ಪಾತಾಳಕ್ಕಿಳಿದ ಪಾಕ್! – ಇಮ್ರಾನ್ ಅಕ್ರಂ ದೇಶಕ್ಕೆ ಏನಾಯ್ತು?
ಕ್ರಿಕೆಟ್ ಕೆಡಿಸಿದ ಪಿಸಿಬಿ
ಬಾಂಗ್ಲಾದೇಶದ ವಿರುದ್ಧ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನ ಟೆಸ್ಟ್‌ನಲ್ಲಿ ಸೋತು ಪಾತಾಳಕ್ಕೆ ಬಿದ್ದಿದೆ.. ಅದರಲ್ಲೂ ಪಾಕಿಸ್ತಾನ ತನ್ನದೇ ನೆಲದಲ್ಲಿ ದಶಕಗಳಿಂದ ಯಾವುದೇ ದೇಶದೆದುರು ಟೆಸ್ಟ್ ಕ್ರಿಕೆಟ್‌ನಲ್ಲಿ ಹತ್ತು ವಿಕೆಟ್‌ಗಳ ಅಂತರದಲ್ಲಿ ಸೋತಿರಲಿಲ್ಲ.. ಆದ್ರೆ ಬಾಂಗ್ಲಾದೆದುರು ಅಂತದ್ದೊಂದು ಹೀನಾಯ ದಾಖಲೆಯನ್ನು ಪಾಕಿಸ್ತಾನ ಬರೆದ ನಂತರ ಪಾಕ್ ತಂಡದಲ್ಲಿದ್ದ ಭಿನ್ನಮತ ಕೂಡ ಸ್ಫೋಟಗೊಂಡಿತ್ತು.. ಅದ್ರಲ್ಲೂ ಪಾಕ್ ಟೀಂನ ಕ್ಯಾಪ್ಟನ್ ಶಾನ್ ಮಸೂದ್ ಮ್ಯಾಚ್ ವೇಳೆ ತಂಡದ ಫಾಸ್ಟ್ ಬೌಲಿಂಗ್‌ನ ಪವರ್ ಹೌಸ್ ಶಾಹಿನ್ ಆಫ್ರಿದಿಯ ಹೆಗಲ ಮೇಲೆ ಕೈಹಾಕೋದಿಕ್ಕೆ ಹೋಗಿದ್ದ.. ಆದ್ರೆ ಶಾನ್ ಮಸೂದ್ ಹೆಗಲ ಮೇಲೆ ಕೈಯಿಡುತ್ತಿದ್ದಂತೆ ಶಾಹಿನ್ ಆಫ್ರಿದಿ, ಕ್ಯಾಪ್ಟನ್ ಕೈಯನ್ನು ಸರಿಸಿಬಿಟ್ಟಿದ್ದ.. ಇದು ನಾಯಕನಿಗೂ ಆಟಗಾರನಿಗೂ ಇರುವ ಸಿಟ್ಟನ್ನು ಎತ್ತಿ ತೋರಿಸಿತ್ತು.. ಆದ್ರೆ ಕತೆ ಅಲ್ಲಿಗೇ ಮುಕ್ತಾಯವಾಗಿಲ್ಲ.. ಪಾಕಿಸ್ತಾನದ ಕ್ರಿಕೆಟ್ ಈಗ ಮತ್ತಷ್ಟು ಕೆಟ್ಟ ಸ್ಥಿತಿಯ ಕಡೆಗೆ ಕಾಲಿಟ್ಟಿದೆ.
ಇದನ್ನೂ ಓದಿ: ಶ್ರೀರಸ್ತು ಶುಭಮಸ್ತು ಸಿರಿ ಕಲ್ಯಾಣ – ಚಂದನ ಹುಡುಗ ಯಾರು ಗೊತ್ತಾ?
