BRICS ಸೇರಲು ಹೊರಟ ಪಾಕ್ ಬಗ್ಗೆ ರಷ್ಯಾ ಕಾರ್ಟೂನ್ – ಶತ್ರು ಎಂಟ್ರಿಗೆ ಒಪ್ತಾರಾ ಮೋದಿ?

BRICS ಸೇರಲು ಹೊರಟ ಪಾಕ್ ಬಗ್ಗೆ ರಷ್ಯಾ ಕಾರ್ಟೂನ್ – ಶತ್ರು ಎಂಟ್ರಿಗೆ ಒಪ್ತಾರಾ ಮೋದಿ?

ಬ್ರಿಕ್ಸ್. ಪ್ರಪಂಚದ 5 ರಾಷ್ಟ್ರಗಳು ಸೇರಿ ಮಾಡಿಕೊಂಡಿರುವ ಒಂದು ಮಹತ್ವದ ಆರ್ಥಿಕ ಸಂಘಟನೆ. ವ್ಯಾಪಾರ, ಭ್ರಷ್ಟಾಚಾರ, ಅಂತಾರಾಷ್ಟ್ರೀಯ ಭಯೋತ್ವಾದನೆ, ಸಾಂಕ್ರಾಮಿಕ ರೋಗಗಳ ಕಡಿವಾಣ, ಆರ್ಥಿಕ ಚೇತರಿಕೆ ಸೇರಿದಂತೆ ವಿವಿಧ ಉದ್ದೇಶಗಳನ್ನ ಇಟ್ಟುಕೊಂಡು 5 ದೇಶಗಳು ರಚಿಸಿಕೊಂಡಿರುವ ಗುಂಪು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಸದಸ್ಯತ್ವ ಹೊಂದಿವೆ. ವಾರ್ಷಿಕವಾಗಿ ಒಂದು ಬಾರಿ ಶೃಂಗಸಭೆ ನಡೆಸುವ ಈ ರಾಷ್ಟ್ರಗಳ ಸದಸ್ಯರು ಹಲವಾರು ಚರ್ಚೆಗಳನ್ನ ನಡೆಸುತ್ತಾರೆ. ತಮ್ಮ ತಮ್ಮ ದೇಶಗಳ ಸಮಗ್ರ ಅಭಿವೃದ್ಧಿ ಬಗ್ಗೆ ನಿರ್ಧಾರಗಳನ್ನ ಕೈಗೊಳ್ಳುತ್ತಾರೆ. ಮುಂದಿನ ವರ್ಷ ಈ ಐದು ರಾಷ್ಟ್ರಗಳ ಒಕ್ಕೂಟಕ್ಕೆ ಮತ್ತೆ 6 ದೇಶಗಳು ಸೇರ್ಪಡೆಯಾಗುವುದು ಖಚಿತವಾಗಿದೆ. ಇದರ ನಡುವೆಯೇ ಪಾಕಿಸ್ತಾನದ ಅದೊಂದು ನಡೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಆರ್ಥಿಕ ಮತ್ತು ರಾಜಕೀಯವಾಗಿ ಅದಃಪತನದ ಸ್ಥಿತಿಗೆ ತಲುಪಿರುವ ಪಾಕಿಸ್ತಾನ ಬೇರೆ ರಾಷ್ಟ್ರಗಳ ಬಳಿ ಕೈಚಾಚಿ ನಿಲ್ಲುತ್ತಿದೆ. ತನ್ನದೇ ದೇಶದ ನಿವಾಸಿಗಳಿಗೆ ಊಟ ಕೊಡಲು ಸಾಧ್ಯವಾಗದಷ್ಟು ದುಸ್ಥಿತಿಗೆ ತಲುಪಿದೆ. ಇದೀಗ ಇದೇ ಪಾಕಿಸ್ತಾನ ಬ್ರಿಕ್ಸ್ ಸಂಘಟನೆಯ ಸದಸ್ಯ ರಾಷ್ಟ್ರವಾಗುವ ತವಕದಲ್ಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದೆ. 