ಲೋಕಸಭಾ ಚುನಾವಣೆಗೆ ಕಾವೇರಿದ ಮಂಡ್ಯ ರಣಕಣ – ಪದ್ಮಾವತಿ ರೀ ಎಂಟ್ರಿ? ಗೌಡ್ತಿ ಕಥೆಯೇನು?

ಲೋಕಸಭಾ ಚುನಾವಣೆಗೆ ಕಾವೇರಿದ ಮಂಡ್ಯ ರಣಕಣ – ಪದ್ಮಾವತಿ ರೀ ಎಂಟ್ರಿ? ಗೌಡ್ತಿ ಕಥೆಯೇನು?

ಲೋಕಸಭಾ ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗ್ಲೇ ಮಂಡ್ಯ ಅಖಾಡ ರಣರಣ ಅಂತಿದೆ. ಘಟಾನುಘಟಿಗಳೇ ಅಭ್ಯರ್ಥಿ ರೇಸ್​ನಲ್ಲಿದ್ದು ಮಹಾಕಾಳಗಕ್ಕೆ ಮುನ್ನುಡಿ ಬರೆದಂತಿದೆ. ಈಗಾಗ್ಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋ ಕುಮಾರಣ್ಣ ಮಂಡ್ಯ ನಮಗೇ ಬೇಕು ಅಂತಾ ಹಠಕ್ಕೆ ಬಿದ್ದಿದ್ದಾರೆ. ಪುತ್ರ ನಿಖಿಲ್​ ಕುಮಾರ್​ರನ್ನ ಸೋಲಿಸಿದ ಸುಮಲತಾ ಅಂಬರೀಶ್ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಹವಣಿಸ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಸುಮಲತಾ ಸ್ವಾಭಿಮಾನದ ಹೆಸ್ರಲ್ಲಿ ಮತ್ತೊಮ್ಮೆ ಸಂಸದೆಯಾಗೋ ತವಕದಲ್ಲಿದ್ದಾರೆ. ಇಷ್ಟೆಲ್ಲಾ ಕಸರತ್ತುಗಳ ನಡುವೆ ಮಂಡ್ಯದ ಅಖಾಡಕ್ಕೆ ಮಾಜಿ ಸಂಸದೆ, ನಟಿ ರಮ್ಯ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಧುತ್ತನೆ ಎದ್ದು ಕೂತಿದೆ. ಹಾಗಂತ ಇದೇಣು ಕಾಗಕ್ಕ ಗೂಬಕ್ಕನ ಕಥೆ ಅಲ್ಲ. ಖುದ್ದು ಕಾಂಗ್ರೆಸ್ ಶಾಸಕರೇ ರಮ್ಯಾ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕನ್ನಡದ ಪದ್ಮಾವತಿ ಮತ್ತೊಮ್ಮೆ ಪಾಲಿಟಿಕ್ಸ್​ಗೆ ಬರೋದು ಫಿಕ್ಸ್ ಅಂತಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ತಾರಾ ಕುಮಾರಣ್ಣ? – ಹೇಗಿದೆ ಮಂಡ್ಯ ರಾಜಕೀಯ..!? 

ಮಂಡ್ಯ ಕ್ಷೇತ್ರದಿಂದಲೇ ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಧುಮುಕಲು ರಮ್ಯಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ.  ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ಅವ್ರೇ ಖುದ್ದು ಈ ಮಾಹಿತಿ ನೀಡಿದ್ದಾರೆ. ನಟಿ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಮ್ಯಾ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ನಾನು ಸಂಪೂರ್ಣವಾಗಿ ಸಪೋರ್ಟ್ ಮಾಡ್ತೀನಿ. ಹಾಗೇ ಮಾಜಿ ಸಿಎಂ ಎಸ್.​​ಎಂ ಕೃಷ್ಣ ಅವರ ಪುತ್ರಿ ಶಾಂಭವಿ ಸೇರಿದಂತೆ ಹಲವರು ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ನಮ್ಮಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಬೇರೆ ಪಕ್ಷದಿಂದ ಅಭ್ಯರ್ಥಿಯನ್ನು ಕರೆತರುವ ಪ್ರಮೇಯವೇ ಬರಲ್ಲ ಅಂದಿದ್ದಾರೆ.

