ಪಾಕ್ನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್! – ಕಾರಣವೇನು ಗೊತ್ತಾ?

ಹೊಸವರ್ಷ 2024 ಕ್ಕೆ ಇನ್ನು ಕ್ಣಗಣನೆ ಆರಂಭವಾಗಿದೆ. ಹೊಸವರ್ಷವನ್ನು ವಿಜೃಂಭಣೆಯಿಂದ ಆಚರಿಸಲು ಹಲವು ದೇಶದ ಜನರು ಕಾತರದಿಂದ ಕಾಯುತ್ತಿದ್ದಾರೆ. ಆದ್ರೆ ಪಾಪಿ ಪಾಕಿಸ್ತಾನದಲ್ಲಿ ಮಾತ್ರ ಈ ವರ್ಷ ಹೊಸವರ್ಷಾರಣೆಗೆ ಬ್ರೇಕ್ ಹಾಕಲಾಗಿದೆ. ದೇಶದಲ್ಲಿ ಹೊಸ ವರ್ಷಾಚರಣೆ (2024) ನಿಷೇಧಿಸಲಾಗಿದೆ ಎಂದು ಹಂಗಾಮಿ ಪ್ರಧಾನ ಮಂತ್ರಿ ಅನ್ವಾರುಲ್ ಹಕ್ ಕಾಕರ್ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಬಾಂಬ್ ದಾಳಿಯಿಂದ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದಾರೆ ಈ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವುದು ಬೇಡ ಎಂದು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು – ರೋಹಿತ್ ಶರ್ಮಾ ಲೆಕ್ಕಾಚಾರ ಫೇಲ್?
ಈ ಬಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಪಾಕ್ ಪ್ರಧಾನಿ, ಇಸ್ರೇಲ್-ಹಮಾಸ್ ಯುದ್ಧದಿಂದಾಗಿ ಗಾಜಾದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗಾಜಾ ಜನರಿಗಾಗಿ ನಾವು ದನಿ ಎತ್ತಬೇಕು. ಅದಕ್ಕಾಗಿ ಹೊಸ ವರ್ಷದ ಸಂಭ್ರಮ ಬೇಡ. ಪ್ಯಾಲೆಸ್ತೀನ್ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪ್ಯಾಲೆಸ್ತೀನ್ ಸಹೋದರ-ಸಹೋದರಿಯರೊಂದಿಗೆ ನಾವಿದ್ದೇವೆ ಎಂಬ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರವು ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸುತ್ತದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 7 ರಂದು ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000 ಮಕ್ಕಳು ಸೇರಿದಂತೆ 21,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಹತ್ಯೆಯಾಗಿದ್ದಾರೆ. ಹಿಂಸಾಚಾರ ಮತ್ತು ಅನ್ಯಾಯದ ಎಲ್ಲಾ ಮಿತಿಗಳನ್ನು ದಾಟಿದ ಇಸ್ರೇಲಿ ಪಡೆಗಳಿಂದ ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಡೀ ಪಾಕಿಸ್ತಾನಿ ರಾಷ್ಟ್ರ ಮತ್ತು ಮುಸ್ಲಿಂ ಜಗತ್ತು, ಗಾಜಾದಲ್ಲಿ ಮುಗ್ಧ ಮಕ್ಕಳ ಹತ್ಯಾಕಾಂಡ ಮತ್ತು ನಿರಾಯುಧ ಪ್ಯಾಲೆಸ್ತೀನಿಯನ್ನರ ನರಮೇಧದಿಂದಾಗಿ ದುಃಖದಲ್ಲಿದೆ. ಪ್ಯಾಲೆಸ್ತೀನ್ಗೆ ಸಕಾಲಿಕ ನೆರವು ನೀಡಲು ಮತ್ತು ಗಾಜಾದಲ್ಲಿರುವ ಗಾಯಾಳುಗಳನ್ನು ಸ್ಥಳಾಂತರಿಸಲು ಪಾಕಿಸ್ತಾನವು ಜೋರ್ಡಾನ್ ಮತ್ತು ಈಜಿಪ್ಟ್ನೊಂದಿಗೆ ಮಾತುಕತೆ ನಡೆಸುತ್ತಿದೆ. ಪಾಕಿಸ್ತಾನವು ವಿವಿಧ ಜಾಗತಿಕ ವೇದಿಕೆಗಳಲ್ಲಿ ಪ್ಯಾಲೆಸ್ತೀನಿಯನ್ ಜನರ ದುಃಸ್ಥಿತಿ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸಿದೆ. ಇಸ್ರೇಲಿ ರಕ್ತಪಾತವನ್ನು ತಡೆಯಲು ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಕಾಕರ್ ಸ್ಪಷ್ಟಪಡಿಸಿದ್ದಾರೆ.