2024 ರಲ್ಲಿ ರಷ್ಯಾದ ಅಧ್ಯಕ್ಷತೆ ಅಡಿಯಲ್ಲಿ ಆರು ರಾಷ್ಟ್ರಗಳು ಹೊಸ ಸದಸ್ಯತ್ವ ಪಡೆಯಲು ಮುಂದಾಗಿವೆ. ಇದರ ನಡುವೆ ಬ್ರಿಕ್ಸ್‌ಗೆ ಸೇರಲು ಪಾಕಿಸ್ತಾನದ ಅರ್ಜಿ ಬಂದಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬ್ರಿಕ್ಸ್ ಸದಸ್ಯತ್ವಕ್ಕಾಗಿ ಪಾಕಿಸ್ತಾನ ಅರ್ಜಿ ಸಲ್ಲಿಸಿದ್ದು, ಸದಸ್ಯತ್ವ ಪಡೆಯಲು ನೆರವು ನೀಡುವಂತೆ ರಷ್ಯಾಗೆ ಮನವಿ ಮಾಡಿದೆ. ಈ ಕುರಿತು ಮಾಸ್ಕೋದಲ್ಲಿರುವ ಪಾಕಿಸ್ತಾನ ದೇಶದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ ಮಾಹಿತಿ ನೀಡಿದ್ದಾರೆ. ಬ್ರಿಕ್ಸ್ ಗುಂಪಿನಲ್ಲಿ ಸದಸ್ಯತ್ವಕ್ಕಾಗಿ ಪಾಕಿಸ್ತಾನ ಅರ್ಜಿ ಸಲ್ಲಿಸಿದೆ ಮತ್ತು ರಷ್ಯಾದ ಬೆಂಬಲವನ್ನು ಕೋರಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನವು ಬ್ರಿಕ್ಸ್-ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸದಸ್ಯತ್ವಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದೆ. ಇದು ಮುಂದಿನ ವರ್ಷ ರಷ್ಯಾದ ಅಧ್ಯಕ್ಷರ ನೇತೃತ್ವದಲ್ಲಿ ಆರು ಹೊಸ ಸದಸ್ಯರ ಪ್ರವೇಶದೊಂದಿಗೆ ವಿಸ್ತರಿಸಲಿದೆ ಎಂದು ಹೇಳಿದ್ದಾರೆ. ಸದಸ್ಯತ್ವ ಪ್ರಕ್ರಿಯೆಯಲ್ಲಿ ರಷ್ಯಾದ ಸಹಾಯವನ್ನು ನಿರೀಕ್ಷಿಸುತ್ತಿದೆ ಎಂದು ರಷ್ಯಾದ ಅಧಿಕೃತ TASS ಸುದ್ದಿ ಸಂಸ್ಥೆ ವರದಿ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ವರ್ಷದ ಬ್ರಿಕ್ಸ್ ಶೃಂಗಸಭೆಯು ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಹೊಸ ಸದಸ್ಯರನ್ನಾಗಿ ಔಪಚಾರಿಕವಾಗಿ ಒಪ್ಪಿಕೊಂಡಿತ್ತು. 2024 ರಲ್ಲಿ ರಷ್ಯಾದ ಅಧ್ಯಕ್ಷತೆ ಅಡಿಯಲ್ಲಿ ಆರು ಹೊಸ ಸದಸ್ಯರೊಂದಿಗೆ ಉದಯೋನ್ಮುಖ ಆರ್ಥಿಕತೆಗಳ ಗುಂಪು ತನ್ನ ಅತಿದೊಡ್ಡ ವಿಸ್ತರಣೆಗೆ ಸಿದ್ಧವಾಗಿರುವುದರಿಂದ ಬ್ರಿಕ್ಸ್‌ಗೆ ಸೇರಲು ಪಾಕಿಸ್ತಾನದ ಅರ್ಜಿ ಬಂದಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : ಸಿಖ್ ಬಂಡುಕೋರನನ್ನು ಉಳಿಸಿ ಭಾರತಕ್ಕೆ ಎಚ್ಚರಿಕೆ ಕೊಟ್ಟ ಅಮೆರಿಕ – ಬಣ್ಣ ಬದಲಿಸಿದ್ದೇಕೆ ದೊಡ್ಡಣ್ಣ?