ಹೇಳಿಕೇಳಿ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿ ಎದ್ದಿರುವ ದೇಶ.. ಅಷ್ಟೇ ಅಲ್ಲ ಪಾಕಿಸ್ತಾನದ ಆಡಳಿತಕ್ಕೂ ದಿಕ್ಕು ದೆಸೆ ಇಲ್ಲ.. ಇಂತಾ ದೇಶದಲ್ಲಿ ಕ್ರಿಕೆಟ್ ಕೂಡ ಹಳ್ಳ ಹಿಡಿದಿರೋದರಲ್ಲಿ ಅಚ್ಚರಿ ಏನೇನೂ ಇಲ್ಲ.. ತಿನ್ನೋಕೆ ಗತಿಯಿಲ್ಲದ ದೇಶದಲ್ಲಿ ಪ್ರತಿಭೆಗಳನ್ನು ಹುಡುಕುವ ಕೆಲಸ ಯಾರು ತಾನೇ ಮಾಡ್ತಾರೆ.. ಅದಕ್ಕೀಗ ಪಾಕಿಸ್ತಾನದ ಕ್ರಿಕೆಟ್ ದೊಡ್ಡ ಬೆಲೆಯನ್ನೇ ತೆರುತ್ತಿದೆ.. ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವತ್ತೂ ಬಾಂಗ್ಲಾದೇಶದ ವಿರುದ್ಧ ಸೋಲನ್ನೇ ಕಾಣದ ಪಾಕಿಸ್ತಾನ, ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಹತ್ತು ವಿಕೆಟ್‌ಗಳ ಅಂತರದಲ್ಲಿ ಹೀನಾಯವಾಗಿ ಸೋತಿತ್ತು.. ಈ ಹಿಂದೆ ಆಫ್ಘಾನಿಸ್ತಾದ ಎದುರು ಅನುಭವಿಸಿದ ಸೋಲಿನ ಶಾಕ್‌ನಿಂದಲೇ ಹೊರಬರದ ಪಾಕಿಸ್ತಾನಕ್ಕೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸೋಲು ಅರಗಿಸಿಕೊಳ್ಳದ ಆಹಾರವಾಗಿದೆ.. ಆದ್ರೆ ಕೆಟ್ಟರೂ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್‌ಗೆ ಬುದ್ಧಿ ಬರೋದಿಲ್ಲ ಎನ್ನುವುದು ಸಾಬೀತಾಗಿದೆ.. ಯಾಕಂದ್ರೆ ಕ್ಯಾಪ್ಟನ್ ಜೊತೆಗೆ ಕಿತ್ತಾಡಿಕೊಂಡಿದ್ದ ಶಾಹಿನ್ ಆಫ್ರಿದಿಗೆ ಈಗ ಪಾಕ್ ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ.. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ಗೆ ಮಾಜಿ ನಾಯಕ ಹಾಗೂ ತಂಡದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ಶಾಹೀನ್ ಅಫ್ರಿದಿಯನ್ನು ತಂಡದಿಂದ ಹೊರಗಿಡಲಾಗಿದೆ.. ಆದ್ರೆ ಇದಕ್ಕೆ ಯಾವುದೇ ಕಾರಣವನ್ನು ಪಾಕ್ ಟೀಂ ಮ್ಯಾನೇಜ್‌ಮೆಂಟ್ ನೀಡಿಲ್ಲ. ಆದಾಗ್ಯೂ, ಟೀಂನಿಂದ ಶಾಹಿನ್ ಆಫ್ರಿದಿ ಹೊರಬಿದ್ದ ಮೇಲೆ ಹಲವು ಕಾರಣಗಳ ಬಗ್ಗೆ ಚರ್ಚೆಯಾಗ್ತಿದೆ.. ಅದರಲ್ಲಿ ಮೊದಲ ಕಾರಣವೆಂದರೆ ಶಾಹಿನ್ ಆಫ್ರಿದಿಯ ಕಳಪೆ ಫಾರ್ಮ್. ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡ ತನ್ನ ವೇಗದ ಬೌಲರ್‌ಗಳನ್ನು ನೆಚ್ಚಿಕೊಂಡಿತ್ತು. ಹೀಗಾಗಿಯೇ ನಾಲ್ವರು ವೇಗದ ಬೌಲರ್‌ಗಳನ್ನು ಕಣಕ್ಕಿಳಿಸಿತ್ತು. ಪಿಚ್ ಅನ್ನು ವೇಗಿಗಳಿಗೆ ನೆರವಾಗುವಂತೆ ಸಿದ್ದಪಡಿಸಿದ್ದ ಕಾರಣ ಮಾಜಿ ನಾಯಕ ಶಾಹೀನ್ ಅಫ್ರಿದಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಆಫ್ರಿದಿಗೆ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಹೊಸ ಚೆಂಡನ್ನು ಸ್ವಿಂಗ್ ಮಾಡುವಲ್ಲಿ ಹೆಸರುವಾಸಿಯಾಗಿರುವ ಶಾಹೀನ್, ಮೊದಲ ಪಂದ್ಯದಲ್ಲಿ ಅಂತಹದ್ಯಾವುದೇ ಕರಾಮತ್ತು ತೊರಲಿಲ್ಲ. ಅಲ್ಲದೆ ಅವರ ವೇಗವು ತುಂಬಾ ಕಡಿಮೆಯಾಗಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ 32 ಓವರ್‌ಗಳನ್ನು ಎಸೆದ ಅಫ್ರಿದಿ ಕೇವಲ 2 ವಿಕೆಟ್‌ಗಳನ್ನು ಮಾತ್ರ ಉರುಳಿಸಿದ್ದರು. ಇನ್ನೊಂದು ಪ್ರಮುಖ ಕಾರಣವೆಂದರೆ, ಮೊದಲ ಟೆಸ್ಟ್ ಪಂದ್ಯದ ವೇಳೆ ಶಾಹೀನ್ ಅಫ್ರಿದಿ ಅವರ ಮಡದಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ಅಫ್ರಿದಿ ಅವರೇ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳಿಕೊಳ್ತಿದ್ದಾರೆ.. ಆದರೆ ಈ ಬಗ್ಗೆ ಪಿಸಿಬಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.. ಪಾಕಿಸ್ತಾನ ಟೀಂ ಮ್ಯಾನೇಜ್‌ಮೆಂಟ್, ಯಾವುದೇ ಕಾರಣ ನೀಡದೆ ಅಫ್ರಿದಿಯನ್ನು ನಿರ್ಣಾಯಕ ಟೆಸ್ಟ್ನಿಂದ ಹೊರಗಿಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗ ಪಾಕ್ ಕ್ರಿಕೆಟ್‌ನಲ್ಲಿ ಶುರುವಾಗಿರುವ ವದಂತಿಯ ಪ್ರಕಾರ, ಅಫ್ರಿದಿ ಹಾಗೂ ಹಾಲಿ ನಾಯಕ ಶಾನ್ ಮಸೂದ್ ಜತೆಗೆ ಕೇವಲ ಆನ್‌ಫೀಲ್ಡ್‌ನಲ್ಲಿ ಮಾತ್ರವಲ್ಲದ ಆಫ್ ಫೀಲ್ಡ್‌ನಲ್ಲೂ ದೊಡ್ಡ ಜಗಳವೇ ನಡೆದಿದೆ.. ಈ ಕಾರಣದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಮೊದಲ ಟೆಸ್ಟ್‌ನಲ್ಲಿ ಸೋಲಿನ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಇಬ್ಬರ ನಡುವೆ ಜಗಳವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವರದಿಗಳು ಹೇಳುತ್ತಿವೆ. ಆದರೆ ಈ ಎಲ್ಲಾ ವದಂತಿಗಳ ನಡುವೆ ಕೋಚ್ ಜೇಸನ್ ಗಿಲ್ಲೆಸ್ಪಿ, ಅಫ್ರಿದಿಯನ್ನು ತಂಡದಿಂದ ಹೊರಗಿಟ್ಟಿದ್ದರ ಬಗ್ಗೆ ಬೇರೆಯೇ ಸಬೂಬು ನೀಡಿದ್ದಾರೆ.. ಅಫ್ರಿದಿ ಬಗ್ಗೆ ಮಾತಾಡಿರುವ ಜೇಸನ್ ಗಿಲ್ಲೆಸ್ಪಿ, ‘ಇದೊಂದು ಟೀಂನ ರಣತಂತ್ರಕ್ಕೆ ಸಂಬಂಧಿಸಿದ ನಿರ್ಧಾರ. ಕೂಲಂಕಷವಾಗಿ ಪರಿಶೀಲಿಸಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಶಾಹೀನ್ ಅವರ ಬೌಲಿಂಗ್ ಸುಧಾರಣೆಗಾಗಿ ನಿರ್ದಿಷ್ಟ ವಿಷಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರು ತಂಡದಿಂದ ಹೊರಗುಳಿಯಲೇಬೇಕಿದೆ.. ಅವರು ಪಾಕಿಸ್ತಾನದ ಪರವಾಗಿ ಎಲ್ಲಾ ಮೂರು ಫಾರ್ಮೆಟ್‌ಗಳ ಕ್ರಿಕೆಟ್‌ನಲ್ಲೂ ಆಡುತ್ತಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲು ಬಯಸಿದ್ದೇವೆ. ಅಲ್ಲದೆ ಈ ಬಗ್ಗೆ ನಾನು ಶಾಹೀನ್ ಜೊತೆ ಮಾತನಾಡಿದ್ದು, ಈ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಅವರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಕಳಪೆ ಫಾರ್ಮ್ನಲ್ಲಿ ಶಾಹೀನ್ ವಾಸ್ತವವಾಗಿ ಶಾಹೀನ್ ಅಫ್ರಿದಿ 2023 ರ ಜುಲೈನಲ್ಲಿ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದರು. ಅಂದಿನಿಂದ ಅವರು 10 ಇನ್ನಿಂಗ್ಸ್‌ಗಳಲ್ಲಿ ಕೇವಲ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವರು ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಬಾಬರ್ ಮೇಲೂ ತೂಗುಗತ್ತಿ?
ಇದೀಗ ಎರಡನೇ ಟೆಸ್ಟ್ನಿಂದ ಶಾಹೀನ್ ಅವರನ್ನು ಹೊರಗಿಟ್ಟಿರುವ ನಂತರ, ಬಾಬರ್ ಆಝಂ ಅವರನ್ನು ತಂಡದಿಂದ ಕೈಬಿಡಲಾಗುವುದು ಎಂಬ ಊಹಾಪೋಹಗಳು ಪ್ರಾರಂಭವಾಗಿವೆ. ಟೆಸ್ಟ್‌ನ ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಶತಕ ಅಥವಾ ಅರ್ಧಶತಕವನ್ನು ಗಳಿಸಲು ಬಾಬರ್ಗೆ ಸಾಧ್ಯವಾಗಿಲ್ಲ. ಈ 14 ಇನ್ನಿಂಗ್ಸ್‌ಗಳಲ್ಲಿ ಕೇವಲ 161 ರನ್ ಗಳಿಸಲಷ್ಟೇ ಶಕ್ತರಾಗಿರುವ ಬಾಬರ್, ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 22 ರನ್ ಮಾತ್ರ ಕಲೆಹಾಕಿದ್ದರು. ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ಬಾಬರ್, ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್ ಹೊಡೆದಿದ್ದರು.. ಇದೇ ಕಾರಣದಿಂದ ಬಾಬರ್‌ಗೂ ಟೆಸ್ಟ್ ಟೀಂನಿಂದ ಗೇಟ್ ಪಾಸ್ ಕೊಡ್ತಾರೆ ಎಂದು ಹೇಳಲಾಗುತ್ತಿದೆ.. ಪಾಕ್ ಕ್ರಿಕೆಟ್ ಅಭಿಮಾನಿಗಳು ಇದೇ ಬಾಬರ್ ಆಜಂನನ್ನು ಟೀಂ ಇಂಡಿಯಾದ ಕಿಂಗ್ ಕೊಹ್ಲಿಗೆ ಹೋಲಿಕೆ ಮಾಡ್ತಾ ಜಂಭ ಕೊಚ್ಚಿಕೊಳ್ತಿದ್ದರು.. ಆದ್ರೀಗ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳೋದಿಕ್ಕೆ ಬಾಬರ್ ಆಜಂ ಪರದಾಡ್ತಿದ್ದಾರೆ..
ಪಾಕ್ ಕ್ರಿಕೆಟ್ ಕೆಡಿಸಿತಾ ಪಿಸಿಬಿ?