ಕಾಂಗ್ರೆಸ್ ನಾಯಕರೇನೋ ಹೀಗೆ ಹೇಳ್ತಿದ್ದಾರೆ. ಆದ್ರೆ ಈಗಾಗ್ಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋ ಕುಮಾರಣ್ಣ ಹೇಗಾದ್ರೂ ಮಾಡಿ ಮಂಡ್ಯ ಕ್ಷೇತ್ರವನ್ನ ತಮ್ಮ ಬಳಿಯೇ ಉಳಿಸಿಕೊಳ್ಳೋಕೆ ನಾನಾ ಕಸರತ್ತು ಮಾಡ್ತಿದ್ದಾರೆ. ಅತ್ತ ಬಿಜೆಪಿ ಹೈಕಮಾಂಡ್​ ಹೆಚ್.ಡಿ ಕುಮಾರಸ್ವಾಮಿಯವ್ರೇ ನೀವೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ. ನಮ್ಮ ಸರ್ಕಾರ ಬಂದ್ರೆ ನಿಮ್ಮನ್ನೂ ಕೇಂದ್ರ ಸಚಿವ ಮಾಡ್ತೀವಿ ಅಂತಾ ಆಫರ್ ಕೊಟ್ಟಿದ್ದಾರೆ. ಆದ್ರೆ ಕುಮಾರಣ್ಣ ಮಾತ್ರ ಮತ್ತೊಮ್ಮೆ ನಿಖಿಲ್​ರನ್ನೇ ಕಣಕ್ಕಿಸೋಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಅತ್ತ ಸಂಸದೆ ಸುಮಲತಾ ನಾನು ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಹಾಗೇನಾದ್ರೂ ಟಿಕೆಟ್ ಸಿಕ್ಕಿಲ್ಲ ಅಂದ್ರೆ ಪಕ್ಷೇತರವಾಗಿಯಾದ್ರೂ ಕಣಕ್ಕಿಳಿಯೋದು ಪಕ್ಕಾ ಅಂದಿದ್ದಾರೆ. ಹೀಗೆ ಕುಮಾರಣ್ಣ ವರ್ಸಸ್ ಸುಮಲತಾ ಅನ್ನುತ್ತಿರುವಾಗ್ಲೇ ರಮ್ಯ ಕೂಡ ನಾನು ರೇಸ್​ಗೆ ರೆಡಿ ಅನ್ನುತ್ತಿದ್ದಾರೆ. ಆದ್ರೆ ರಮ್ಯರ ಎಂಟ್ರಿಗೆ ಮಂಡ್ಯ ನಾಯಕರು ಒಪ್ಪಿಕೊಳ್ಳೋದು ಅಷ್ಟು ಸುಲಭವಿಲ್ಲ.

ರಮ್ಯ ರೀ ಎಂಟ್ರಿಗೆ ಪರ ವಿರೋಧ!

2014ರ ಲೋಕಸಭೆ ಬೈ ಎಲೆಕ್ಷನ್​ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ರಮ್ಯ ಆರು ತಿಂಗಳ ಅವಧಿಗೆ ಸಂಸದೆಯಾಗಿದ್ದರು. ಇದೀಗ ಮತ್ತೊಮ್ಮೆ ಕ್ಷೇತ್ರಕ್ಕೆ ಕರೆತರುವ ಪ್ರಯತ್ನಗಳು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿವೆ. ಆದರೆ, ರಮ್ಯ ಕ್ಷೇತ್ರಕ್ಕೆ ವಾಪಸ್ ಬರುವುದು ಸ್ಥಳೀಯ ನಾಯಕರಿಗೆ ಇಷ್ಟವಿಲ್ಲ. ಸಿನಿಮಾ ನಟರು ಕ್ಷೇತ್ರಕ್ಕೆ ಬೇಡ ಎಂಬ ನಿಲುವಿಗೆ ಕಾಂಗ್ರೆಸ್ ನಾಯಕರು ಅಂಟಿಕೊಂಡಿದ್ದಾರೆ. ಒಮ್ಮೆ ರಮ್ಯಾ ಜಿಲ್ಲೆಗೆ ಬಂದು ಚುನಾವಣೆಯಲ್ಲಿ ಗೆದ್ದರೆ ರಾಜಕೀಯವಾಗಿ ವರಿಷ್ಠರಿಂದ ಕಡೆಗಣನೆಗೆ ಒಳಗಾಗುತ್ತೇವೆಂಬ ಭಯವೂ ಸ್ಥಳೀಯ ನಾಯಕರನ್ನು ಕಾಡುತ್ತಿದೆ. ಹಾಗೂ ರಮ್ಯ ಚುನಾವಣೆ ಬಂದಾಗ ಮಾತ್ರ ಬರ್ತಾರೆ. ಉಳಿದಂತೆ ಸಕ್ರಿಯ ರಾಜಕಾರಣದಲ್ಲೂ ಇರಲ್ಲ. ಮಂಡ್ಯದತ್ತಲೂ ತಲೆ ಹಾಕಲ್ಲ ಅನ್ನೋ ಆರೋಪವೂ ಇದೆ.

