PAKಗೆ ಸಂಬಳಕ್ಕೂ ಹಣ ಇಲ್ಲ – ಚಾಂಪಿಯನ್ಸ್ ಟ್ರೋಫಿ ಹೇಗೆ ನಡೆಸ್ತಾರೆ?
ಕ್ರಿಕೆಟ್ ನಲ್ಲೂ ಮುಳುಗುತ್ತಾ ದಿವಾಳಿ ರಾಷ್ಟ್ರ?

PAKಗೆ ಸಂಬಳಕ್ಕೂ ಹಣ ಇಲ್ಲ – ಚಾಂಪಿಯನ್ಸ್ ಟ್ರೋಫಿ ಹೇಗೆ ನಡೆಸ್ತಾರೆ?ಕ್ರಿಕೆಟ್ ನಲ್ಲೂ ಮುಳುಗುತ್ತಾ ದಿವಾಳಿ ರಾಷ್ಟ್ರ?

ಆರ್ಥಿಕವಾಗಿ ದಿವಾಳಿಯಾಗಿರೋ ಪಾಕಿಸ್ತಾನದಲ್ಲಿ ಕ್ರಿಕೆಟ್ ಕೂಡ ಅಧೋಗತಿಗೆ ಸಾಗ್ತಿದೆ. ಸಣ್ಣಪುಟ್ಟ ದೇಶಗಳ ವಿರುದ್ಧವೂ ಸುಲಭವಾಗಿ ಸೋಲೊಪ್ಪಿಕೊಳ್ತಿದ್ದಾರೆ. ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನ ಬಲಾಢ್ಯ ತಂಡ ಅಂತಾ ಕರೆಸಿಕೊಳ್ತಿದ್ದ ರಾಷ್ಟ್ರ ಈಗ ಗೆಲುವು ಕಾಣದೇ ಒದ್ದಾಡ್ತಿದೆ. ಆಟಗಾರರಂತೂ ಗಲ್ಲಿ ಕ್ರಿಕೆಟರ್ಸ್​ಗಿಂತ ಕಳಪೆ ಪ್ರದರ್ಶನ ನೀಡ್ತಿದ್ದಾರೆ. ತಂಡದ ಫೇಲ್ಯೂರ್ ಮುಚ್ಚಿ ಹಾಕೋಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕ್ಯಾಪ್ಟನ್ಸಿ ಬದಲಾವಣೆ ಆಟವಾಡ್ತಿದೆ. ಇದೀಗ ಅದೇ ಪಿಸಿಬಿ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ. ಏನದು ವಿವಾದ? ಕ್ರಿಕೆಟ್ ಲೋಕದಿಂದ ಕಣ್ಮರೆಯಾಗುತ್ತಾ ನೆರೆರಾಷ್ಟ್ರ? ಇನ್ಮುಂದೆ ಇಂಡಿಯಾ ಪಾಕ್ ಪಂದ್ಯಗಳೂ ನಡೆಯೋದಿಲ್ವಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜೋಕರ್‌ ಜಗ್ಗು.. ಧನರಾಜ್‌ ಹೀರೋ – ಹಾರಾಡ್ತಿದ್ದ ಲಾಯರ್‌ ಕಣ್ಣೀರಿಟ್ಟಿದ್ದೇಕೆ?