ಬ್ರಿಕ್ಸ್ ನ ಸದಸ್ಯತ್ವ ಹೊಂದಿರುವ ಭಾರತ ಕೂಡ ಬ್ರಿಕ್ಸ್ ಗುಂಪಿನ ವಿಸ್ತರಣೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದೆ. ಆದರೆ, ಬ್ರಿಕ್ಸ್ ಸೇರುವ ಪಾಕಿಸ್ತಾನದ ಪ್ರಯತ್ನದ ಬಗ್ಗೆ ಭಾರತ ಸರ್ಕಾರ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಿಲ್ಲ. ಇನ್ನು ಪಾಕಿಸ್ತಾನ ಹೆಚ್ಚಿನ ಬ್ರಿಕ್ಸ್ ಸದಸ್ಯರೊಂದಿಗೆ ಮತ್ತು ಹೊಸದಾಗಿ ಆಹ್ವಾನಿತ ದೇಶಗಳ ಗುಂಪಿನೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದೆ ಎಂದು ಪಾಕಿಸ್ತಾನ ಸಮರ್ಥನೆ ಮಾಡಿಕೊಂಡಿದೆ. ಬಹುಪಕ್ಷೀಯತೆಯ ಕಟ್ಟಾ ಬೆಂಬಲಿಗರಾಗಿ ಮತ್ತು ಹಲವಾರು ಬಹುಪಕ್ಷೀಯ ಸಂಸ್ಥೆಗಳ ಸದಸ್ಯರಾಗಿ, ಪಾಕಿಸ್ತಾನವು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದೆ ಎಂದು ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ಪ್ರಸ್ತುತ ಪಾಕಿಸ್ತಾನದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಅದೋಗತಿಗೆ ತಲುಪಿದೆ. ಹೀಗಾಗಿ ತನ್ನ ಸರ್ವಋತು ಮಿತ್ರ ಚೀನಾದ ಬೆಂಬಲವನ್ನು ಪಾಕಿಸ್ತಾನ ನಿರೀಕ್ಷಿಸುತ್ತಿದೆ. ಆದರೆ ಇತರ ನಾಲ್ಕು ಸದಸ್ಯರಾದ ಬ್ರೆಜಿಲ್, ರಷ್ಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ಒಪ್ಪಿಕೊಳ್ಳುವ ಪ್ರಸ್ತಾಪಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಅಷ್ಟಕ್ಕೂ ಈ ಬ್ರಿಕ್ಸ್ ಗುಂಪಿಗೆ ಸೇರಲು ಪಾಕಿಸ್ತಾನ ಇಷ್ಟೊಂದು ಆಸಕ್ತಿ ತೋರಿಸುತ್ತಿರೋದೇಕೆ ಅನ್ನೋದಕ್ಕೆ ಕಾರಣವೂ ಇದೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಸೇರಿ 2010ರಲ್ಲಿ ಬ್ರಿಕ್ಸ್ ರಚನೆಯಾಯಿತು. ಈ ದೇಶಗಳ ಮೊದಲ ಅಕ್ಷರಗಳನ್ನು ಸೇರಿಸಿ, ಬ್ರಿಕ್ಸ್ ಎಂಬ ಹೆಸರನ್ನಿಡಲಾಯಿತು. ಈ ದೇಶಗಳು ಜಾಗತಿಕ ಜನಸಂಖ್ಯೆಯಲ್ಲಿ ಶೇಕಡಾ 41ರಷ್ಟು ಪಾಲನ್ನ ಈ ಐದು ದೇಶಗಳು ಹೊಂದಿವೆ. ಜಾಗತಿಕ ಅಭಿವೃದ್ಧಿಯಲ್ಲಿ ಶೇಕಡಾ 24ರಷ್ಟು ಪಾಲು ಮತ್ತು ಜಾಗತಿಕ ವ್ಯಾಪಾರದಲ್ಲಿ ಶೇಕಡಾ 16ರಷ್ಟು ಪಾಲುದಾರಿಕೆ ಹೊಂದಿವೆ. ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ, ಸಂಘಟನೆಯಲ್ಲಿ ಇನ್ನೂ ಆರು ದೇಶಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಇದೀಗ ಪಾಕಿಸ್ತಾನ ಕೂಡ ಈ ಪ್ರಮುಖ ಸಂಘಟನೆಯ ಭಾಗವಾಗಲು ಅರ್ಜಿ ಸಲ್ಲಿಕೆ ಮಾಡಿದೆ. ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ರಿಯಾಬೊವ್ ಹೇಳಿಕೆ ಆಧರಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು, 2024ರಲ್ಲಿ ಕಜಾನ್‌ನಲ್ಲಿ ನಡೆಯಲಿರುವ ಶೃಂಗಸಭೆಗೂ ಮುನ್ನವೇ ಅರ್ಜಿ ಸಲ್ಲಿಸಿದ ಪಾಕಿಸ್ತಾನಕ್ಕೆ ಸದಸ್ಯತ್ವ ನೀಡಲು ಯೋಚಿಸುತ್ತಿದೆ ಎಂದು ಉಲ್ಲೇಖಿಸಿದೆ. ಈ ಹಿಂದೆ ಚೀನಾ ಕೂಡ ಪಾಕಿಸ್ತಾನಕ್ಕೆ ಸದಸ್ಯತ್ವ ನೀಡುವ ಬಗ್ಗೆ ಅನುಕೂಲಕರ ನಿಲುವಿನ ಸುಳಿವು ನೀಡಿತ್ತು. ಅಷ್ಟಕ್ಕೂ ಬ್ರಿಕ್ಸ್ ನ ಮೂಲ ಉದ್ದೇಶವೇ ಸಮಗ್ರ ಸಹಕಾರ. ಪರಸ್ಪರ ಲಾಭದಾಯಕ, ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಗಾಗಿ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ವಿಸ್ತರಿಸುವುದು ಗುಂಪಿನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಸದಸ್ಯರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಪ್ರತ್ಯೇಕ ದೇಶಗಳ ಆರ್ಥಿಕ ಸಾಮರ್ಥ್ಯಗಳ ಮೇಲೆ ನಿರ್ಧರಿಸಲಾಗುತ್ತೆ. ಇಂತಹ ವೈವಿಧ್ಯಮಯ ಉದ್ದೇಶಗಳು BRICS ಒಂದು ನವೀನ ಮತ್ತು ಉತ್ತೇಜಕ ರಾಜಕೀಯ-ರಾಜತಾಂತ್ರಿಕ ಘಟಕವಾಗಿ ಹೊರಹೊಮ್ಮಲು ಅವಕಾಶ ಮಾಡಿಕೊಡುತ್ತದೆ. ಇದು ಜಾಗತಿಕ ಹಣಕಾಸು ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸುಧಾರಣಾ ಸಂಸ್ಥೆಗಳನ್ನು ಪರಿಹರಿಸುವ ಗುರಿ ಹೊಂದಿದೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಸೇರಿ ಐದು ರಾಷ್ಟ್ರಗಳ ಸಂಘಟನೆಯೇ ಈ ಬ್ರಿಕ್ಸ್. ಈ ದೇಶಗಳ ಮೊದಲಕ್ಷರಗಳಾದ B -ಬ್ರೆಜಿಲ್, R-ರಷ್ಯಾ, I-ಇಂಡಿಯಾ, C- ಚೀನಾ ಮತ್ತು S- ಸೌತ್ ಆಫ್ರಿಕಾ ಸೇರಿಸಿದ ಹೆಸರು BRICS ಆಗಿದೆ. 2009ರಲ್ಲಿ ಮೊದಲಿಗೆ ನಾಲ್ಕು ದೇಶಗಳಷ್ಟೇ ಸೇರಿ BRIC ಸಂಘಟನೆಯಾಗಿ ಆರಂಭವಾಗಿತ್ತು. 2010ರಲ್ಲಿ ದಕ್ಷಿಣ ಆಫ್ರಿಕವೂ ಸೇರಿದ ನಂತರ ಬ್ರಿಕ್ಸ್ ಆಗಿ ಬದಲಾವಣೆ ಮಾಡಲಾಯ್ತು. 