ರಮ್ಯ ಸ್ಪರ್ಧೆಗೆ ವಿರೋಧ ಇದ್ರೂ ಕೂಡ ಮಂಡ್ಯ ಲೋಕಸಭಾ ಚುನಾವಣೆಯನ್ನು ಎದುರಿಸಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳು ಸಿಗುತ್ತಿಲ್ಲ. ಸ್ಥಳೀಯವಾಗಿ ಹಲವು ಆಕಾಂಕ್ಷಿತರು ಸ್ಪರ್ಧೆಗೆ ತಾವು ಸಿದ್ಧ ಎಂದು ಹೇಳುತ್ತಿದ್ದರೂ ವರ್ಚಸ್ಸು ಇರುವವರು ಯಾರೂ ಇಲ್ಲ. ಕೊನೆಗೆ ಸಮರ್ಥ ಅಭ್ಯರ್ಥಿ ಸಿಗದಿದ್ದರೆ ಸಚಿವ ಎನ್.ಚಲುವರಾಯಸ್ವಾಮಿ ಅವರೇ ಅಖಾಡ ಪ್ರವೇಶಿಸುವ ಅನಿವಾರ್ಯತೆ ಎದುರಾಗಬಹುದು. ಆದ್ರೆ ಚಲುವರಾಯಸ್ವಾಮಿ ಮಾತ್ರ ಚುನಾವಣೆ ಎದುರಿಸುವ ಸ್ಥಿತಿಯಲ್ಲಿಲ್ಲ. ಯಾಕಂದ್ರೆ ಫಲಿತಾಂಶದಲ್ಲಿ  ವ್ಯತ್ಯಾಸವಾದರೆ ಸಾಕಷ್ಟು ಮುಜುಗರ, ರಾಜಕೀಯ ಹಿನ್ನಡೆ, ಸಚಿವ ಸ್ಥಾನ ಕಳೆದುಕೊಂಡು ಎಲ್ಲರ ನಿರ್ಲಕ್ಷ್ಯಕ್ಕೆ ಗುರಿಯಾಗಬೇಕಾಗುತ್ತದೆ. ಇಲ್ಲಿ ಅಭ್ಯರ್ಥಿ ಯಾರೇ ಆದ್ರೂ ಕೂಡ ಕಾಂಗ್ರೆಸ್​ಗೆ ಹೆಚ್ಚಿನ ಒಲವಿದೆ. 2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಸೋತು ತನ್ನ ನೆಲೆಯನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್ 2023ರ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಈಗ ಇತಿಹಾಸ. ಆದ್ರೆ ವಿಧಾನಸಭೆ ಚುನಾವಣೆಯ ತಂತ್ರಗಳು ಲೋಕಸಭೆಗೆ ವರ್ಕೌಟ್ ಆಗೋದು ಕಷ್ಟ. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ರೂ ಕೂಡ ಲೋಕಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನ ನೋಡಿಕೊಂಡು ಮತ ಹಾಕ್ತಾರೆ. ಹೀಗಾಗಿ ಕುಮಾರಣ್ಣನ ಗೇಮ್​ಪ್ಲ್ಯಾನ್ ಗೆಲ್ಲುತ್ತೋ, ಸುಮಲತಾ ಸ್ವಾಭಿಮಾನಕ್ಕೆ ಸಕ್ಸಸ್ ಸಿಗುತ್ತೋ, ಅಥವಾ ಅಚ್ಚರಿಯ ಅಭ್ಯರ್ಥಿಯನ್ನ ಅಖಾಡಕ್ಕಿಳಿಸಿ ಕಾಂಗ್ರೆಸ್ ಗೆದ್ದು ಬೀಗುತ್ತಾ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

 

Sulekha