ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾದಲ್ಲಿ 10 ಭಯೋತ್ಪಾದಕರ ಹತ್ಯೆ
ನಿಷೇಧಿತ ಸಂಘಟನೆಗೆ ಸೇರಿದ ಕನಿಷ್ಠ ಏಳು ಉಗ್ರರು ಮಟಾಷ್

ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾದಲ್ಲಿ 10 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ದೇಶದ ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುನ್ಖ್ವಾದಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ಕನಿಷ್ಠ ಏಳು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಕ್ಯಾಪ್ಟನ್ ಕೂಡ ಸಾವನ್ನಪ್ಪಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಕ್ಷಿಣ ವಜೀರಿಸ್ತಾನದ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಕರ್ರಿ ಮಲಾಂಗ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನ ಸೇನೆಯ ಪ್ರಕಾರ, ಕಾರ್ಯಾಚರಣೆಯಲ್ಲಿ ಇನ್ನೂ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಪಾಕಿಸ್ತಾನ ಸರಣಿ ಭಯೋತ್ಪಾದಕ ಘಟನೆಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ, ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ರೈಲು ಅಪಹರಣ ಘಟನೆಯು ಕೋಲಾಹಲವನ್ನು ಸೃಷ್ಟಿಸಿತು. ಇದರಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ 400ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಯಾಣಿಕರು ಸೇರಿದಂತೆ ಇಡೀ ರೈಲನ್ನು ಅಪಹರಿಸಿತು. ಘಟನೆಯ ಬಗ್ಗೆ ಬಿಎಲ್‌ಎಎ ಮತ್ತು ಪಾಕಿಸ್ತಾನ ಸೇನೆಯಿಂದ ವಿಭಿನ್ನ ಹೇಳಿಕೆಗಳು ಬಂದಿದ್ದವು. ಪಾಕಿಸ್ತಾನ ಸೇನೆಯು 33 ಭಯೋತ್ಪಾದಕರನ್ನು ಕೊಂದು ಬಹುತೇಕ ಎಲ್ಲಾ ಒತ್ತೆಯಾಳುಗಳನ್ನು ರಕ್ಷಿಸಿದೆ ಎಂದು ಹೇಳಿತ್ತು. ದಾಳಿಯಲ್ಲಿ 27 ಪಾಕ್ ಸೈನಿಕರು ಮೃತಪಟ್ಟಿದ್ದರು ಎಂದು ಸೇನೆ ಹೇಳಿತ್ತು. ಆದರೆ 214 ಒತ್ತೆಯಾಳುಗಳೊಂದಿಗೆ ಹಲವಾರು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಿಎಲ್‌ಎ ಹೇಳಿಕೊಂಡಿದೆ. ಹತ್ಯೆಗೀಡಾದ ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಎಸ್‌ಪಿಆರ್ ತಿಳಿಸಿದೆ. ಈ ಭಯೋತ್ಪಾದಕರು ವಿವಿಧ ಕಾನೂನು ಜಾರಿ ಸಂಸ್ಥೆಗಳ ವಿರುದ್ಧ ಹಲವಾರು ದಾಳಿಗಳನ್ನು ನಡೆಸುವುದರ ಜೊತೆಗೆ ಅಮಾಯಕ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.