2009ರಿಂದಲೂ ಈ ಸಂಘಟನೆ ವಾರ್ಷಿಕವಾಗಿ ಶೃಂಗಸಭೆ ಸೇರುತ್ತಾ ವಿವಿಧ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾ ಬಂದಿವೆ. ಬ್ರಿಕ್ಸ್ ನ ಜಾಗತಿಕ ಜನಸಂಖ್ಯೆ ಶೇಕಡಾ 40 ಕ್ಕಿಂತಲೂ ಹೆಚ್ಚು ಭಾಗ ಇದ್ದು, ಬ್ರಿಕ್ಸ್ ದೇಶಗಳಲ್ಲಿ 360 ಕೋಟಿಗೂ ಅಧಿಕ ಜನರಿದ್ದಾರೆ. ಅಂದರೆ ವಿಶ್ವದ ಅರ್ಧದಷ್ಟು ಜನಸಂಖ್ಯೆಯನ್ನ ಈ ಐದು ರಾಷ್ಟ್ರಗಳು ಪ್ರತಿನಿಧಿಸುತ್ತವೆ. ಐದು ಬ್ರಿಕ್ಸ್ ದೇಶಗಳಲ್ಲಿ ಒಟ್ಟು 16.6 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ್ದು, ಭಾರತದ 2.38 ಟ್ರಿಲಿಯನ್ ಡಾಲರ್ ಆರ್ಥಿಕ ಸಂಪತ್ತು ಇದೆ. ಭಾರತ ವಾರ್ಷಿಕವಾಗಿ 7.5 ಪ್ರತಿಶತ ಜಿಡಿಪಿ ಬೆಳವಣಿಗೆ ಕಾಣುತ್ತಿದೆ. ಐದು ದೇಶಗಳಲ್ಲೇ ಅತಿ ವೇಗದ ಬೆಳವಣಿಗೆ ಭಾರತದಲ್ಲಿ ನಡೆಯುತ್ತಿದೆ. ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯಕ್ಕಾಗಿ 2015 ರಲ್ಲಿ ತನ್ನದೇ ಆದ ಬ್ಯಾಂಕ್ ಕೂಡ ಸ್ಥಾಪನೆ ಮಾಡಿಕೊಂಡಿವೆ. ಬ್ರಿಕ್ಸ್ ಬ್ಯಾಂಕ್‌ ನ್ನು ಅಧಿಕೃತವಾಗಿ NBD ಅಂದ್ರೆ ಹೊಸ ಅಭಿವೃದ್ಧಿ ಬ್ಯಾಂಕ್ ಎಂದು ನಾಮಕರಣ ಮಾಡಲಾಗಿದೆ. ಇದರ ಕೇಂದ್ರ ಕಚೇರಿ ಚೀನಾದ ಶಾಂಫೈ ನಗರದಲ್ಲಿದೆ.

ಸದ್ಯ ಐದು ರಾಷ್ಟ್ರಗಳ ಈ ಗುಂಪು ಮುಂದಿನ ವರ್ಷ ಮತ್ತೆ 6 ರಾಷ್ಟ್ರಗಳ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾಗಲಿದೆ. ಇದರ ನಡುವೆ ಪಾಕಿಸ್ತಾನ ತಾನೂ ಸದಸ್ಯ ರಾಷ್ಟ್ರವಾಗಲು ಅರ್ಜಿ ಸಲ್ಲಿಕೆ ಮಾಡಿದೆ. ಮುಂದಿನ ಶೃಂಗಸಭೆಯ ಮುಂದಾಳತ್ವ ವಹಿಸಿರುವ ರಷ್ಯಾದ ಬೆಂಬಲ ಕೋರಿದೆ. ಸದ್ಯ ರಷ್ಯಾದಲ್ಲಿ ಹರಿದಾಡುತ್ತಿರುವ ಕಾರ್ಟೂನ್ ವೊಂದು ಪಾಕಿಸ್ತಾನಕ್ಕೆ ಗ್ರೀನ್ ಸಿಗ್ನಲ್ ಸಿಗಬಹುದು ಎಂಬ  ನಿರೀಕ್ಷೆ ಮೂಡಿಸಿದೆ. ಈಗಾಗಲೇ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಪಾಕಿಸ್ತಾನಕ್ಕೆ ವೆಲ್ಕಂ ಮಾಡುತ್ತಿರುವ ಕಾರ್ಟೂನ್ ಹರಿದಾಡುತ್ತಿದೆ. ಒಟ್ಟಾರೆ ಬ್ರಿಕ್ಸ್ ಸೇರಿಕೊಳ್ಳೋಕೆ ಹವಣಿಸುತ್ತಿರುವ ಪಾಕಿಸ್ತಾನದ ನಡೆ ಜಗತ್ತಿನ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹಾಗೇ ಈ ವಿಚಾರದಲ್ಲಿ ಭಾರತ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.

Shantha Kumari