ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ – 11 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ – 11 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಇಸ್ಲಾಮಾಬಾದ್: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪ ಸಂಭವಿಸಿ ಜನರಲ್ಲಿ ಭೀತಿ ಹುಟ್ಟಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲೂ 6.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದ ಹಿಂದೂ ಕುಶ್‌ ಪ್ರದೇಶವು ಭೂಕಂಪನದ ಕೇಂದ್ರಬಿಂದುವಾಗಿದ್ದು, 180 ಕಿ.ಮೀ ಆಳದಲ್ಲಿ ಭೂಕಂಪ ಆಗಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕಳ್ಳರ ಪತ್ತೆಗೆ ಕಾಲೇಜು ಶೌಚಾಲಯದಲ್ಲಿ ಸಿಸಿಟಿವಿ! – ಬೆಚ್ಚಿ ಬಿದ್ದ ಸ್ಟೂಡೆಂಟ್ಸ್

ಇಸ್ಲಾಮಾಬಾದ್, ಪೇಶಾವರ, ಚಾರ್ಸದ್ದಾ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ವಿವಿಧ ನಗರಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅಲ್ಲದೇ ಗುಜ್ರಾನ್‌ವಾಲಾ, ಗುಜರಾತ್, ಸಿಯಾಲ್‌ಕೋಟ್, ಕೋಟ್ ಮೊಮಿನ್, ಮಧ್ ರಂಝಾ, ಚಕ್ವಾಲ್, ಕೊಹತ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳಲ್ಲಿಯೂ ಪ್ರಬಲ ಕಂಪನಗಳು ಸಂಭವಿಸಿವೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪದಿಂದಾಗಿ ಅವಘಡ ಸಂಭವಿಸಿದ್ದು, 150 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 10:20 ರ ವೇಳೆಗೆ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಬಲವಾಗಿ ಭೂಮಿ‌ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿತ್ತು. ಭೂಮಿ ಕಂಪಿಸುತ್ತಿದ್ದಂತೆ ಜನರು ಆತಂಕಗೊಂಡು ಮನೆಯಿಂದ ಹೊರ ಓಡಿ ಹೋಗಿದ್ದಾರೆ.

suddiyaana