿಸಿ ಇದೇ ದಿನಾಂಕಗಳನ್ನ ಫೈನಲ್ ಮಾಡುತ್ತಾ ಅಥವಾ ಶೆಡ್ಯೂಲ್ ಚೇಂಜ್ ಮಾಡುತ್ತಾ ಅನ್ನೋದೇ ಈಗಿಗೋ ಪ್ರಶ್ನೆ. ಇನ್ನು ಚಾಂಪಿಯನ್ಸ್ ಟ್ರೋಫಿ ಕೊನೆಯ ಬಾರಿಗೆ 2017ರಲ್ಲಿ ನಡೆದಿತ್ತು. ಆಗ ಸರ್ಫರಾಜ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದುಕೊಂಡಿತ್ತು.
5 ಕಾರಣಗಳಿಂದ ತಲೆ ಬಾಗಿದ ಪಾಕಿಸ್ತಾನ!
ಕಳೆದ ಆರು ತಿಂಗಳಿಂದ ಹಗ್ಗಜಗ್ಗಾಟ ಆಡ್ತಿದ್ದ ಪಾಕಿಸ್ತಾನ ಈಗ ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ಳೋಕೆ ಕಾರಣಗಳೂ ಇವೆ. ಏನವು ಅನ್ನೋದನ್ನ ನೋಡೋದಾದ್ರೆ.
ಪಾಕ್ ತಲೆಬಾಗಲು ಕಾರಣ!
ಭಾರತ ಏನಾದ್ರೂ ಪಂದ್ಯಾವಳಿಯಲ್ಲಿ ಆಡದೇ ಇದ್ರೆ ಪ್ರಾಯೋಕತ್ವ, ಟಿಕೆಟ್ ಸೇಲ್ ಗಳಿಗೆ ಭಾರೀ ಪೆಟ್ಟು ಬೀಳುತ್ತಿತ್ತು. ಹೈ ವೋಲ್ಟೇಜ್ ಪಂದ್ಯವಾದ ಭಾರತ – ಪಾಕಿಸ್ತಾನ ಪಂದ್ಯವೇ ಇಲ್ಲದಂತಾಗಿದ್ರೆ ಹೆಚ್ಚು ಆದಾಯ ಬರುವ ಮೂಲವೇ ಇಲ್ಲದಂತಾಗಿ ಪಿಸಿಬಿಯ ಲಾಭ ಕಡಿಮೆಯಾಗುತ್ತಿತ್ತು. ಹಾಗೇ ಹೈಬ್ರಿಡ್ ಮಾದರಿಯಲ್ಲಿ ದುಬೈನಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸೋದ್ರಿಂದ ಹೆಚ್ಚೇನು ನಷ್ಟವೂ ಆಗೋದಿಲ್ಲ. ಅದೂ ಅಲ್ದೇ ಐಸಿಸಿ ಕೂಡ ಹೈಬ್ರಿಡ್ ಮಾದರಿ ಪಂದ್ಯಗಳ ಆಯೋಜನೆ ಮಾಡ್ಬೇಕು, ಭಾರತದ ಪ್ರಸ್ತಾವನೆಯನ್ನು ಒಪ್ಪಲೇಬೇಕು ಎಂದು ಪಿಸಿಬಿಗೆ ತಾಕೀತು ಮಾಡಿತ್ತು. ಈ ತಾಕೀತಿಗೆ ಒಪ್ಪದೇ ಇದ್ದಿದ್ದರೆ ಮುಂದಿನ ದಿನಗಳಲ್ಲಿ ಪಿಸಿಬಿಗೆ ಯಾವುದೇ ಐಸಿಸಿ ಟೂರ್ನಿಗಳನ್ನು ಆಯೋಜಿಸುವಂಥ ಅವಕಾಶಗಳೇ ಇಲ್ಲದಾಗುತ್ತಿತ್ತು. ಅಲ್ದೇ ಸಭೆಯಲ್ಲೂ ಕೂಡ ಎಲ್ಲಾ ರಾಷ್ಟ್ರಗಳೂ ಭಾರತದ ಬೆನ್ನಿಗೆ ನಿಂತಿದ್ದವು. ವಿಶ್ವಕ್ರಿಕೆಟ್ನಲ್ಲಿ ಭಾರತವನ್ನ ಎದುರು ಹಾಕಿಕೊಂಡು ಉಳಿಯೋದು ಕಷ್ಟ ಅನ್ನೋ ಕಾರಣಕ್ಕೆ ಹೈಬ್ರಿಡ್ಗೆ ಅಸ್ತು ಎಂದಿದೆ.
ಒಟ್ನಲ್ಲಿ 2008ರ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿ 2012-13ರಲ್ಲಿ ನಡೆದಿತ್ತು. 1996ರ ಬಳಿಕ ಪಾಕಿಸ್ತಾನ ಯಾವುದೇ ಐಸಿಸಿ ಟೂರ್ನಿಯನ್ನು ಆಯೋಜಿಸಿಲ್ಲ. ಕಳೆದ ವರ್ಷ, ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಪಾಕಿಸ್ತಾನವು ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್ ಆಯೋಜಿಸಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿದ್ದು ಇದೂ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಆಡುವ ಪಂದ್ಯಗಳೆಲ್ಲವೂ ದುಬೈನಲ್ಲಿ ನಡೆಯಲಿವೆ. ಆ ಪಂದ್ಯಗಳ ಆಯೋಜನೆ, ಆಟಗಾರರ ಓಡಾಟ, ವಾಸ್ತವ್ಯದ ಖರ್ಚು ವೆಚ್ಚಗಳನ್ನು ಪಿಸಿಬಿಯೇ ಭರಿಸಲಿದೆ. ಅವುಗಳಲ್ಲಿ ಭಾರತ – ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವೂ ಸೇರಿದೆ. ಫೈನಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಗ್ಗೆ ಇದ್ದ ಗೊಂದಲಗಳೆಲ್ಲಾ ಕ್ರಿಯರ್ ಆಗಿದೆ.