ಕ್ರಿಕೆಟ್ ಸಾಮ್ರಾಜ್ಯದಲ್ಲಿ ಈಗ ಭಾರತವೇ ಮಹಾರಾಜ. ಈ ವಿಚಾರದಲ್ಲಿ ವೈರಿ ರಾಷ್ಟ್ರ ಪಾಕಿಸ್ತಾನ ಕೂಡ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದೆ. ಹಲವು ಐಸಿಸಿ ಟ್ರೋಫಿಗಳನ್ನೂ ಬೇಟೆಯಾಡಿದೆ. ಹಿಂದೆಲ್ಲಾ ಪಾಕ್ ಟೀಂ ಅಂದ್ರೆ ಎದುರಾಳಿ ಪಡೆ ಅಲರ್ಟ್ ಆಗ್ತಿತ್ತು. ಆದ್ರೆ ಆ ಗತ್ತು, ಸಾಮರ್ಥ್ಯವನ್ನ ಕಳ್ಕೊಂಡು ವರ್ಷಗಳೇ ಉರುಳಿವೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗಳ ಪೈಕಿ ಟಾಪ್ 5ನಲ್ಲಿರೋ ಪಾಕಿಸ್ತಾನ ಇದೀಗ ತನ್ನ ಆಟಗಾರರಿಗೆ ಸಂಭಾವನೆ ಕೊಡೋಕು ಹಣ ಇಲ್ಲದಂಥ ಪರಿಸ್ಥಿತಿಗೆ ತಲುಪಿದೆ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಹೊಣೆ ಹೊತ್ತಿರೋ ಪಾಕಿಸ್ತಾನಕ್ಕೆ ಅಸಲಿ ಸಂಕಷ್ಟ ಎದುರಾಗಿದೆ. ಕ್ರಿಕೆಟ್ ಪ್ರೇಮಿಗಳಿಗಳಿಗೂ ಹತ್ತಾರು ಅನುಮಾನಗಳು ಕಾಡೋಕೆ ಶುರು ಮಾಡಿವೆ.

ಪಾಕ್ ಆಟಗಾರರಿಗಿಲ್ಲ ಸಂಬಳ! 

