ಪಾಕ್ ನಲ್ಲಿ 3 ತಂಡ.. 7 ಸೂತ್ರ!.. ಗೇಟ್ ಪಾಸ್ ಸ್ಟ್ರಾಟಜಿ ವರ್ಕೌಟ್ – ಅದಲಿ ಬದಲಿ ಆಟ ಬಿರುಗಾಳಿ ಎಬ್ಬಿಸ್ತಾ?
ಮ್ಯಾಚ್ ಗೆದ್ರೂ ಅಷ್ಟೇ ಸೋತ್ರೂ ಅಷ್ಟೇ. ಪಾಕಿಸ್ತಾನ ಕ್ರಿಕೆಟ್ನಲ್ಲಿ ಬದಲಾವಣೆ ಪರ್ವ ಇದ್ದದ್ದೇ. ಅದು ಕೋಚ್ ಗಳ ವಿಚಾರವಾಗ್ಲಿ ಅಥವಾ ಆಟಗಾರರ ವಿಚಾರವಾಗ್ಲಿ. ಅಷ್ಟೇ ಯಾಕೆ ಮ್ಯಾನೇಜ್ಮೆಂಟ್ ಸಿಬ್ಬಂದಿಗೂ ಅಲ್ಲಿ ಪದೇಪದೇ ಗೇಟ್ ಪಾಸ್ ಸಿಗ್ತಾನೇ ಇರುತ್ತೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 2019 ರಿಂದ 2024ರ ವರೆಗೆ ಒಟ್ಟು ಹತ್ತು ಬಾರಿ ಹೆಡ್‌ಕೋಚ್‌ಗಳನ್ನು ಬದಲಾವಣೆ ಮಾಡಿದೆ. ಹೀಗಿದ್ರೂ ಯಾರಿಂದಲ್ಲೂ ಪಾಕಿಸ್ತಾನ ತಂಡದ ಹಣೆಬರಹ ಬದಲಾವಣೆ ಮಾಡೋಕೆ ಸಾಧ್ಯನೇ ಆಗಿಲ್ಲ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಪಾಕ್ ತಂಡದಲ್ಲಿ ಬಿರುಗಾಳಿಯೇ ಎದ್ದಿದೆ.
ಇದನ್ನೂ ಓದಿ :BBK ಶೋಭಾ ಶೆಟ್ಟಿಗೆ ಏನಾಯ್ತು? – ಆಸ್ಪತ್ರೆಯ ಬೆಡ್‌ನಿಂದಲೇ ಫ್ಯಾನ್ಸ್‌ಗೆ ಸಂದೇಶ
ಪಾಕಿಸ್ತಾನ ತಂಡದಲ್ಲಿ ಬದಲಾವಣೆ ಅನ್ನೋದು ಹೊಸದೇನೂ ಅಲ್ಲ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ರೆಡಿಯಾಗಿರೋ ತಂಡಕ್ಕೆ ಮೇಜರ್ ಸರ್ಜರಿಗಳು ನಡೆದಿವೆ. ಡ್ರಾಪ್ ಆಗಿದ್ದವ್ರೆಲ್ಲಾ ಎಂಟ್ರಿ ಕೊಟ್ಟಿದ್ದಾರೆ. ತಂಡದಲ್ಲೇ ಇದ್ದ ಕೆಲವ್ರು ಹೊರಬಿದ್ದಿದ್ದಾರೆ. ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವೆ 8 ಪಂದ್ಯಗಳ ಸರಣಿ ಡಿಸೆಂಬರ್ 10 ರಿಂದ ಶುರುವಾಗಲಿದೆ. ಮೂರೂ ಫಾರ್ಮೆಟ್ನಲ್ಲಿ ಈ ಸರಣಿಯಲ್ಲಿ ಫೈಟ್ ನಡೆಯಲಿದೆ. ಮೊದಲಿಗೆ ಮೂರು ಟಿ20 ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ 3 ಏಕದಿನ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಸೋ ಅಲ್ಲಿಗೆ 8 ಮ್ಯಾಚ್ಗಳು ಇರಲಿವೆ. ಇದೀಗ ಸೌತ್ ಆಫ್ರಿಕಾ ವಿರುದ್ದದ ಸರಣಿಗಾಗಿ ಪಾಕಿಸ್ತಾನ ತಂಡಗಳನ್ನು ಪ್ರಕಟಿಸಿದೆ. ಏಕದಿನ, ಟೆಸ್ಟ್ ಮತ್ತು ಟಿ20 ಸರಣಿಗಳಿಗಾಗಿ ಅನೌನ್ಸ್ ಮಾಡಿರೋ 3 ತಂಡಗಳಲ್ಲಿ 7 ಬದಲಾವಣೆ ಮಾಡ್ಲಾಗಿದೆ. ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಬಾಬರ್ ಆಝಂ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಿದರೆ, ಅತ್ತ ಶಾಹೀನ್ ಅಫ್ರಿದಿ ಟೆಸ್ಟ್ ತಂಡದಿಂದ ಗೇಟ್ ಪಾಸ್ ಪಡೆದಿದ್ದಾರೆ. ತಂಡಗಳ ಕ್ಯಾಪ್ಟನ್ಸ್ ಆಗಿ ಮೊಹಮ್ಮದ್ ರಿಝ್ವಾನ್ ಹಾಗೂ ಶಾನ್ ಮಸೂದ್ ಸೆಲೆಕ್ಟ್ ಆಗಿದ್ದಾರೆ. ಟಿ20 ಹಾಗೇ ಏಕದಿನ ಸರಣಿಗೆ ತಂಡಗಳನ್ನು ರಿಝ್ವಾನ್ ಮುನ್ನಡೆಸಿದರೆ, ಟೆಸ್ಟ್ ತಂಡದ ನಾಯಕರಾಗಿ ಶಾನ್ ಮಸೂದ್ ಕಾಣಿಸಿಕೊಳ್ಳಿದ್ದಾರೆ.
ಪಿಸಿಬಿ ಸಪ್ತ ಸೂತ್ರ!
ಪಾಕಿಸ್ತಾನದ ಪ್ರಮುಖ ವೇಗಿಯಾಗಿರುವ ಶಾಹೀನ್ ಅಫ್ರಿದಿ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲಾಗಿದೆ. ಹಾಗೇ ಸಲ್ಮಾನ್ ಅಲಿ ಅಘಾ ಅವರನ್ನು ಪಾಕ್ ತಂಡದ ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಪ್ರಮುಖ ವೇಗಿ ನಸೀಮ್ ಶಾ ಅವರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಲಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಾಜಿದ್ ಖಾನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಮತ್ತೊಂದೆಡೆ ಯುವ ದಾಂಡಿಗ ಸೈಮ್ ಅಯ್ಯೂಬ್ ಮೂರು ತಂಡಗಳಲ್ಲೂ ಸ್ಥಾನ ನೀಡಲಾಗಿದೆ. ಫಖರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ಅವರನ್ನು ಸೌತ್ ಆಫ್ರಿಕಾ ಸರಣಿಯಿಂದ ಕೈ ಬಿಟ್ಟಿದ್ದಾರೆ. ಮೊಹಮ್ಮದ್ ಅಬ್ಬಾಸ್ ಅವರನ್ನು 3 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.
ಹೀಗೆ ಮೂರು ತಂಡಗಳಲ್ಲೂ ಅಳೆದು ತೂಗಿ ಮೇಜರ್ ಸರ್ಜರಿ ಮಾಡಿರುವ ಪಿಸಿಬಿ ತಂಡಗಳನ್ನ ಫೈನಲ್ ಮಾಡಿದೆ. ಹಾಗಂತ ಈ ಅಂದರ್ ಬಾಹರ್ ಆಟ ಬರೀ ಆಟಗಾರರಿಗೆ ಮಾತ್ರ ಅಲ್ಲ. ಕೋಚ್ಗಳಿಗೂ ಕೂಡ ಪದೇಪದೇ ಗೇಟ್ಪಾಸ್ ಸಿಗ್ತಾನೇ ಇರುತ್ತೆ. 5 ವರ್ಷಗಳಲ್ಲೇ 10 ಜನ್ರನ್ನ ಕೋಚ್ ಹುದ್ದೆಯಿಂದ ತೆಗೆದು ಹಾಕಿರೋದೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
2019ರಿಂದ ಇಲ್ಲಿಯವರೆಗೆ 10 ಕೋಚ್ ಗಳ ಬದಲಾವಣೆ!
2019 ರಿಂದ ಇಲ್ಲಿಯವರೆಗೆ ಪಾಕಿಸ್ತಾನ ತಂಡದ 10 ಹೆಡ್ ಕೋಚ್‌ಗಳನ್ನು ನೋಡಿದೆ. ಇವರಲ್ಲಿ 2 ಮಂದಿ ಹಂಗಾಮಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ನಲ್ಲಿ ಜೇಸನ್ ಗಿಲ್ಲೆಸ್ಪಿಯವರು ಟೆಸ್ಟ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ರೆ ಆಕಿಬ್ ಜಾವೇದ್ ಅವ್ರು ಏಕದಿನ ಮತ್ತು T20 ತಂಡಗಳಿಗೆ ಹಂಗಾಮಿ ಮುಖ್ಯ ಕೋಚ್ ಆಗಿ ಕರ್ತವ್ಯ ಮಾಡ್ತಿದ್ದಾರೆ. ಇನ್ನು ಮುಹಮ್ಮದ್ ಮಸ್ರೂರ್ ಫೀಲ್ಡಿಂಗ್ ಕೋಚ್ ಆಗಿದ್ರೆ ನವೀದ್ ಅಕ್ರಮ್ ಚೀಮಾ ಪಿಸಿಬಿಯ ಮ್ಯಾನೇಜರ್ ಆಗಿದ್ದಾರೆ. 2024 ಏಪ್ರಿಲ್‌ನಲ್ಲಿ ಗಿಲ್ಲೆಸ್ಪಿ ಎರಡು ವರ್ಷಗಳ ಒಪ್ಪಂದದ ಮೇರೆಗೆ ಟೆಸ್ಟ್‌ಗಳಲ್ಲಿ ಪಾಕಿಸ್ತಾನದ ಹೆಡ್ ಕೋಚ್ ಆಗಿದ್ದಾರೆ. ಆದರೆ, ಗಿಲ್ಲೆಸ್ಪಿ ಅವರ ಕೋಚಿಂಗ್‌ನಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಸೋತಿತ್ತು. ಕಳೆದ ತಿಂಗಳಷ್ಟೇ ಟೆಸ್ಟ್ ತಂಡದ ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ಟೆಸ್ಟ್ ಮಾದರಿಯಿಂದ ಕಿತ್ತು ಹಾಕಲಾಗ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಬಟ್ ಟೀಕೆಗಳು ವ್ಯಕ್ತವಾಗ್ತಿದ್ದಂತೆ ಅದನ್ನ ಕೈಬಿಡಲಾಗಿದೆ. ಇದಾದ ನಂತರ ಗ್ರೇಟ್ ಕಮ್ ಬ್ಯಾಕ್ ಮಾಡಿದ ಪಾಕ್ ತಂಡ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಅನ್ನು 2-1 ರಿಂದ ಸೋಲಿಸಿತು.
ಕೋಚ್ ಗಳ ಬದಲಾವಣೆ ಪರ್ವ!
ಮಿಸ್ಬಾ ಉಲ್ ಹಕ್- 2019-21, ಸಿಕಂದರ್ ಬಸ್ತಿ- 2021-22, ಸಯೀದ್ ಅಜ್ಮಲ್- 2022, ಸಾಕಿಬ್ ಮಸೂದ್- 2022-23, ಅಬ್ದುಲ್ ರೆಹಮಾನ್ (ಹಂಗಾಮಿ ಕೋಚ್) – 2023, ಗ್ರಾಂಟ್ ಬ್ರಾಡ್‌ಬರ್ನ್- 2023, ಮಹ್ಮದ್- 2024, ಗ್ಯಾರಿ ಕರ್ಸ್ಟನ್ (ವೈಟ್ ಬಾಲ್)- 2024, ಜೇಸನ್ ಗಿಲ್ಲೆಸ್ಪಿ (ರೆಡ್ ಬಾಲ್)- 2024, ಜೇಸನ್ ಗಿಲ್ಲೆಸ್ಪಿ (ಹಂಗಾಮಿ ಕೋಚ್)- 2024, ಆಕಿಬ್ ಜಾವೇದ್ (ವೈಟ್ ಬಾಲ್)-2024, 2023ರಿಂದ ಈಚೆಗೆ ಅತೀ ಹೆಚ್ಚು ಕೋಚ್ ಗಳ ಬದಲಾವಣೆ ನಡೆಯುತ್ತಿದೆ. ಇದೀಗ ತಂಡಗಳಲ್ಲೂ ಕೂಡ ಆಟಗಾರರ ಮೇಲೂ ಪ್ರಯೋಗ ನಡೆಯುತ್ತಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ರೆಡಿಯಾಗಿರೋ ಮೂರು ತಂಡಗಳಲ್ಲೂ ಮೇಜರ್ ಸರ್ಜರಿಯಾಗಿದೆ. ಬಟ್ ಸರಣಿ ಮುಗಿದು ಫಲಿತಾಂಶ ಹೊರಬಿದ್ದ ಬಳಿಕ ಮತ್ತಿನ್ಯಾವ ಚೇಂಜಸ್ ಮಾಡ್ತಾರೋ ಕಾದು ನೋಡ್ಬೇಕು.