ಟೀಂ ಇಂಡಿಯಾಗೆ ಪಾಕ್ ಪಂಚಸೂತ್ರ! – ಚಾಂಪಿಯನ್ಸ್ ಟ್ರೋಫಿಗೆ 3+2 ಫಾರ್ಮುಲಾ
ಸೆಮಿಫೈನಲ್, ಫೈನಲ್ ಪಂದ್ಯಕ್ಕೆ ಬಿಗ್ ಟ್ವಿಸ್ಟ್
ಸಾಕಷ್ಟು ಹಗ್ಗಜಗ್ಗಾಟಗಳ ನಡುವೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಒಪ್ಪಿಕೊಂಡಿದೆ. ಐಸಿಸಿ ಮುಂದೆ ಮೂರು ಕಂಡೀಷನ್ಗಳನ್ನ ಇಟ್ಟು ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ಟೀಂ ಇಂಡಿಯಾದ ಪಂದ್ಯಗಳು ದುಬೈಗೆ ಶಿಫ್ಟ್ ಆಗಲಿವೆ. ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ 3+2 ಸೂತ್ರವನ್ನ ಐಸಿಸಿ ಮುಂದಿಟ್ಟಿದೆ. ಅಷ್ಟಕ್ಕೂ ಏನಿದು ಪಂಚ ಸೂತ್ರ? ಸೆಮಿಫೈನಲ್ ಮತ್ತು ಫೈನಲ್ ಮ್ಯಾಚ್ಗಳು ಎಲ್ಲಿ ನಡೆಯುತ್ತೆ? ಪಿಸಿಬಿ ಅಧ್ಯಕ್ಷರಿಗೆ ಪಾಕ್ ಪ್ರಧಾನಿ ಬಹುಪರಾಕ್ ಹೇಳಿದ್ದೇಕೆ? ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹಿರಿಯರ ತೀರ್ಮಾನವೇ ಅಂತಿಮ ಎಂದ ನಿಖಿಲ್ ಕುಮಾರಸ್ವಾಮಿ – ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್?
ಕಳೆದ ಆರು ತಿಂಗಳಿಂದ ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಜಟಾಪಟಿಗೆ ಕೊನೆಗೂ ತೆರೆ ಬಿದ್ದಿದೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ಒಟ್ಟು 8 ತಂಡಗಳು ಪೈಪೋಟಿ ನಡೆಸಲಿವೆ. ಗ್ರೂಪ್ ಎನಲ್ಲಿ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಹಾಗೂ ನ್ಯೂಝಿಲೆಂಡ್ ತಂಡಗಳಿದ್ರೆ ಗ್ರೂಪ್ ಬಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೇ ಅಫ್ಘಾನಿಸ್ತಾನ್ ಟೀಮ್ಗಳಿವೆ. ಇದೀಗ ಹೈಬ್ರಿಡ್ ಮಾದರಿ ಎಂಟ್ರಿ ಕೊಟ್ಟಿರೋದ್ರಿಂದ ಪಾಕಿಸ್ತಾನ 3+2 ಸೂತ್ರದಡಿ ಪಂದ್ಯಗಳನ್ನ ಆಯೋಜನೆ ಮಾಡ್ಬೇಕಿದೆ.
ಚಾಂಪಿಯನ್ಸ್ ಟ್ರೋಫಿ 2025 ಹೈಬ್ರಿಡ್ ಮಾದರಿಯಲ್ಲಿ ನಡೆಯೋದ್ರಿಂದ ಟೀಮ್ ಇಂಡಿಯಾ ಪಂದ್ಯಗಳು ದುಬೈನಲ್ಲಿ ನಡೆದರೆ, ಉಳಿದ ಮ್ಯಾಚ್ಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಇದಕ್ಕಾಗಿ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಸೂಚಿಸಿದೆ. ಈಗಾಗಲೇ ಕರಡು ವೇಳಾಪಟ್ಟಿ ರೆಡಿಯಾಗಿದ್ದು, ಅದರಂತೆ ಭಾರತ ತಂಡದ 3 ಪಂದ್ಯಗಳು ದುಬೈನಲ್ಲಿ ಆಯೋಜನೆಗೊಳ್ಳಲಿವೆ. ಅಂದರೆ ಭಾರತ ತಂಡದ ಲೀಗ್ ಹಂತದ ಮೂರು ಪಂದ್ಯಗಳು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಒಂದು ವೇಳೆ ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಿದರೆ ಆ ಪಂದ್ಯವನ್ನು ಸಹ ದುಬೈನಲ್ಲೇ ಆಡಲಾಗುತ್ತದೆ. ಹಾಗೆಯೇ ಟೀಮ್ ಇಂಡಿಯಾ ಫೈನಲ್ಗೆ ತಲುಪಿದರೆ ಅಂತಿಮ ಹಣಾಹಣಿ ಕೂಡ ದುಬೈನಲ್ಲೇ ಆಯೋಜಿಸಲು ಐಸಿಸಿ ಸೂಚಿಸಿದೆ. ಅದರಂತೆ ಭಾರತ ತಂಡದ 3+2 ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಇನ್ನು ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಬಾಂಗ್ಲಾದೇಶ್, ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ವಿರುದ್ಧ ಪಂದ್ಯಗಳನ್ನಾಡಲಾಗಿದೆ. ಕರಡು ವೇಳಾಪಟ್ಟಿ ಪ್ರಕಾರ ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 23 ರಂದು ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಹಾಗೆಯೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಮಾರ್ಚ್ 1 ರಂದು ನಡೆಯುವ ಸಾಧ್ಯತೆಯಿದೆ. ಈ ಎಲ್ಲಾ ಪಂದ್ಯಗಳಿಗೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಟೀಮ್ ಇಂಡಿಯಾದ ಮೂರು ಲೀಗ್ ಪಂದ್ಯಗಳನ್ನು ಹೊರತುಪಡಿಸಿ ಉಳಿದ ಮ್ಯಾಚ್ಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಅದರಂತೆ ಒಂದು ಸೆಮಿಫೈನಲ್ ಸೇರಿದಂತೆ 10 ಪಂದ್ಯಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಒಂದು ವೇಳೆ ಟೀಮ್ ಇಂಡಿಯಾ ಸೆಮಿಫೈನಲ್ ಹಾಗೂ ಫೈನಲ್ಗೆ ಪ್ರವೇಶಿಸದೇ ಇದ್ದರೆ, ಆ ಪಂದ್ಯಗಳೂ ಕೂಡ ಪಾಕ್ನಲ್ಲೇ ಜರುಗಲಿದೆ. ಈ ಪಂದ್ಯಗಳಿಗಾಗಿ ಪಾಕಿಸ್ತಾನ್ ಮೂರು ಸ್ಟೇಡಿಯಂಗಳನ್ನು ನಿಗದಿ ಮಾಡಿಕೊಂಡಿದ್ದು, ಅದರಂತೆ ಲಾಹೋರ್, ರಾವಲ್ಪಿಂಡಿ ಹಾಗೂ ಕರಾಚಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಮ್ಯಾಚ್ಗಳು ಆಯೋಜನೆಗೊಳ್ಳಲಿದೆ.
ಇನ್ನು ಇದೆಲ್ಲದ್ರ ನಡುವೆ ಹೈಬ್ರಿಡ್ ಮಾದರಿ ಟೂರ್ನಿಗೆ ಕಂಡೀಷನ್ಸ್ ಹಾಕಿದ್ದ ಪಿಸಿಬಿ ಅಧ್ಯಕ್ಷರಿಗೆ ಅಲ್ಲಿನ ಪ್ರಧಾನಿ ಫುಲ್ ಸಪೋರ್ಟ್ ಮಾಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೇ ಪಿಸಿಬಿ ಅಧ್ಯಕ್ಷ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಟೂರ್ನಿಯನ್ನು ಆಯೋಜಿಸುವುದಕ್ಕೆ ಸಂಬಂಧಿಸಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಯಾಕಂದ್ರೆ ಭಾರತ ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲಿ ಆಡುವುದಾಗಿ ಒತ್ತಾಯಿಸಿತ್ತು. ಹಲವು ತಿಂಗಳುಗಳ ಕಾಲ ಸತಾಯಿಸಿದ್ದ ಪಾಕಿಸ್ತಾನ, ಇತ್ತೀಚೆಗೆ ಐಸಿಸಿ ಸಭೆಯಲ್ಲಿ ಕೆಲವು ಷರತ್ತುಗಳೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ನೀಡಿದೆ. 2031ರ ತನಕ ಭಾರತ ಆಯೋಜಿಸುವ ಐಸಿಸಿ ಟೂರ್ನಿಗಳಿಗೆ ನಾವು ಸಹ ಹೈಬ್ರಿಡ್ ಮಾದರಿಯಲ್ಲೇ ಪಂದ್ಯಗಳನ್ನಾಡಲಿದ್ದೇವೆ ಎಂದು ಪಿಸಿಬಿ ಷರತ್ತು ವಿಧಿಸಿದೆ. ಆದರೆ ಪಿಸಿಬಿ, 2027ರ ತನಕ ಸಮ್ಮತಿ ನೀಡಿದ್ದು, ಉಳಿದ್ದದ್ದನ್ನು ಯೋಚಿಸುವುದಾಗಿ ತಿಳಿಸಿದೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಪಾಕ್ ಪ್ರಧಾನಿಯನ್ನು ಭೇಟಿಯಾಗಿರುವ ಪಿಸಿಬಿ ಅಧ್ಯಕ್ಷ ನಖ್ವಿ ಅವರು ಸಭೆಯಲ್ಲಿ ನಡೆದ ಬೆಳವಣಿಗೆಗಳ ಕುರಿತು ವಿವರಿಸಿದ್ದಾರೆ. ಇದೇ ವೇಳೆ ಪಿಸಿಬಿಗೆ ಪ್ರಧಾನಿ ಸಂಪೂರ್ಣ ಬೆಂಬಲ ನೀಡಿದ್ದು, ಹೈಬ್ರಿಡ್ ಮಾದರಿ ಕುರಿತು ನಖ್ವಿ ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದ್ದಾರೆ.