ಪಾಕಿಸ್ತಾನ ಕ್ರಿಕೆಟ್ ಟೀಂ ಯಾವತ್ತೂ ಈಗಿನಷ್ಟು ಕೆಟ್ಟ ಪರಿಸ್ಥಿತಿಗೆ ತಲುಪಿಯೇ ಇರಲಿಲ್ಲ.. ಸದ್ಯ ಪ್ರಪಂಚದ ಪಾಲಿಗೆ ಪಾಕಿಸ್ತಾನ ಉಗ್ರರ ತವರುಮನೆಯಾಗಿದೆ.. ಇಂತಹ ದೇಶದಲ್ಲಿ ಕ್ರಿಕೆಟ್ ಬೆಳೆಸಲು ಬೇಕಾದ ಕೆಲಸವೇ ನಡೀತಿಲ್ಲ.. ಮುಲ್ತಾನ್‌ನ ಗಲ್ಲಿಗಳಲ್ಲಿ ಕ್ರಿಕೆಟ್ ಆಡ್ತಾ ಮುಲ್ತಾನ್‌ನ ಸುಲ್ತಾನ್ ಆದ ಇಂಜಮಾಮ್ ಉಲ್ ಹಕ್‌ರಂತಹ ಬ್ಯಾಟ್ಸ್‌ಮನ್‌ಗಳು ಈಗ ಪಾಕ್ ಕ್ರಿಕೆಟ್‌ನಲ್ಲಿ ಇಲ್ಲ.. ಇನ್ನು ಇಮ್ರಾನ್ ಖಾನ್.. ವಸೀಂ ಅಕ್ರಂ ಮಾದರಿಯ ಫಾಸ್ಟ್ ಬೌಲರ್‌ಗಳು.. ಕ್ರಿಕೆಟ್‌ನ ಪರಿಸ್ಥಿತಿ ನೋಡ್ಕೊಂಡು ಬೌಲಿಂಗ್‌ನಲ್ಲಿ ವೇರಿಯೇಷನ್ ಮಾಡುವ ಆಟಗಾರರು ಪಾಕ್ ಟೀಂಗೆ ಸಿಗ್ತಾನೇ ಇಲ್ಲ.. ಇದೆಲ್ಲದರ ಪರಿಣಾಮವಾಗಿಯೇ ಪಾಕ್ ಟೀಂ ದಿನೇ ದಿನೇ ಪಾತಾಳಕ್ಕೆ ಬೀಳ್ತಿದೆ.. ಏನೇ ಹೇಳಿ ಪಾಕ್ ಟೀಂ ವೀಕಾದ್ರೆ ಕ್ರಿಕೆಟ್‌ನ ಮಜಾ ಸ್ವಲ್ಪ ಕಡಿಮೆ ಆಗುತ್ತೆ.. ಯಾಕಂದ್ರೆ ಪಾಕ್ ಟೀಂ ಸ್ಟ್ರಾಂಗ್ ಆಗಿದ್ದಾಗ ಅದನ್ನು ಟೀಂ ಇಂಡಿಯಾ ಸೋಲಿಸುವಾಗ ಸಿಗುವ ಮಜಾನೇ ಬೇರೆ ಇರುತ್ತೆ.. ಇದಕ್ಕಾಗಿನೇ ಭಾರತ ಪಾಕ್ ಮ್ಯಾಚ್ ಅಂದ್ರೆ 1996ರ ವರ್ಲ್ಡ್‌ಕಪ್‌ನಲ್ಲಿ ಪಾಕ್ ತಂಡವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದೇ ನೆನಪಾಗೋದು.. ಅದನ್ನು ಬಿಟ್ರೆ 1999ರ ವರ್ಲ್ಡ್ ಕಪ್ ಮತ್ತು 2003ರ ವರ್ಲ್ಡ್‌ಕಪ್‌ನಲ್ಲೂ ಭಾರತ ತಂಡ ಪಾಕ್‌ನ ಬಲಿಷ್ಠ ತಂಡವನ್ನೇ ಕೆಡವಿ ಹಾಕಿತ್ತು.. 2007ರಲ್ಲಿ ಟಿ20 ವರ್ಲ್ಡ್ ಕಪ್ ಗೆದ್ದಾಗಲೂ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಿಯೇ ಗೆದ್ದು ಬೀಗಿತ್ತು.. ಕ್ರಿಕೆಟ್‌ನ ಮಜಾ ಪಡೆಯೋದಿಕ್ಕಾದ್ರೂ ಪಾಕ್ ಟೀಂ ಸುಧಾರಿಸಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಶಯ..