ಪಾಕ್ ಮಸೀದಿಯಲ್ಲೇ ಬ್ಲಾಸ್ಟ್ – ಬಾಂ*ಬ್ಗೆ ಬೆಚ್ಚಿದ ಕ್ರಿಕೆಟಿಗರು
ಚಾಂಪಿಯನ್ಸ್ ಟ್ರೋಫಿ ಶಿಫ್ಟ್!?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಉಗ್ರರು ದಾಳಿ ಮಾಡುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಪಂದ್ಯದ ವೇಳೆ ರಚಿನ್ ರವೀಂದ್ರ ಅವರತ್ತ ಉಗ್ರ ಸಂಘಟನೆ ಬೆಂಬಲಿಗನೋರ್ವ ನುಗ್ಗಿದ್ದ ಘಟನೆ ವ್ಯಾಪಕ ಸುದ್ದಿಯಾಗಿತ್ತು.. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಉಗ್ರರು ನೇರವಾಗಿ ಬಾಂಬ್ ಸ್ಫೋಟವನ್ನೇ ನಡೆಸಿದ್ದಾರೆ.
ಹೌದು.. ಪಾಕಿಸ್ತಾನದ ಪೇಶಾವರ ಸಮೀಪದ ಖೈಬರ್ ಪಖ್ತುಂಖ್ವಾದಲ್ಲಿರುವ ಮಸೀದಿಯ ಹೊರಗೆ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನೌಶೇರಾ ಪಟ್ಟಣದ ಬಳಿಯ ಅಖೋರಾ ಖಟ್ಟಕ್ ಪ್ರದೇಶದ ದಾರುಲ್ ಉಲೂಮ್ ಹಕ್ಕಾನಿಯಾದಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸಂಭವಿಸಿದ ಶಂಕಿತ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿ, 21 ಜನರು ಗಾಯಗೊಂಡಿದ್ದಾರೆ. ಈ ಬಾಂಬ್ ಸ್ಫೋಟ ಪ್ರಕರಣವು ಇದೀಗ ದೇಶವನ್ನೇ ಬೆಚ್ಚಿಬೀಳಿಸಿದ್ದು ಮಾತ್ರವಲ್ಲದೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿರುವ ವಿದೇಶ ತಂಡಗಳಿಗೂ ಭೀತಿ ಕಾಣಲಾರಂಭಿಸಿದೆ. ಅಲ್ಲದೆ ಆಟಗಾರರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮದರಸಾದ ಉಪ ಮೌಲಾನಾ ಆಗಿರುವ ಜೆಯುಐ-ಎಸ್ ನಾಯಕ ಮೌಲಾನಾ ಹಮೀದ್ ಉಲ್ ಹಕ್ ಸ್ಫೋಟದ ಸಮಯದಲ್ಲಿ ಮಸೀದಿಯಲ್ಲಿದ್ದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರ ಮಗ ಸಾನಿ ಹಕ್ಕಾನಿ ಹೇಳಿದ್ದಾರೆ. ಆದಾಗ್ಯೂ, ಅನೇಕ ವರದಿಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ರಂಜಾನ್ ಹಬ್ಬಕ್ಕೂ ಮುನ್ನ ನಡೆಸಿರುವ ಈ ಭೀಕರ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ. ಇದೊಂದು ಆತ್ಮಹತ್ಯಾ ಸ್ಫೋಟ ಎಂದಿದ್ದಾರೆ.
ರಂಜಾನ್ ಮಾಸದಲ್ಲಿ ಈ ಕೃತ್ಯ ನಡೆದಿರುವುದುಕ್ಕೆ ಪಾಕಿಸ್ತಾನ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಆಂತರಿಕ ಸಚಿವ x ನಲ್ಲಿ ಪೋಸ್ಟ್ ಮಾಡಿದ್ದು, ‘ಪಾಕಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಶತ್ರು ದೇಶವು ಪಿತೂರಿ ನಡೆಸುತ್ತಿದೆ. ನಾವು ಶತ್ರುಗಳ ಪ್ರತಿಯೊಂದು ಪಿತೂರಿಯನ್ನು ವಿಫಲಗೊಳಿಸುತ್ತೇವೆ. ಮೃತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ಬಾಂಬ್ ಸ್ಫೋಟದ ಬಗ್ಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ, ಇದೊಂದು ಹೇಡಿತನದ ಕೃತ್ಯವಾಗಿದೆ. ಇಂಥ ಕೃತ್ಯಗಳಿಂದ ಭಯೋತ್ಪಾದನೆಯ ವಿರುದ್ಧದ ನಮ್ಮ ಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಒಟ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಹೊತ್ತಲ್ಲೇ ಪಾಕಿಸ್ತಾನದಲ್ಲಿ ನಡೆಯತ್ತಿರೋ ಘಟನೆಗಳು ವಿದೇಶಿ ಕ್ರಿಕೆಟಿಗರನ್ನ ಬೆಚ್ಚಿ ಬೀಳಿಸಿದ್ದು ಮಾತ್ರ ಸುಳ್ಳಲ್ಲ..