ಸದಾ ವಿವಾದಗಳಿಂದಲೇ ಸದ್ದು ಮಾಡುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಳೆದ ಕೆಲ ವರ್ಷಗಳಿಂದ ಗೊಂದಲದ ಗೂಡಾಗಿದೆ. ಇದೀಗ ಪಾಕಿಸ್ತಾನ ಕ್ರಿಕೆಟಿಗರಿಗೆ ತಿಂಗಳ ಸಂಬಳವನ್ನೂ ನೀಡಿಲ್ಲ ಅಂತಾ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಪಿಸಿಬಿಯ ಇದೇ ಸ್ಥಿತಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಿಸಿಬಿಯ ಹಣಕಾಸು ನಿರ್ವಹಣೆ ಮತ್ತು ಸ್ಥಿರತೆಯ ಬಗ್ಗೆ ಅನುಮಾನ ಮೂಡಿಸಿದೆ. ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಬುಧವಾರವಷ್ಟೇ ಬಾಬರ್ ಅಜಮ್ ಅವರು ಸೀಮಿತ ಓವರ್‌ಗಳ ಪಾಕಿಸ್ತಾನ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ರು. ಇನ್ನು ಶುಕ್ರವಾರ ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ನಿವೃತ್ತಿ ಹೊಂದಿದ್ದಾರೆ. ಪಾಕ್ ಮಾಧ್ಯಮಗಳ ವರದಿಯ ಪ್ರಕಾರ, ಆಟಗಾರರಿಗೆ ಜುಲೈ ನಿಂದ ಅಕ್ಟೋಬರ್ 2024 ರವರೆಗೆ ಪಿಸಿಬಿ ಸಂಬಳ ನೀಡಲಾಗಿಲ್ಲ. ಶಾಹೀನ್ ಆಫ್ರಿದಿ, ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಅವರಂತಹ ಅನೇಕ ಸ್ಟಾರ್ ಕ್ರಿಕೆಟಿಗರು ಸಂಬಳ ವಿಳಂಬದ ಬಗ್ಗೆ ಹೇಳಿದ್ದಾರೆ. ಆದ್ರೆ ಪಿಸಿಬಿಗೆ ಈ ಬಾಕಿ ಸಂಬಳಗಳನ್ನು ಯಾವಾಗ ನೀಡುವುದು ಎಂಬುದರ ಕುರಿತು ಇನ್ನೂ ಸ್ಪಷ್ಟ ಉತ್ತರವಿಲ್ಲ. ಪಿಸಿಬಿಯ ಈ ವರ್ತನೆ ಆಟಗಾರರ ಟೆನ್ಶನ್ ಹೆಚ್ಚಿಸಿದೆ. ಜೊತೆಗೆ ಮುಂಬರುವ ಚಾಂಪಿಯನ್ ಟ್ರೋಫಿ ಮೇಲೂ ಪ್ರರಿಣಾಮ ಬೀಳುವ ಸಾಧ್ಯತೆಯಿದೆ. ಪಿಸಿಬಿ ಸಂಬಳ ನೀಡದ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ತಂಡದ ಆಟಗಾರರೊಬ್ಬರು, ‘ನಾವು ತಾಳ್ಮೆಯಿಂದ ಇದ್ದೇವೆ. ಆದರೆ ಪಿಸಿಬಿಯಿಂದ ಮುಂದಿನ ಪಾವತಿ ಯಾವಾಗ ಬರುತ್ತದೆ ಎಂದು ತಿಳಿದಿಲ್ಲದಿದ್ದಾಗ, ಆಟದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ’ ಎಂದು ಹೇಳಿದ್ದಾರೆ. ಪಿಸಿಬಿ ಆರ್ಥಿಕ ಸಮಸ್ಯೆಗಳಿಂದಾಗಿ ಆಟಗಾರರಿಗೆ ಸಂಬಳವನ್ನು ನೀಡಲು ಸಾಧ್ಯವಾಗಿಲ್ಲ. ಆಟಗಾರರ ಜರ್ಸಿಯಲ್ಲಿ ಪ್ರಾಯೋಜಕತ್ವದ ಲೋಗೋಗೆ ಸಂಬಂಧಿಸಿದ ಬಾಕಿ ಮೊತ್ತವನ್ನೂ ಪಾವತಿಸಿಲ್ಲ. ಈ ಪರಿಸ್ಥಿತಿ ಪಿಸಿಬಿ ದಿವಾಳಿಯಾಗಿರುವುದನ್ನು ಬೊಟ್ಟು ಮಾಡಿ ತೋರಿಸುತ್ತಿದೆ. ಹೀಗಿರುವಾಗ 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲು ಹೇಗೆ ಸಾಧ್ಯ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಒಟ್ನಲ್ಲಿ ಪ್ರತಿಯೊಂದು ಕ್ರೀಡೆಯಂತೆ ಕ್ರಿಕೆಟ್​ ಕೂಡ ತನ್ನದೇ ಆದ ಆಡಳಿತ ಮಂಡಳಿಯನ್ನು ಹೊಂದಿದೆ. ಇದು ಕ್ರೀಡೆಯ ಹಣಕಾಸು ವ್ಯವಹಾರ ಸೇರಿದಂತೆ ಪಂದ್ಯಾವಳಿಗಳ ಆಯೋಜನೆ, ಆಟಗಾರರ ಒಪ್ಪಂದ, ಪ್ರಸಾರ ಹಕ್ಕುಗಳು ಮತ್ತು ಪ್ರಾಯೋಜಕತ್ವಗಳ ಕಾರ್ಯವನ್ನು ನೋಡಿಕೊಳ್ಳುತ್ತವೆ. ಆದ್ರೀಗ ಸಾಲು ಸಾಲು ಸಮಸ್ಯೆಗಳ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಬದಲಾವಣೆ ಪರ್ವ ಕೂಡ ಜೋರಾಗಿದೆ. ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಸದಸ್ಯ ಮೊಹಮ್ಮದ್ ಯೂಸುಫ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬಾಬರ್ ಅಜಮ್ ಕೂಡ ನಾಯಕತ್ವವನ್ನು ತೊರೆದಿದ್ದರು. ಅಚ್ಚರಿಯ ಸಂಗತಿಯೆಂದರೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಇದೆಲ್ಲ ನಡೆಯುತ್ತಿರುವುದು ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Shwetha M